ಸಂಪಾದಕೀಯ: ಬಾಂಗ್ಲಾದಲ್ಲಿ ಚೀನಾದ ಪ್ರಭಾವ 
ವಿದೇಶ

ಸಂಪಾದಕೀಯ: ಬಾಂಗ್ಲಾದಲ್ಲಿ ಚೀನಾದ ಪ್ರಭಾವ

ಸಂಪಾದಕೀಯ: ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಜೂನ್ 22ರಿಂದ 26ರವರೆಗೆ ಚೀನಾ ಪ್ರವಾಸದಲ್ಲಿದ್ದರು. ಇದೇ ಅವಧಿಯಲ್ಲಿ ಬಾಂಗ್ಲಾದೇಶವು ತನ್ನ ಮೊಂಗ್ಲಾ ಪೋರ್ಟ್ ಯೋಜನೆಯನ್ನು ಭಾರತದಿಂದ ಕಸಿದುಕೊಂಡು ಚೀನಾಕ್ಕೆ ಹಸ್ತಾಂತರಿಸಿದೆ. ಭಾರತದ ಕರಾವಳಿಯಿಂದ ಕೇವಲ 80 ಕಿಲೋಮೀಟರ್ ದೂರದಲ್ಲಿರುವ ಮೊಂಗ್ಲಾ ಬಂದರಿನಲ್ಲಿ ಈ ಮೂಲಕ ಚೀನಾದ ಪ್ರಾಬಲ್ಯ ಹೆಚ್ಚಲಿದೆ. ಭಾರತದ ಚಿಕನ್ ನೆಕ್‌ನಿಂದ ಕೇವಲ 100 ಕಿಲೋಮೀಟರ್ ದೂರದಲ್ಲಿರುವ ತೀಸ್ತಾ ನದಿಯನ್ನೂ ಚೀನಾ ನಿರ್ವಹಿಸಲಿದೆ. 2015ರಲ್ಲಿ ಬಾಂಗ್ಲಾದೇಶವು ಭಾರತದೊಂದಿಗೆ ಎರಡು ಆರ್ಥಿಕ ವಲಯಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿತ್ತು. ಇವುಗಳಲ್ಲಿ ಒಂದು ಮೊಂಗ್ಲಾ ಪೋರ್ಟ್ ಮತ್ತು ಇನ್ನೊಂದು ಚಿತ್ತಗಾಂಗ್ ಪೋರ್ಟ್ ಪ್ರದೇಶವಾಗಿತ್ತು. ಅಲ್ಲದೆ, ಭಾರತದ ನೆರವಿನೊಂದಿಗೆ ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.
ಆದರೆ, 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡಿದ್ದರಿಂದ ಈ ಯೋಜನೆಗಳು ಸ್ಥಗಿತಗೊಂಡವು. ಇದುವರೆಗೆ ಬಂಗಾಳ ಕೊಲ್ಲಿಯಲ್ಲಿ ಭಾರತದ ಪ್ರಾಬಲ್ಯವೇ ಹೆಚ್ಚಾಗಿದ್ದರೂ, ಈಗ ಮೊಂಗ್ಲಾ ಬಂದರಿನವರೆಗೆ ಚೀನಾ ತಲುಪಿರುವುದು ಈ ಪ್ರದೇಶದಲ್ಲಿ ಭಾರತಕ್ಕೆ ವ್ಯೂಹಾತ್ಮಕವಾಗಿ ಹೊಸ ಸವಾಲನ್ನು ಸೃಷ್ಟಿಸಲಿದೆ. ಒಮ್ಮೆ ಈ ಬಂದರುಗಳು ಚೀನಾದ ಹಿಡಿತಕ್ಕೆ ಬಂದರೆ, ಅಲ್ಲಿ ಚೀನಾ ಮಿಲಿಟರಿ ನೆಲೆಯನ್ನು ಸಹ ಸ್ಥಾಪಿಸುವ ಸಾಧ್ಯತೆಯಿದೆ. ಏಕೆಂದರೆ, ಚೀನಾ ಕಂಪನಿಗಳು 2023ರಲ್ಲೇ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸಬ್‌ಮೆರಿನ್ ನೆಲೆಯನ್ನು ಸಿದ್ಧಪಡಿಸಿವೆ. ಇಲ್ಲಿ 6 ಸಬ್‌ಮೆರಿನ್ಗಳು ಮತ್ತು 8 ಯುದ್ಧನೌಕೆಗಳನ್ನು ನಿಲ್ಲಿಸಬಹುದಾಗಿದೆ. ಇದರ ನಿರ್ವಹಣೆಗಾಗಿ ಬಾಂಗ್ಲಾದೇಶ ಸಂಪೂರ್ಣವಾಗಿ ಚೀನಾವನ್ನೇ ಅವಲಂಬಿಸಿದೆ. ಮಾತ್ರವಲ್ಲ, ಚಿತ್ತಗಾಂಗ್ ಮತ್ತು ಮೊಂಗ್ಲಾವರೆಗೆ ಚೀನಾದ ಹಲವು ಯುದ್ಧನೌಕೆಗಳು ನಿರಂತರವಾಗಿ ಭೇಟಿ ನೀಡುತ್ತಿವೆ.
ಈ ಹಿಂದೆ ಚೀನಾ ಶ್ರೀಲಂಕಾದ ಹಂಬಂತೋಟ ಬಂದರನ್ನು ಅಭಿವೃದ್ಧಿಪಡಿಸಿತು. ಆದರೆ, ಶ್ರೀಲಂಕಾ ಸರ್ಕಾರ ಚೀನಾದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಚೀನಾ ಆ ಬಂದರನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ರೂಪದಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತು. ಪ್ರಸ್ತುತ ಇಲ್ಲಿಯೂ ಚೀನಾ ನೌಕಾಪಡೆ ಸಕ್ರಿಯವಾಗಿದೆ. ಚೀನಾ ತನ್ನ ಅರ್ಧಕ್ಕಿಂತ ಹೆಚ್ಚು ಕಡಲ ವ್ಯಾಪಾರಕ್ಕಾಗಿ ಮಲಕ್ಕಾ ಜಲಸಂಧಿಯನ್ನು ಅವಲಂಬಿಸಿದೆ. ಆದರೆ ಮೊಂಗ್ಲಾ ಬಂದರಿನ ಪ್ರವೇಶದಿಂದಾಗಿ ಚೀನಾದ ಈ ಅವಲಂಬನೆ ಕಡಿಮೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿ, ಭಾರತವು ಮಲಕ್ಕಾ ಜಲಸಂಧಿಯನ್ನು ನಿರ್ಬಂಧಿಸಲು ಯತ್ನಿಸಿದರೆ, ಚೀನಾ ಮೊಂಗ್ಲಾ ಬಂದರಿನ ಮೂಲಕ ಬಂಗಾಳ ಕೊಲ್ಲಿಯಲ್ಲಿ ಭಾರತದ ಮೇಲೆ ಒತ್ತಡವನ್ನು ಹೆಚ್ಚಿಸಬಹುದು.
ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ "ಸ್ಟ್ರಿಂಗ್ ಆಫ್ ಪರ್ಲ್ಸ್" ತಂತ್ರಗಾರಿಕೆಯ ಭಾಗವಾಗಿ ಬಂದರುಗಳು, ವಾಯುನೆಲೆಗಳು ಮತ್ತು ನೌಕಾ ನೆಲೆಗಳನ್ನು ನಿರ್ಮಿಸುತ್ತಿದೆ. ಚೀನಾ ಕಂಪನಿಗಳು ಹಿಂದೂ ಮಹಾಸಾಗರದಲ್ಲಿರುವ ಒಟ್ಟು 17 ಬಂದರುಗಳ ಪೈಕಿ 13 ಬಂದರುಗಳನ್ನು ನೇರವಾಗಿ ಅಭಿವೃದ್ಧಿಪಡಿಸುತ್ತಿದ್ದು, ಉಳಿದ ಯೋಜನೆಗಳಲ್ಲಿಯೂ ದೊಡ್ಡ ಮಟ್ಟದ ಪಾಲುದಾರಿಕೆಯನ್ನು ಹೊಂದಿವೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಈ ನಿರಂತರ ಚಟುವಟಿಕೆಗಳು ಭಾರತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿವೆ. ಇದೇ ಕಾರಣಕ್ಕೆ ಭಾರತ ಕೂಡ ಪ್ರತಿಯಾಗಿ ಹಲವು ಪ್ರಮುಖ ಯೋಜನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಚೀನಾದ ಪ್ರಭಾವವನ್ನು ತಗ್ಗಿಸಲು ಭಾರತವು ಪ್ರತಿತಂತ್ರಗಾರಿಕೆಯನ್ನು ಹೆಣೆಯಬೇಕಿದೆ ಮತ್ತು ಚೀನಾದ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ.