Mercedes Benz ಸಾಂದರ್ಭಿಕ ಚಿತ್ರ 
ವಿದೇಶ

ಬೆಂಜ್ ಕಾರನ್ನೇ ಶವಪೆಟ್ಟಿಗೆ ಮಾಡಿ ವಿಚಿತ್ರ ಅಂತ್ಯಕ್ರಿಯೆ! 13 ಲಕ್ಷದ ಲಕ್ಕಿ ನಂಬರ್ ಪ್ಲೇಟ್ ಮಣ್ಣುಪಾಲು..? Mercedes Benz

ಪ್ರಮುಖ ಮುಖ್ಯಾಂಶಗಳು

  • ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ 1.49 ಕೋಟಿ ಬೆಲೆ ಬಾಳುವ ಐಷಾರಾಮಿ ಕಾರನ್ನು ಹೂಳಿದ ಕುಟುಂಬ
  • ಚೀನಾದಲ್ಲಿ ಮೃತಪಟ್ಟ ವ್ಯಕ್ತಿ ಮರ್ಸಿಡಿಸ್ ಕಾರುಗಳ ಬಗ್ಗೆ ವಿಶೇಷ ಒಲವು ಹೊಂದಿದ್ದರು
  • ತಂದೆಯ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ಅವರ ಮಕ್ಕಳು ಮರ್ಸಿಡಿಸ್ ಕಾರನ್ನೇ ಶವಪೆಟ್ಟಿಗೆಯನ್ನಾಗಿಸಿದ್ದಾರೆ
  • ಜರ್ಮನ್ ಕಾರಿನ ಮೇಲೆ ಕೆಂಪು ಬಟ್ಟೆಯನ್ನು ಹೊದಿಸಿದ್ದು, ಪಕ್ಕದ ಕನ್ನಡಿಗಳಿಗೆ ಕೆಂಪು ರಿಬ್ಬನ್​ಗಳನ್ನು ಕಟ್ಟಲಾಗಿತ್ತು
Mercedes Benz:  ಚೀನಾದ ಕುಟುಂಬವೊಂದರಲ್ಲಿ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಸಂದರ್ಭದಲ್ಲಿ 1.49 ಕೋಟಿ ಬೆಲೆ ಬಾಳುವ ಐಷಾರಾಮಿ ಕಾರನ್ನು (ಮರ್ಸಿಡಿಸ್-ಬೆನ್ಜ್ S450L) ಅವರೊಂದಿಗೆ ಹೂಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಈ ಘಟನೆಯು ಸರ್ಕಾರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ಈಗ ಕ್ಷಮೆಯಾಚಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಘಟನೆಯ ಹಿನ್ನೆಲೆ

ಚೀನಾದಲ್ಲಿ ಮೃತಪಟ್ಟ ವ್ಯಕ್ತಿಗೆ 70 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಜೀವಿತಾವಧಿಯಲ್ಲಿ ಅಪಾರ ಕಾರು ಸಂಗ್ರಹವನ್ನು ಹೊಂದಿದ್ದರು ಮತ್ತು ಮರ್ಸಿಡಿಸ್ ಕಾರುಗಳ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಹಾಗಾಗಿ ಅವರ ನಿಧನದ ನಂತರ ತಂದೆಯ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ಅವರ ಮಕ್ಕಳು ಸಾಮಾನ್ಯ ಶವಪೆಟ್ಟಿಗೆಯ ಬದಲಿಗೆ ಮರ್ಸಿಡಿಸ್ ಕಾರನ್ನೇ ಶವಪೆಟ್ಟಿಗೆಯನ್ನಾಗಿ ಬಳಸಲು ನಿರ್ಧರಿಸಿದರು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಜರ್ಮನ್ ಕಾರಿನ ಮೇಲೆ ಕೆಂಪು ಬಟ್ಟೆಯನ್ನು ಹೊದಿಸಿದ್ದು, ಪಕ್ಕದ ಕನ್ನಡಿಗಳಿಗೆ ಕೆಂಪು ರಿಬ್ಬನ್​ಗಳನ್ನು ಕಟ್ಟಲಾಗಿತ್ತು. ಆದಾಗ್ಯೂ, ವಾಹನವನ್ನು ಕೆಳಗಿಳಿಸಿ ಹೂಳಲು ಸಹಾಯ ಮಾಡಿದ ಗ್ರಾಮಸ್ಥರಿಗೆ ತಲಾ ಒಬ್ಬರಿಗೆ 6,812 ರೂ. ನೀಡಿರುವುದಾಗಿ ತಿಳಿದುಬಂದಿದೆ. 
ಘಟನೆ ಸುದ್ದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದು, ಸ್ಥಳೀಯ ನಾಗರಿಕ ವ್ಯವಹಾರಗಳ ಬ್ಯೂರೋ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಕೇವಲ ಅದ್ದೂರಿ ಪ್ರದರ್ಶನ ಎನ್ನುವುದಕ್ಕಿಂತ ಹೆಚ್ಚಾಗಿ 'ಊಳಿಗಮಾನ್ಯ ಮೂಢನಂಬಿಕೆ' ಎಂದು ಕಠಿಣವಾಗಿ ಖಂಡಿಸಿದೆ.
ಅಧಿಕಾರಿಗಳು ಸಮಾದಿ ಮಾಡಲಾದ ಕಾರನ್ನು ತಕ್ಷಣವೇ  ಭೂಮಿಯಿಂದ ಹೊರತೆಗೆಯಲು ಸೂಚಿಸಿದರು. ಜೊತೆಗೆ ಕಾರನ್ನು ಹೂಳಲು ನಿರ್ಮಿಸಲಾದ ಬೃಹತ್ ಕಾಂಕ್ರೀಟ್ ಗುಂಡಿಯನ್ನು ತೆರವುಗೊಳಿಸಿ, ಆ ಜಾಗವನ್ನು ಮೊದಲಿನ ಸ್ಥಿತಿಗೆ ತರುವ ಜವಾಬ್ದಾರಿಯನ್ನುಕುಟುಂಬಕ್ಕೆ ಹೊರಿಸಿತು.  ಆದಾಗ್ಯೂ, ಸಮಾಜದಲ್ಲಿ ತಪ್ಪು ಸಾಂಪ್ರದಾಯ ಉಲ್ಲೇಖಿಸಿದ್ದಾಗಿ ಕುಟುಂಬ ಬಹಿರಂಗವಾಗಿ ಕ್ಷಮೆಯಾಚಿಸಿತು.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಬಳಕೆದಾರರು ಕುಟುಂಬವು ತಮ್ಮ ಸಂಪತ್ತನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವು ಬಳಕೆದಾರರು ಇದೊಂದು ಹಾಸ್ಯಾಸ್ಪದ ಘಟನೆ. ಈ ರೀತಿಯ ಅಜ್ಞಾನ ಹೊಂದಿರುವ ಶ್ರೀಮಂತ ಜನರು ಜಗತ್ತಿಗೆ ನಿಜವಾದ ಸಮಸ್ಯೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್).