ಸಾಂದರ್ಭಿಕ ಚಿತ್ರ 
ವಿದೇಶ

ಪಶ್ಚಿಮ ಏಷ್ಯಾದಲ್ಲಿ ಮುಂದುವರೆದ ಸಂಘರ್ಷ: ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ | Iran retaliates

ಟೆಹ್ರಾನ್​: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷ ಮುಂದುವರೆದಿದ್ದು, ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, ಭಾನುವಾರ(ಜೂ. 28) ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ(Iran retaliates) ಎಂದು ವರದಿಯಾಗಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC), ಅಮೆರಿಕ ತನ್ನ ಭೂಪ್ರದೇಶದ ಕ್ಷಿಪಣಿ ನೆಲೆಗಳು, ಡ್ರೋನ್ ಗೋದಾಮುಗಳು ಮತ್ತು ಕರಾವಳಿ ರಾಡಾರ್ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ ಎನ್ನಲಾಗಿದೆ. 
ಇನ್ನೂ ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ಕುವೈತ್ ವಾಯು ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿದೆ. ಅದೇ ರೀತಿ ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಸುತ್ತಮುತ್ತ ಭಾರಿ ಅವ್ಯವಸ್ಥೆ ಉಂಟಾಗಿದೆ ಎನ್ನಲಾಗಿದೆ. ಆದರೆ ಇರಾನ್​ ದಾಳಿಯಲ್ಲಿ ಆದ ನಷ್ಟದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇನ್ನೂ ಅಮೆರಿಕಾಗೆ ಕಠಿಣ ಎಚ್ಚರಿಕೆ ನೀಡಿರುವ ಇರಾನ್, ಮೊದಲು ಅಮೆರಿಕ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹೇಳಿದ್ದು, ಮುಂಬರುವ ದಿನಗಳಲ್ಲಿ ಮಧ್ಯ ಏಷ್ಯಾದಲ್ಲಿರುವ ಅಮೆರಿಕ ಸೇನಾ ನೆಲೆಗಳು ನರಕವನ್ನು ನೋಡುತ್ತವೆ ಎಂದು ಎಚ್ಚರಿಸಿದೆ. ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ತನ್ನ ನಿಯಮಗಳನ್ನು ಪಾಲಿಸದ ಹಡಗುಗಳ ವಿರುದ್ಧ ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅದು ಹೇಳಿದೆ. 
ಹಾರ್ಮುಜ್ ಜಲಸಂಧಿಯಲ್ಲಿ ಪ್ರಯಾಣಿಸುತ್ತಿದ್ದ 'ಕಿಕು' ಎಂಬ ಅಂತರರಾಷ್ಟ್ರೀಯ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಪ್ರತಿಯಾಗಿ ಅಮೆರಿಕ ಸೇನೆ ಪ್ರತಿ ದಾಳಿ ನಡೆಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಇರಾನ್ ಒಪ್ಪಂದಗಳನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ, ಇರಾನ್ ಇನ್ನು ಮುಂದೆ ವಿಶ್ವ ಭೂಪಟದಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಅದರ ಕಥೆಯನ್ನು ಮಿಲಿಟರಿ ರೀತಿಯಲ್ಲೇ ಮುಗಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು (ಏಜೆನ್ಸೀಸ್).