ಪ್ರವಾಸಿಗರ ಸ್ವರ್ಗ ಚೀನಾ 
ವಿದೇಶ

ಪ್ರವಾಸಿಗರ ಸ್ವರ್ಗ ಚೀನಾ ಎಂಬ ದೈತ್ಯಲೋಕ : ಡ್ರ್ಯಾಗನ್ ದೇಶದಲ್ಲೊಂದು ಸುತ್ತು... China

ಪ್ರಮುಖ ಮುಖ್ಯಾಂಶಗಳು

  • ಚೀನಾ ಎಂದೊಡನೆ ಕಣ್ಣೆದುರು ಬರುವುದು ದೈತ್ಯ ಡ್ರ್ಯಾಗನ್​ಗಳ ಚಿತ್ರ, ಮೇಡ್ ಇನ್ ಚೀನಾ ಎಂಬ ಒಕ್ಕಣೆ
  • ಚೀನಾದಲ್ಲಿ ಪ್ರವಾಸೋದ್ಯಮವು ಬೆಳೆಯುತ್ತಿರುವ ಉದ್ಯಮವಾಗಿದ್ದು, ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ
  • 2030ರ ವೇಳೆಗೆ ಚೀನಾ ಪ್ರವಾಸಿಗರ ಸ್ವರ್ಗವಾಗುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಬಲವಾಗಲಿದೆ
China : ಚೀನಾ ಎಂದೊಡನೆ ಕಣ್ಣೆದುರು ಬರುವುದು ದೈತ್ಯ ಡ್ರ್ಯಾಗನ್​ಗಳ ಚಿತ್ರ. ಸಣ್ಣ ಕಣ್ಣಿನ ಜನ ಹಾಗೂ ಮೇಡ್ ಇನ್ ಚೀನಾ ಎಂಬ ಒಕ್ಕಣೆ ಹೊತ್ತ ಉತ್ಪನ್ನಗಳು. ಜತೆಗೆ ಪ್ರವಾಸೋದ್ಯಮ ಕೂಡ ಇಲ್ಲಿನ ಪ್ರಮುಖ ಆಕರ್ಷಣೆ. ಚೀನಾದಲ್ಲಿ ಪ್ರವಾಸೋದ್ಯಮವು ಬೆಳೆಯುತ್ತಿರುವ ಉದ್ಯಮವಾಗಿದ್ದು, ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಪ್ರವಾಸೋದ್ಯಮ ವಲಯ ಸಾಕಷ್ಟು ವಿಸ್ತರಿಸಿದೆ. ಹೊಸದಾಗಿ ಸೃಷ್ಟಿಯಾಗುತ್ತಿರುವ ಶ್ರೀಮಂತ ಮಧ್ಯಮ ವರ್ಗ ಹಾಗೂ ವಿವಿಧ ನಿರ್ಬಂಧಗಳ ಸಡಿಲಿಕೆಯಿಂದ ಚೀನಾದಲ್ಲಿ ಪ್ರವಾಸೋದ್ಯಮ ಪ್ರವರ್ಧಮಾನದಲ್ಲಿದೆ.
ಯೂರೋ ಮಾನಿಟರ್ ಇಂಟರ್‌ನ್ಯಾಷನಲ್ ಪ್ರಕಾರ, 2030ರ ವೇಳೆಗೆ ಚೀನಾ ಪ್ರವಾಸಿಗರ ಸ್ವರ್ಗವಾಗುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಸಬಲ ರಾಷ್ಟ್ರವಾಗಲಿದೆ. 2022ರಲ್ಲಿ ಪ್ರವಾಸೋದ್ಯಮ ಮತ್ತು ಪರ್ಯಟನೆಯ ಮೂಲಕ ಅತಿ ಹೆಚ್ಚು ಆದಾಯ ಗಳಿಸುವ ದೇಶಗಳ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿತ್ತು. ಇಂತಹ ಚೀನಾ ದೇಶಕ್ಕೆ ಐದು ದಿನಗಳ ಪ್ರವಾಸಕ್ಕೆ ಹೋಗುವ ಅವಕಾಶ ಒದಗಿತ್ತು. ಇಂಟರ್‌ನ್ಯಾಷನಲ್ ಅಡ್ವೈರ್ಟೈಸಿಂಗ್ ಏಜೆನ್ಸಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕುರಿತ ಶಿಬಿರಕ್ಕೆ ನಮ್ಮ ಐದು ಜನರ ತಂಡ ತೆರಳಿತ್ತು. ದೀಪಾವಳಿ ಪಾಡ್ಯದಂದು ಹುಬ್ಬಳ್ಳಿಯಿಂದ ಹೊರಟು, ರಾತ್ರಿ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ತಲುಪಿ ಬೆಳಗಿನ ಜಾವ ಒಂದು ಗಂಟೆಗೆ ಬೆಂಗಳೂರಿನಿಂದ ಹಾರಿತ್ತು ನಮ್ಮ ವಿಮಾನ. ಹಾಂಗ್‌ಕಾಂಗ್ ತಲುಪಿ ಮುಂದಿನ ಪ್ರಯಾಣಕ್ಕಾಗಿ ಸುಮಾರು 3 ಗಂಟೆ ಸಮಯ ಇದ್ದುದರಿಂದ ಅಲ್ಲಿಯ ಏರ್‌ಪೋರ್ಟ್‌ನಲ್ಲಿ ಸುತ್ತಿ ಮತ್ತೆ ವಿಮಾನವೇರಿ ಬೀಜಿಂಗ್ ನಗರ ತಲುಪಿದೆವು. ವಿಮಾನ ನಿಲ್ದಾಣದಿಂದ ನಮ್ಮ ಹೊಟೇಲ್ ತಲುಪಲು ಸುಮಾರು 2 ಗಂಟೆ ಪ್ರಯಾಣ ಅದಾಗಿತ್ತು. ಅಲ್ಲಿ ಸಂಜೆ 5.30ಕ್ಕೆ ಕತ್ತಲಾವರಿಸುತ್ತದೆ. ಭಾರತ ಈ ದೇಶಕ್ಕಿಂತ ಎರಡೂವರೆ ಗಂಟೆ ಹಿಂದಿದೆ.
ಮಾರನೇ ದಿನ ಬೆಳಗ್ಗೆ ಸುಮಾರು 9 ಗಂಟೆಗೆಲ್ಲ ನಾವೆಲ್ಲ ಶಿಸ್ತಿನ ಶಿಬಿರಾರ್ಥಿಗಳು. ಜಗತ್ತಿನ ವಿವಿಧ ಭಾಗಗಳಿಂದ 2000 ಕ್ಕೂ ಅಧಿಕ ಮತ್ತು ಭಾರತದಿಂದ 70 ರಿಂದ 80 ಜನರು ಈ ಶಿಬಿರದಲ್ಲಿದ್ದರು. ಚೀನಾದಲ್ಲಿನ ರಸ್ತೆಗಳು, ಅಲ್ಲಿನ ಕಟ್ಟಡಗಳೇ ಆ ದೇಶದ ಮೂಲಸೌಲಭ್ಯ ಅಭಿವೃದ್ಧಿಗೆ ಸಾಕ್ಷಿಯಾಗಿ ನಿಂತಿವೆ. ಎತ್ತ ನೋಡಿದರೂ ಫ್ಲೈ ಓವರ್, ಸಾವಿರಾರು ವಾಹನಗಳು ರಸ್ತೆಯಲ್ಲಿದ್ದರೂ ಸ್ವಲ್ಪವೂ ಟ್ರಾಫಿಕ್ ಜಾಮ್ ಇಲ್ಲ! ಎಲ್ಲಿಯೂ ಹಾರ್ನ್ ಶಬ್ದದ ಕಿರಿಕಿರಿ ಇಲ್ಲ. ಅಲ್ಲಿನ ಜನರು ಸಂಚಾರ ನಿಯಮ ಪಾಲಿಸುವುದನ್ನು ನೋಡಿದಾಗ ಖುಷಿ ಎನಿಸಿತ್ತು. ಅಷ್ಟೊಂದು ವಾಹನಗಳು ಶಿಸ್ತಿನಿಂದ ಸಂಚರಿಸುತ್ತಿರುವುದನ್ನು ನೋಡಿದಾಗ ನಮ್ಮ ಬೆಂಗಳೂರಿನ ಸಿಲ್ಕ್ ಬೋರ್ಡ್ ಹಾಗೂ ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನೆನಪಾಗದೆ ಇರುವುದಿಲ್ಲ.
ಪ್ರತಿ ಟ್ರಾಫಿಕ್‌ನಲ್ಲೂ ಮೂರನೇ ಕಣ್ಣು ನಿಮ್ಮ ಮೇಲಿರುತ್ತದೆ. ರಸ್ತೆಗಳಲ್ಲಿ ಎಲ್ಲಿಯೂ ಕಸಕಡ್ಡಿ ಕಾಣುವುದಿಲ್ಲ. ರಸ್ತೆಗಳ ಇಕ್ಕೆಲಗಳಲ್ಲಿ ಹಚ್ಚಹಸಿರು ಗಿಡಮರಗಳು. ಶಿಬಿರಲ್ಲಿ ಮೂರು ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ನಾಲ್ಕನೇ ದಿನ ಬೆಳಗ್ಗೆ ಉಪಾಹಾರ ಮುಗಿಸಿ ನಮ್ಮ ತಂಡ ಹೋಗಿದ್ದು ಜಗತ್ಪ್ರಸಿದ್ಧ ಚೀನಾದ ಮಹಾಗೋಡೆ ನೋಡಲು. ಮಹಾಗೋಡೆ ನೋಡುವ ಕಾತುರ, ಕುತೂಹಲದಲ್ಲಿ ಸುಮಾರು ಒಂದೂವರೆ ಗಂಟೆ ಪ್ರಯಾಣಿದಿದ್ದು ಗೊತ್ತೇ ಆಗಲಿಲ್ಲ. ನಮ್ಮಲ್ಲಿದ್ದ ಪಾಸ್‌ಪೋರ್ಟ್‌ಗಳನ್ನು ಅಲ್ಲಿಯ ಸಿಬ್ಬಂದಿಗೆ ಪರಿಶೀಲಿಸಲು ನೀಡಿ ರೋಪ್-ವೇ ಮೂಲಕ ದಟ್ಟ ಅರಣ್ಯದ ನಡುವಿನ ಬೆಟ್ಟ ತಲುಪಿದೆವು. ಹಚ್ಚಹಸಿರಿನ ಬೆಟ್ಟದ ತುದಿಯಲ್ಲಿ ಕಿರೀಟ ಇಟ್ಟಂತೆ ಕಾಣಲಾರಂಭಿಸಿತು ಮಹಾಗೋಡೆ. ಈ ಗೋಡೆಯು ಸುಮಾರು 21,196 ಕಿಮೀ ಸುತ್ತಳತೆ ಹೊಂದಿದೆ. ಈ ಗೋಡೆಯನ್ನು ನಿರ್ಮಿಸಲು ಸುಮಾರು 2000 ವರ್ಷ ಹಿಡಿಯಿತು!
ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತೀಯರಿಗೆ ಚೀನಾದಲ್ಲಿ ಊಟದ ಸಮಸ್ಯೆ ಆಗಬಹುದು. ಅಷ್ಟು ಸುಲಭದಲ್ಲಿ ಅಲ್ಲಿನ ಆಹಾರ ಪದ್ಧತಿ ಹಿಡಿಸುವುದಿಲ್ಲ. ಅದರಲ್ಲೂ ಸಸ್ಯಾಹಾರಿಗಳಿಗೆ ಊಟದ ಸಮಸ್ಯೆ ಸ್ವಲ್ಪ ಜಾಸ್ತಿಯೇ. ನಮ್ಮ ತಂಡದ ನಾಯಕರು ಅದಾಗಲೇ ಸುಮಾರು 18 ರಿಂದ 20 ಬಾರಿ ಚೀನಾ ದೇಶಕ್ಕೆ ಭೇಟಿ ನೀಡಿದ್ದರಿಂದ ನಮಗೆಲ್ಲ ಅವರು ಮಾರ್ಗದರ್ಶಕರಾಗಿದ್ದರು. ಅಲ್ಲದೆ, ಅವರು ತಮ್ಮ ಅನುಭವಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದು ನಮಗೆ ಸಹಕಾರಿಯಾಯಿತು. ನಾವಿದ್ದ ಜಾಗದಲ್ಲಿ ಭಾರತೀಯ ಶೈಲಿಯ ಊಟದ ಹೋಟೆಲ್‌ಗಳು ಇದ್ದುದರಿಂದ ನಮಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಬೆಳಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ಅಲ್ಪ ಉಪಾಹಾರದಂತೆ ಹಣ್ಣು, ಬ್ರೆಡ್, ಜಾಮ್ ಸೇವಿಸಿ ರಾತ್ರಿ ಭಾರತೀಯ ಶೈಲಿಯ ಆಹಾರವನ್ನು ಸವಿಯುತ್ತಿದ್ದೆವು.
ಬೀಜಿಂಗ್ ನಗರದ ಮತ್ತೊಂದು ಆಕರ್ಷಣೆ ಎಂದರೆ ಅಲ್ಲಿನ ಅರಮನೆ. 600ಕ್ಕೂ ಹೆಚ್ಚು ವರ್ಷಗಳ ಹಳೆಯ ಅರಮನೆ ಇದು. ಎಷ್ಟೇ ನೈಸರ್ಗಿಕ ವಿಕೋಪಗಳು ಬಂದರೂ ಈ ಅರಮನೆ ಕದಲದೆ ನಿಂತಿದೆ. ಈ ಅರಮನೆಯಲ್ಲಿ ಬರೋಬ್ಬರಿ 9,999 ಕೋಣೆಗಳನ್ನು ನಿರ್ಮಿಸಲಾಗಿದೆ. ಪ್ಯಾಲೇಸಿನ ಕೂಗಳತೆಯಲ್ಲಿ ಚೀನಾ ಅಧ್ಯಕ್ಷರ ಕಚೇರಿ ಕಾಣಬಹುದಾಗಿದೆ.
ಚೀನಾ ಅಭಿವೃದ್ಧಿಯಲ್ಲಿ ಅಲ್ಲಿನ ಯುವ ಸಮೂಹದ ಪಾಲು ದೊಡ್ಡದು. ಎಲ್ಲ ವಲಯಗಳಲ್ಲಿಯೂ 22 ರಿಂದ 25 ವರ್ಷದ ಕೆಲಸಗಾರರೇ ಕಾಣುತ್ತಾರೆ. ತಂತ್ರಜ್ಞಾನದಲ್ಲಿಯೂ ಚೀನಾ ಬಹಳ ಮುಂದಿದೆ. ಬೀಜಿಂಗ್ ನಗರ ಚೀನಾದ ರಾಜಧಾನಿ. ಇದು ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಚೀನಾದ 4 ಪ್ರಾಚೀನ ರಾಜಧಾನಿಗಳಲ್ಲಿ ಬೀಜಿಂಗ್ ಕೂಡ ಒಂದು. ಬೀಜಿಂಗ್ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ ಶಾಂಗೈ ಮತ್ತು ಹಾಂಗ್‌ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ. ಬೀಜಿಂಗ್ 2008ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಅತಿಥ್ಯ ವಹಿಸಿತ್ತು. ಐದು ದಿನಗಳಲ್ಲಿ 3 ದಿನ ಶಿಬಿರ ಮತ್ತು 2 ದಿನ ನಗರ ವೀಕ್ಷಣೆ ನಂತರ ನಮ್ಮ ದೇಶಕ್ಕೆ ಬಂದು ತಲುಪಿದೆವು. ಸುಧಾರಿಸಿಕೊಳ್ಳಲು ಮೂರ್ನಾಲ್ಕು ದಿನಗಳೇ ಬೇಕಾಯಿತು! ಅಲ್ಲಿ ಚಳಿ 10 ಡಿಗ್ರಿಗಿಂತ ಕಡಿಮೆ ಇತ್ತು. ಒಂದು ದಿನವಂತೂ 4 ಡಿಗ್ರಿ ತಲುಪಿತ್ತು.

ನಮ್ಮ ದೇಶದಲ್ಲಿಯೂ ಅಭಿವೃದ್ಧಿ ಗಾಳಿ ಬೀಸಲಿ

ನಾವು ನೀವೆಲ್ಲರೂ ಬೇರೆ ದೇಶಗಳನ್ನು ಕೊಂಡಾಡುತ್ತೇವೆ. ನಮ್ಮ ದೇಶವು ಸಹ ಆ ದೇಶದಂತೆ ಅಭಿವೃದ್ಧಿ ಹೊಂದಲೆಂದು ಕನಸು ಕಾಣುತ್ತೇವೆ. ಅದೆಲ್ಲ ನಮ್ಮ ಕೈಯಲ್ಲೇ ಇದೆ. ಈಗಿನ ಕೇಂದ್ರ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಯ ಗಾಳಿ ಬೀಸುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಅಭಿವೃದ್ಧಿಗೆ ಸಾಕಷ್ಟು ಒತ್ತು ಕೊಡುತ್ತಿದ್ದಾರೆ. ಆದಷ್ಟು ಬೇಗ ನಮ್ಮ ನಿಮ್ಮೆಲ್ಲರ ಕನಸು ಸಾಕಾರಗೊಳ್ಳಲೆಂದು ಆಶಿಸೋಣ.