ವಿಷ್ಯದಲ್ಲಿ ಮಾನವನಿಗೆ ಉಳಿಗಾಲವಿಲ್ಲ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಜ್ವಲಂತ ಸಾಕ್ಷಿ ಇನ್ನೊಂದಿಲ್ಲ 
ವಿದೇಶ

ಭವಿಷ್ಯದಲ್ಲಿ ಮಾನವನಿಗೆ ಉಳಿಗಾಲವಿಲ್ಲ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಜ್ವಲಂತ ಸಾಕ್ಷಿ ಇನ್ನೊಂದಿಲ್ಲ! Humanoid Robots

ಪ್ರಮುಖ ಮುಖ್ಯಾಂಶಗಳು

  • ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್​ ಯುಗದಲ್ಲಿ ಎಐ ಜತೆ ಜತೆಯಲ್ಲೇ ರೋಬೋಟ್​ಗಳ ಅಸ್ತಿತ್ವ
  • ಚೀನಾದ ಹ್ಯೂಮನಾಯ್ಡ್ ರೋಬೋಟ್​ಗಳಿಂದ ಮಾರ್ಷಲ್ ಆರ್ಟ್ಸ್ ಶೋ ಎಂದರೆ ನಂಬುತ್ತೀರಾ?
  • ಅಮೆರಿಕಾಸ್ ಗಾಟ್ ಟ್ಯಾಲೆಂಟ್‌ ಕಾರ್ಯಕ್ರಮದಲ್ಲಿ ಮನುಷ್ಯರಂತೆ ವೇಗವಾಗಿ ಚಲಿಸಿದ ರೋಬೋಗಳು
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು
Humanoid Robots: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್​ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜತೆ ಜತೆಯಲ್ಲೇ ರೋಬೋಟ್​ಗಳ ಅಸ್ತಿತ್ವ ಜೋರಾಗಿದೆ ಎಂಬುದಕ್ಕೆ ಈಗಾಗಲೇ ನಮ್ಮ ಮುಂದೆ ಹಲವು ನಿದರ್ಶನಗಳಿವೆ. ಇತ್ತೀಚೆಗಷ್ಟೇ, ಅಥ್ಲೆಟಿಕ್ಸ್​ ಟ್ರ್ಯಾಕ್​ನಲ್ಲಿ ಮಾನವರಂತೆ ವೇಗದಲ್ಲಿ ಓಡಿ ಮಿಂಚಿದ ಹ್ಯೂಮನಾಯ್ಡ್ ರೋಬೋಟ್‌ಗಳು, ನೋಡುಗರನ್ನು ಅಕ್ಷರಶಃ ನಿಬ್ಬೆರಗಾಗಿಸಿತ್ತು. ಈ ಸಾಲಿಗೆ ಈಗ ಮತ್ತೊಂದು ವಿಡಿಯೋ ಜ್ವಲಂತ ಸಾಕ್ಷಿ ಎನ್ನುವಂತೆ ನೆಟ್ಟಿಗರ ಹುಬ್ಬೇರಿಸಿದೆ.
ಯುನಿಟ್ರಿಯ ಜಿ1 ಹ್ಯೂಮನಾಯ್ಡ್ ರೋಬೋಟ್‌ಗಳು, ಚೀನೀ ಮೂಲದ ಡಾನ್ಸರ್​ ವು ಯುಫೆಯಿ ಅವರೊಟ್ಟಿಗೆ ಅಮೆರಿಕದ ಜನಪ್ರಿಯ ಟ್ಯಾಲೆಂಟ್​ ಶೋ 'ಅಮೆರಿಕಾಸ್ ಗಾಟ್ ಟ್ಯಾಲೆಂಟ್' ವೇದಿಕೆಯಲ್ಲಿ ನಡೆಸಿದ ಫೈಟಿಂಗ್​ ಕೌಶಲ್ಯದ ಪ್ರದರ್ಶನವು ಪ್ರೇಕ್ಷಕರನ್ನು ಕೆಲ ನಿಮಿಷಗಳ ಕಾಲ ಗಪ್​ಚುಪ್​ ಆಗಿರುವಂತೆ ಮಾಡಿತು. ಡಾನ್ಸ್​, ಫೈಟಿಂಗ್ ಸ್ಕಿಲ್​ ಮತ್ತು ರೊಬೊಟಿಕ್ಸ್ ಅನ್ನು ಒಟ್ಟಾಗಿ ರೋಬೋಗಳಿಗೆ ಕೋರಿಯೋಗ್ರಫಿ ಮಾಡಿದ ವು ಅವರು, ಅಷ್ಟು ರೋಬೋಗಳ ಜತೆಗೆ ಅದ್ಭುತ ಪ್ರದರ್ಶನ ನೀಡಿದ್ದು ವಿಶೇಷ.
ಈ ಪ್ರದರ್ಶನದಲ್ಲಿ, ಯುನಿಟ್ರಿ ಜಿ1 ರೋಬೋಟ್‌ಗಳು ಮಾನವ ಕಲಾವಿದರೊಂದಿಗೆ ಸಮನ್ವಯದಿಂದ ನಡೆದುಕೊಂಡಿವೆ. ನೋಡಲು ಮಾತ್ರ ರೋಬೋಗಳಂತೆ ಕಂಡರೂ, ಇನ್ನೆಲ್ಲವೂ ಥೇಟ್​ ಮಾನವರಂತೆಯೇ ಎನ್ನುವಂತೆ ಪ್ರದರ್ಶನ ಮಾಡಿ ತೋರಿಸಿವೆ. ಕಿಕ್​, ಪಂಚ್‌ಗಳು, ಫ್ಲಿಪ್‌ ಮತ್ತು ಒಂದೇ ಲಯದಲ್ಲಿ ವಿವಿಧ ಸ್ಟೈಲ್​ಗಳನ್ನು ಸರಿಯಾಗಿ ಪ್ರದರ್ಶಿಸಿವೆ. ರೋಬೋಟ್‌ಗಳು ಮತ್ತು ಮಾನವ ಟ್ರೇನರ್​ ಒಟ್ಟಾಗಿ ಸಂಯೋಜಿಸಿದ ಈ ಡಾನ್ಸ್ ವಿಡಿಯೋ ವೇದಿಕೆಯಲ್ಲಿದ್ದ ಜ್ಯುರಿಗಳನ್ನು ಮಾತ್ರವಲ್ಲ, ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಇದೇನು ಅಸಲಿನಾ?

ವು ಯುಫೆಯಿ ಮತ್ತು ಎಂಟು ಯುನಿಟ್ರಿ ಜಿ1 ರೋಬೋಟ್‌ಗಳು 'ಅಮೆರಿಕಾಸ್ ಗಾಟ್ ಟ್ಯಾಲೆಂಟ್' ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ! ಈ ವರ್ಷದ ಜೂನ್‌ನಲ್ಲಿ ನಡೆದ ಸೀಸನ್ 21ರ ಆಡಿಷನ್‌ಗಳಲ್ಲಿ ವು ಅವರ ತಂಡವು ಪ್ರದರ್ಶನ ನೀಡಿತು. ಆ ನಂತರ, ಇದೇ ಸೆಪ್ಟೆಂಬರ್ 8ರಂದು ನಡೆದ ಕ್ವಾರ್ಟರ್ ಫೈನಲ್‌ನ ನಾಲ್ಕನೇ ರಾತ್ರಿಯ ವೇದಿಕೆಯಲ್ಲಿ ಅದೇ ರೋಬೋಟ್‌ಗಳು ತಮ್ಮ ಪ್ರದರ್ಶನದಲ್ಲಿ ಹೆಚ್ಚು ಕೌಶಲ್ಯಗಳೊಂದಿಗೆ ಇನ್ನೊಮ್ಮೆ ಪ್ರದರ್ಶನ ನೀಡಿವೆ.

ಏನಿದು G1 ರೋಬೋಗಳು?

ಯೂನಿಟ್ರಿ G1 ವೇಗದ, ಚುರುಕಾದ ಚಲನೆಗಳಿಗೆಂದೇ ಡಿಸೈನ್ ಮಾಡಲಾದ ಹ್ಯೂಮನಾಯ್ಡ್ ರೋಬೋಟ್​ಗಳು ಇದಾಗಿದ್ದು. ಈಗಾಗಲೇ ಹಲವು ಪ್ರದರ್ಶನಗಳ ಮೂಲಕ ನಡೆಯಲು, ಓಡಲು, ಡಾನ್ಸ್ ಮತ್ತು ಇತರೆ ಕೌಶಲ್ಯ ತೋರಿಸುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, 'ಅಮೆರಿಕಾಸ್ ಗಾಟ್ ಟ್ಯಾಲೆಂಟ್' ವೇದಿಕೆಯಲ್ಲಿ, ಈ ರೋಬೋಟ್‌ಗಳು ತನ್ನದೇ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಬದಲಿಗೆ, ಮುಂಚಿತವಾಗಿಯೇ ಪ್ರೋಗ್ರಾಮಿಂಗ್ ಮಾಡಿ, ಹಲವು ರೀತಿಯ ಆ್ಯಕ್ಷನ್​ ಮಾಡುವಂತೆ ಸೆಟ್​ ಮಾಡಿದ್ದಾಗಿ ವಿವರಿಸಲಾಗಿದೆ,(ಏಜೆನ್ಸೀಸ್).