ಚೀನಾ ಈ ಸಂಘರ್ಷದಲ್ಲಿ ಮೂಗು ತೂರಿಸಿದರೆ ನಾವು ಸುಮ್ಮನಿರುವುದಿಲ್ಲ: ಡೊನಾಲ್ಡ್ ಟ್ರಂಪ್
- ಇಸ್ಲಾಮಾಬಾದ್ನಲ್ಲಿ ಮುರಿದುಬಿದ್ದ ಶಾಂತಿ ಮಾತುಕತೆ
- ಇರಾನ್ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವ ಚೀನಾ
- ಚೀನಾ ಈ ಸಂಘರ್ಷದಲ್ಲಿ ಮೂಗು ತೂರಿಸಿದರೆ ನಾವು ಸುಮ್ಮನಿರುವುದಿಲ್ಲ: ಡೊನಾಲ್ಡ್ ಟ್ರಂಪ್
ಅಮೆರಿಕ: ಕಳೆದ ಸರಿಸುಮಾರು 40 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 14 ದಿನಗಳ ಕದನ ವಿರಾಮ ಘೋಷಿಸಿದ್ದರು. ಈ ಕದನ ವಿರಾಮವನ್ನು ಶಾಶ್ವತ ಶಾಂತಿ ಒಪ್ಪಂದವಾಗಿ ಪರಿವರ್ತಿಸಲು ಇಸ್ಲಾಮಾಬಾದ್ನಲ್ಲಿ ಮಾತುಕತೆಯನ್ನು ಸಹ ನಡೆಸಲಾಗಿತ್ತು.
ಚೀನಾ ದೂರ ಉಳಿದರೆ ಉತ್ತಮ
ಆದರೆ ಅಮೆರಿಕ ಸಕ್ರೀಯವಾಗಿರುವ ಈ ಸಂಘರ್ಷದಲ್ಲಿ ಚೀನಾ ಮೂಗುತೂರಿಸುತ್ತಿರುವುದು ಯುಎಸ್ಗೆ ಕಸಿವಿಸಿ ಉಂಟಾಗಿದ್ದು, ಇರಾನ್ಗೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ, ಇದು ನಮ್ಮ ಗಮನಕ್ಕೆ ಬಂದಿದೆ. ಚೀನಾ ಇದರಿಂದ ದೂರವಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಇದು ವಿಕೋಪಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ (Donald Trump warns China) ನೀಡಿದ್ದಾರೆ.
ಮಾಹಿತಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಶಾಂತಿ ಒಪ್ಪಂದದ ಮಾತುಕತೆ ನಡೆಸುತ್ತಿದ್ದರೆ, ಇತ್ತ ಚೀನಾ ಇರಾನ್ಗೆ ನೂತನವಾದ ಏರ್ಸ್ಟೈಕ್ ರಕ್ಷಣಾ ವ್ಯವಸ್ಥೆಯನ್ನು ನೀಡುತ್ತಿದೆ ಎಂದು ವರದಿಯಾಗಿದೆ.
ಆರೋಪಗಳನ್ನು ತಳ್ಳಿ ಹಾಕಿರುವ ಚೀನಾ
ಇರಾನ್ಗೆ ಚೀನಾ ಮಿಲಿಟರಿ ನೆರವು ನೀಡುತ್ತಿರುವ ಆರೋಪವನ್ನು ಚೀನಾ ತಳ್ಳಿ ಹಾಕಿದೆ. ಇದು ಸಂಪೂರ್ಣ ಸುಳ್ಳಿನಿಂದ ಕೂಡಿದ ವರದಿಯಾಗಿದ್ದು, ನಾವು ಇರಾನ್ಗೆ ಯಾವುದೇ ಮಿಲಿಟರಿ ತಂತ್ರಜ್ಞಾನವನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಮುರಿದು ಬಿದ್ದ ಶಾಂತಿ ಒಪ್ಪಂದ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್ಗೆ ಅಮೆರಿಕ ಮತ್ತು ಇರಾನಿನ ಶಾಂತಿ ನಿಯೋಗ ಆಗಮಿಸಿತ್ತು. ಉಭಯ ದೇಶಗಳ ನಡುವೆ ಸುಮಾರು 21 ಗಂಟೆಗಳವರೆಗೆ ಮಾತುಕತೆ ನಡೆದಿದೆ. ಆದರೆ ಇರಾನಿನ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳಲು ಅಮೆರಿಕ ಸಿದ್ಧವಿರದ ಕಾರಣ ಈ ಮಾತುಕತೆ ವಿಫಲವಾಗಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ಇರಾನಿನ ಷರತ್ತುಗಳೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲೆ, ಇರಾನ್ ಶಾಂತಿ ಸ್ಥಾಪನೆಯಾಗ ಬೇಕಾದರೆ ತನ್ನ 10 ಷರತ್ತುಗಳನ್ನು ಮುಂದಿಟ್ಟಿತು. ಯುದ್ಧ ಪರಿಹಾರ ನೀಡಬೇಕು, ಪರಮಾಣು ಶಕ್ತಿ ಹೊಂದಲು ತಡೆಯಬಾರು, ಲೆಬನಾನ್ ಮೇಲೆ ದಾಳಿ ಮಾಡಬಾರದು, ಹೊರ್ಮುಜ್ ಮೇಲೆ ತನ್ನದೆ ಹಿಡಿತವಿರಬೇಕು ಹೀಗೆ ಹತ್ತು ಷರತ್ತುಗಳನ್ನು ಇರಾನ್ ವಿಧಿಸಿತ್ತು. ಆದರೆ ಈ ಷರತ್ತುಗಳೆಗೆ ಅಮೆರಿಕ ಕ್ಯಾರೆ ಅನ್ನದ ಕಾರಣ ಈಗ ಮಾತುಕತೆ ವಿಫಲವಾಗಿದೆ, (ಏಜನ್ಸೀಸ್).