ಬೀಜಿಂಗ್: ತೈವಾನ್‌ಗೆ 11 ಶತಕೋಟಿ ಡಾಲರ್‌ಗಳ ಶಸ್ತ್ರಾಸ್ತ್ರ ಮಾರಾಟದ ಪ್ಯಾಕೇಜ್‌ಗೆ ಟ್ರಂಪ್ ಅನುಮೋದನೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಚೀನಾ (China) ಶುಕ್ರವಾರ (ಡಿ.26) ಅಮೆರಿಕದ 20 ಶಸ್ತ್ರಾಸ್ತ್ರ ಪೂರೈಕಾ ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸಿದೆ. ತೈವಾನ್ ವಿಷಯದ ಕುರಿತು ಚೀನಾವನ್ನು ಕೆರಳಿಸುವ ಯಾವುದೇ ಪ್ರಯತ್ನಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಎಚ್ಚರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ತೈವಾನ್‌ಗೆ ಶಸ್ತ್ರಾಸ್ತ್ರ ಒದಗಿಸುವಲ್ಲಿ ಭಾಗಿಯಾಗಿರುವ 20 ಅಮೇರಿಕನ್ ಮಿಲಿಟರಿ ಸಂಬಂಧಿತ ಸಂಸ್ಥೆಗಳು ಮತ್ತು 10 ಹಿರಿಯ ಕಾರ್ಯನಿರ್ವಾಹಕರ ವಿರುದ್ಧ ಪ್ರತಿಕ್ರಮಗಳನ್ನು ತೆಗೆದುಕೊಳ್ಳಲು ಬೀಜಿಂಗ್ ನಿರ್ಧರಿಸಿದೆ ಎಂದು ಸಚಿವಾಲಯ ತಿಳಿಸಿದೆ. ತೈವಾನ್ ಸಂಬಂಧಿಸಿದಂತೆ ಯಾರಾದರೂ ಗೆರೆ ದಾಟಿ ಪ್ರಚೋದನೆಗಳನ್ನು ಮಾಡಲು ಪ್ರಯತ್ನಿಸಿದರೆ ಚೀನಾದ ದೃಢ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಒಂದು-ಚೀನಾ(One China) ತತ್ವವನ್ನು ಪಾಲಿಸುವಂತೆ ಮತ್ತು ತೈವಾನ್‌ಗೆ ಶಸ್ತ್ರಾಸ್ತ್ರ ನೀಡುವ ಅಪಾಯಕಾರಿ ನಡೆಗಳನ್ನು ನಿಲ್ಲಿಸುವಂತೆ, ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುವುದನ್ನು ನಿಲ್ಲಿಸುವಂತೆ ಮತ್ತು ತೈವಾನ್ ಸ್ವಾತಂತ್ರ್ಯ ಪ್ರತ್ಯೇಕತಾವಾದಿ ಶಕ್ತಿಗಳಿಗೆ ತಪ್ಪು ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ.
ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು ಚೀನಾ ದೃಢನಿಶ್ಚಯದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ,(ಏಜನ್ಸೀಸ್).