Netanyahu  
ವಿದೇಶ

ನಾನು ಸತ್ತಿಲ್ಲ, ಕಾಫಿಗಾಗಿ ಕಾಯುತ್ತಿದ್ದೇನೆ! ಎಐ ವದಂತಿಗಳಿಗೆ ಮತ್ತೊಂದು ವಿಡಿಯೋ ಮೂಲಕವೇ ನೆತನ್ಯಾಹು ಖಡಕ್ ಉತ್ತರ! | Netanyahu

ಜೆರುಸಲೆಮ್: ಕಳೆದ 17 ದಿನಗಳಿಂದ ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವೆ ಭೀಕರ ಸಂಘರ್ಷ ನಡೆಯುತ್ತಿದ್ದು, ಇಡೀ ಮಧ್ಯಪ್ರಾಚ್ಯ ಬೆಂಕಿಯ ಉಂಡೆಯಂತಾಗಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Netanyahu) ಅವರ ಸಾವಿನ ಕುರಿತು ಹರಡಿದ್ದ ವದಂತಿಗಳು ಮತ್ತು ಅವರ ವಿಡಿಯೋಗಳು 'ಕೃತಕ ಬುದ್ಧಿಮತ್ತೆ' (AI) ಇಂದ ಸೃಷ್ಟಿಯಾದವು ಎಂಬ ಆರೋಪಗಳಿಗೆ ಸ್ವತಃ ನೆತನ್ಯಾಹು ವಿಡಿಯೋ ಬಿಡುಗಡೆ ಮಾಡುವ ಮೂಲಕ ತೆರೆ ಎಳೆದಿದ್ದಾರೆ.
ಕೆಲವು ದಿನಗಳ ಹಿಂದೆ ನೆತನ್ಯಾಹು ಅವರ ಪತ್ರಿಕಾಗೋಷ್ಠಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವರ ಒಂದು ಕೈನಲ್ಲಿ ಆರು ಬೆರಳುಗಳು ಕಾಣಿಸಿಕೊಂಡಿದ್ದವು. ಇದನ್ನು ಗಮನಿಸಿದ ಎಲೋನ್ ಮಸ್ಕ್ ಅವರ ಎಐ ಚಾಟ್‌ಬಾಟ್ 'ಗ್ರೋಕ್' (Grok), ಈ ವಿಡಿಯೋ ಎಐನಿಂದ ಸೃಷ್ಟಿಸಲ್ಪಟ್ಟಿದೆ ಎಂದು ಲೇಬಲ್ ಮಾಡಿತ್ತು. ಇದು ನೆತನ್ಯಾಹು ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಸಾವಿರಾರು ಅನುಮಾನಗಳಿಗೆ ಕಾರಣವಾಯಿತು.

ಬೆರಳುಗಳನ್ನು ಎಣಿಸಿ ನೋಡಿ: ನೆತನ್ಯಾಹು ವ್ಯಂಗ್ಯ

ಈ ಎಲ್ಲಾ ವದಂತಿಗಳಿಗೆ ಉತ್ತರ ನೀಡಲು ನೆತನ್ಯಾಹು ಅವರು ಜೆರುಸಲೆಮ್ ಹಿಲ್ಸ್‌ನ 'ಸತಾಫ್' ಕೆಫೆಯಲ್ಲಿ ಕಾಫಿ ಆರ್ಡರ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. "ನಾನು ಸತ್ತಿದ್ದೇನೆ... ಕಾಫಿಗಾಗಿ (I am dead... for coffee)" ಎಂದು ಹೀಬ್ರೂ ಭಾಷೆಯ ಪದಪ್ರಯೋಗದ ಮೂಲಕ ತಮಾಷೆ ಮಾಡಿದ ಅವರು, ಕ್ಯಾಮೆರಾ ಮುಂದೆ ತಮ್ಮ ಎರಡೂ ಕೈಗಳನ್ನು ಎತ್ತಿ ತೋರಿಸಿದ್ದಾರೆ. "ನನ್ನ ಬೆರಳುಗಳನ್ನು ಎಣಿಸಲು ಬಯಸುತ್ತೀರಾ? ಇಲ್ಲಿ ನೋಡಿ... ಇಲ್ಲೂ ನೋಡಿ. ಎಲ್ಲವೂ ಸರಿಯಾಗಿದೆ," ಎಂದು ಹೇಳುವ ಮೂಲಕ ಆರು ಬೆರಳುಗಳ ವದಂತಿಯನ್ನು ತಳ್ಳಿಹಾಕಿದ್ದಾರೆ.
ಜನರೊಂದಿಗೆ ಸಂವಾದ 
ಇನ್ನೊಂದು ಹೊಸ ವಿಡಿಯೋದಲ್ಲಿ ನೆತನ್ಯಾಹು ಜೆರುಸಲೆಮ್‌ನ ಬೀದಿಗಳಲ್ಲಿ ಸಾರ್ವಜನಿಕರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ಓಡಾಡುತ್ತಿದ್ದ ನಾಯಿಯೊಂದನ್ನು ಕಂಡು, "ಇದು ಯಾವ ತಳಿ?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮಹಿಳೆಯೊಬ್ಬರು "ಕಾನನೈಟ್-ಇಸ್ರೇಲಿ (Canaanite-Israeli)" ಎಂದು ಉತ್ತರಿಸಿದ್ದಾರೆ. ಇಸ್ರೇಲ್‌ನ ರಾಷ್ಟ್ರೀಯ ನಾಯಿ ತಳಿ ಎಂದು ಗುರುತಿಸಲ್ಪಟ್ಟ ಈ ನಾಯಿಯನ್ನು ಶ್ಲಾಘಿಸಿದ ಅವರು, "ಒಳ್ಳೆಯದು, ಎಲ್ಲರಿಗೂ ಸ್ವಲ್ಪ ಹೊರಗಿನ ಗಾಳಿ ಬೇಕು. ಆದರೆ ಹತ್ತಿರದಲ್ಲೇ ಸುರಕ್ಷಿತ ಸ್ಥಳ (Protected Space) ಇರುವುದನ್ನು ಖಚಿತಪಡಿಸಿಕೊಳ್ಳಿ," ಎಂದು ಯುದ್ಧದ ಮುನ್ನೆಚ್ಚರಿಕೆ ನೀಡಿದ್ದಾರೆ.

ಯುದ್ಧದ ಭೀಕರತೆ

ಇಸ್ರೇಲ್ ಮತ್ತು ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ ಸಂಘರ್ಷ ತೀವ್ರಗೊಂಡಿದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ 86 ವರ್ಷದ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇದು ಇಡೀ ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ನೆತನ್ಯಾಹು ಅವರ ಪ್ರತಿಯೊಂದು ನಡೆ ಕೂಡ ಜಾಗತಿಕವಾಗಿ ಕುತೂಹಲ ಕೆರಳಿಸಿದೆ,(ಏಜೆನ್ಸೀಸ್​).