ಚೀನಾ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಒಡೆಯ ಎಲಾನ್ ಮಸ್ಕ್ ಟಾಂಗ್ಚುವಾಂಗ್‌ನ ಬಾರ್ಬೆಕ್ಯು ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನು ಅಕ್ಷರಶಃ ದಂಗಾಗಿಸಿದೆ.
'ಮಸ್ಕ್'ಗಿಂತ ಹ್ಯಾಂಡ್ಸಮ್!
48 ವರ್ಷದ ಮಾ ಜಿಯಾನ್‌ಪಿಂಗ್ ಎಂಬುವರು ಈ ಬಾರ್ಬೆಕ್ಯು ಹೋಟೆಲ್ ಮಾಲೀಕರಾಗಿದ್ದು, ನೋಡಲು ಥೇಟ್ ಎಲಾನ್ ಮಸ್ಕ್ ಅವರಂತೆಯೇ ಇದ್ದಾರೆ. ಇತ್ತೀಚೆಗೆ, ತಮ್ಮ ಹೋಟೆಲ್‌ಗೆ ಆಗಮಿಸಿದ್ದ ಗ್ರಾಹಕರಿಗೆ ಊಟ ಬಡಿಸುವಾಗ ಪ್ರವಾಸಿಗರೊಬ್ಬರು ಅವರ ವಿಡಿಯೋ ರೆಕಾರ್ಡ್ ಮಾಡಿ, ಚೀನಾದ ಶಾರ್ಟ್ ವಿಡಿಯೋ ಆ್ಯಪ್ ಆದ 'ದೌಯಿನ್'ನಲ್ಲಿ ಅಪ್‌ಲೋಡ್ ಮಾಡಿದರು. ಇದನ್ನು ನೋಡಿದ ಅನೇಕರು ಕಕ್ಕಾಬಿಕ್ಕಿಯಾಗಿದ್ದು, ಇದ್ಯಾಕೆ ಬಿಲಿಯನೇರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಮೆಂಟ್ಗಳ ಸುರಿಮಳೆ ಹರಿಸಿದ್ದಾರೆ.
ಎಲೆಕ್ಟ್ರೀಷಿಯನ್ ಈಗ ಹೋಟೆಲ್ ಮಾಲೀಕ
ಮೂಲತಃ ಗನ್ಸು ಪ್ರಾಂತ್ಯದವರಾದ ಮಾ ಜಿಯಾನ್‌ಪಿಂಗ್, ಹೋಟೆಲ್ ಉದ್ಯಮಕ್ಕೆ ಬರುವ ಮುನ್ನ ಹಲವು ವರ್ಷಗಳ ಕಾಲ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಉದ್ಯಮ ರಂಗಕ್ಕೆ ಕಾಲಿಟ್ಟು ತಮ್ಮ ಸಂಗಾತಿಯೊಂದಿಗೆ ಕೈಜೋಡಿಸಿ, ಈ 'ಯಿಲಾನ್ ರೆಸ್ಟೋರೆಂಟ್' ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಡಬಲ್ ಆಯ್ತು ಹೋಟೆಲ್ ಬಿಸಿನೆಸ್
ಸ್ಥಳೀಯರ ಪ್ರಕಾರ, ಈ ವಿಡಿಯೋ ವೈರಲ್ ಆಗುವ ಮೊದಲೇ ಮಾಲೀಕರನ್ನು ಅಲ್ಲಿನ ಜನರು ಎಲಾನ್ ಮಸ್ಕ್ ಎಂದೇ ಕರೆಯುತ್ತಿದ್ದರಂತೆ. ಇದೊಂದು ರೀತಿ ಕಾಕತಾಳಿಯ ಎಂಬಂತಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಮಾ ಜಿಯಾನ್‌ಪಿಂಗ್ ಅವರ ಉದ್ಯಮಕ್ಕೆ ಲಾಭದ ಹೊಳೆ ಹರಿದುಬಂದಿದೆ. ಇವರನ್ನು ನೋಡಲೆಂದೆ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ,(ಏಜೆನ್ಸೀಸ್).