ನೆರೆರಾಷ್ಟ್ರಗಳ ನಡುವೆ ಕೋಲ್ಡ್ ವಾರ್! ಪಾಕಿಸ್ತಾನದ ಡಬಲ್ ಗೇಮ್ ಬಯಲು ಮಾಡಿದ ಇರಾನ್: ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ನೇರ ವಾಗ್ದಾಳಿ!
ಟೆಹ್ರಾನ್: ದಶಕಗಳಿಂದ ನೆರೆಹೊರೆಯ ರಾಷ್ಟ್ರಗಳಾಗಿದ್ದರೂ ಶೀತಲ ಸಮರದ ಪರಿಸ್ಥಿತಿ ಎದುರಿಸುತ್ತಿದ್ದ ಇರಾನ್ ಮತ್ತು ಪಾಕಿಸ್ತಾನದ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನಕಾರನ ಪಾತ್ರ ವಹಿಸುತ್ತಿರುವ ಪಾಕಿಸ್ತಾನ, ವಾಸ್ತವದಲ್ಲಿ ಡಬಲ್ ಗೇಮ್ ಆಡುತ್ತಿದೆ ಎಂದು ಇರಾನ್(Iran slams Asim Munir) ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಬಹಿರಂಗವಾಗಿ ಕಿಡಿಕಾರಿವೆ. ವಿಶೇಷವೆಂದರೆ, ಇರಾನ್ ಮೊದಲ ಬಾರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿರುವುದು ಜಾಗತಿಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ದ್ವಂದ್ವ ನೀತಿಯ ಆರೋಪ: ಇರಾನ್ ಆಕ್ರೋಶಕ್ಕೆ ಕಾರಣವೇನು..?
ಇತ್ತೀಚೆಗೆ ಇರಾನ್‌ನ ದೂರದರ್ಶನದಲ್ಲಿ ನಡೆದ ಚರ್ಚೆಯೊಂದರಲ್ಲಿ, ಪಾಕಿಸ್ತಾನದ ಮಧ್ಯಸ್ಥಿಕೆಯು ಕೇವಲ ಒಂದು ನಾಟಕ ಎಂದು ಇರಾನ್ ವಿಶ್ಲೇಷಕರು ಬಣ್ಣಿಸಿದ್ದಾರೆ. ಇರಾನ್ ಪ್ರಕಾರ, ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್ ಒಂದು ಔಪಚಾರಿಕ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ವಾಷಿಂಗ್ಟನ್‌ಗೆ ರವಾನಿಸಿತ್ತು. ಆದರೆ, ಪಾಕ್ ಇರಾನ್‌ನ ಹಿತಾಸಕ್ತಿಯನ್ನು ಕಾಪಾಡುವ ಬದಲು ಅಮೆರಿಕದ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಟೆಹ್ರಾನ್ ವಾದವಾಗಿದೆ.
ಇರಾನ್ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲದಲ್ಲೇ ಒಪ್ಪಿಕೊಳ್ಳಲಾಗಿದ್ದ 10-ಅಂಶಗಳನ್ನು ಮುಂದಿಟ್ಟುಕೊಂಡು ಮಾತುಕತೆಗೆ ಸಿದ್ಧವಾಗಿತ್ತು. ಆದರೆ ಈಗ ಪಾಕಿಸ್ತಾನವು ಆ ಅಂಶಗಳನ್ನು ಬದಿಗೊತ್ತಿ, ಅಮೆರಿಕದ ಹೊಸ 15 ರಿಂದ 16 ಕಠಿಣ ಬೇಡಿಕೆಗಳನ್ನು ಇರಾನ್ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಇರಾನ್ ಆರೋಪಿಸಿದೆ.
ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮೇಲೆ ಗುರಿ
ಪಾಕಿಸ್ತಾನದ ಆಡಳಿತದಲ್ಲಿ ಸೇನೆಯೇ ಅಂತಿಮ ನಿರ್ಧಾರ ಕೈಗೊಳ್ಳುವ ಶಕ್ತಿ ಎಂಬುದು ಜಗತ್ತಿಗೇ ತಿಳಿದಿದೆ. ಇದನ್ನು ಮನಗಂಡ ಇರಾನ್ ಮಾಧ್ಯಮಗಳು, ಪಾಕಿಸ್ತಾನದ ಈ ಯು-ಟರ್ನ್ ನೀತಿಗೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೇ ಕಾರಣ ಎಂದು ನೇರವಾಗಿ ಬೆರಳು ಮಾಡಿ ತೋರಿಸಿವೆ. ಪಾಕಿಸ್ತಾನವು ಅಮೆರಿಕದ ಆರ್ಥಿಕ ಸಹಾಯ ಮತ್ತು ಬೆಂಬಲಕ್ಕಾಗಿ ಇರಾನ್‌ನ ಚೌಕಾಶಿ ಸಾಮರ್ಥ್ಯವನ್ನು ಕುಂದಿಸುತ್ತಿದೆ ಎಂದು ತೇಹ್ರಾನ್ ವಾದಿಸುತ್ತಿದೆ.
ಸ್ಥಗಿತಗೊಂಡಿರುವ ಯುಎಸ್-ಇರಾನ್ ಮಾತುಕತೆ
ಅತ್ತ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಸಂಪೂರ್ಣವಾಗಿ ಹಳಿ ತಪ್ಪಿವೆ. ಅಮೆರಿಕವು ಇತ್ತೀಚೆಗೆ ಕದನ ವಿರಾಮವನ್ನು ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಿದ್ದರೂ, ಇರಾನ್‌ನ ಬಂದರುಗಳ ಮೇಲೆ ಹೇರಲಾಗಿರುವ ನೌಕಾ ದಿಗ್ಬಂಧನವನ್ನು ಮಾತ್ರ ತೆರವುಗೊಳಿಸಿಲ್ಲ. ಇರಾನ್ ಇದನ್ನು ಯುದ್ಧದ ಘೋಷಣೆ ಎಂದು ಕರೆದಿದೆ.
ಜಾಗತಿಕ ಪರಿಣಾಮ ಮತ್ತು ವಿಶ್ಲೇಷಣೆ
ಪಾಕಿಸ್ತಾನವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಅಮೆರಿಕದ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಇನ್ನೊಂದೆಡೆ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಬಾಂಧವ್ಯ ಸುಧಾರಿಸುತ್ತಿರುವಾಗ, ಪಾಕ್ ಇರಾನ್‌ನಿಂದ ದೂರ ಸರಿಯುತ್ತಿರುವುದು ಆಶ್ಚರ್ಯಕರವಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಸಮಾಧಾನ ತರಬೇಕಿದ್ದ ಸೇತುವೆಯಾಗಬೇಕಿದ್ದ ಪಾಕಿಸ್ತಾನ, ಈಗ ತಾನೇ ಒಂದು ಅಡಚಣೆಯಾಗಿ ಪರಿಣಮಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಇರಾನ್ ಮಾಧ್ಯಮಗಳ ಈ ಬಹಿರಂಗ ದಾಳಿಯು ಪಾಕಿಸ್ತಾನದ ವಿದೇಶಾಂಗ ನೀತಿಯ ವಿಫಲತೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಸಿಮ್ ಮುನೀರ್ ಅವರ ನಾಯಕತ್ವದಲ್ಲಿ ಪಾಕಿಸ್ತಾನ ಸೇನೆಯು ಅಮೆರಿಕಕ್ಕೆ ಅತಿ ಹತ್ತಿರವಾಗುತ್ತಿರುವುದು ಇರಾನ್‌ನ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
ಒಂದು ವೇಳೆ ಪಾಕಿಸ್ತಾನವು ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಅಥವಾ ಇರಾನ್‌ನ ವಿಶ್ವಾಸವನ್ನು ಮರಳಿ ಗಳಿಸದಿದ್ದರೆ, ಅಫ್ಘಾನಿಸ್ತಾನದ ಗಡಿಯಂತೆ ಇರಾನ್ ಗಡಿಯಲ್ಲೂ ಪಾಕಿಸ್ತಾನಕ್ಕೆ ಭದ್ರತಾ ಸವಾಲುಗಳು ಎದುರಾಗಬಹುದು. ಅತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಇರುವಾಗಲೇ, ಇರಾನ್ ಮತ್ತು ಪಾಕಿಸ್ತಾನದ ನಡುವಿನ ಈ ವಾಗ್ವಾದವು ಇಡೀ ಏಷ್ಯಾ ಖಂಡದ ಭದ್ರತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್).