ಚೀನಾ ನಿರ್ಮಿತ 'HQ-9B' ಬುಡಮೇಲು! ಆಕಾಶದಲ್ಲಿ ಅಮೇರಿಕಾ-ಇಸ್ರೇಲ್ ಅಧಿಪತ್ಯ; ವಿಫಲವಾಯಿತೇ ಇರಾನ್ ರಕ್ಷಣಾ ಕವಚ..? 
ವಿದೇಶ

ಚೀನಾ ನಿರ್ಮಿತ 'HQ-9B' ಬುಡಮೇಲು! ಆಕಾಶದಲ್ಲಿ ಅಮೇರಿಕಾ-ಇಸ್ರೇಲ್ ಅಧಿಪತ್ಯ; ವಿಫಲವಾಯಿತೇ ಇರಾನ್ ರಕ್ಷಣಾ ಕವಚ..?

ನವದೆಹಲಿ: ಇರಾನ್ ಮೇಲೆ ಅಮೇರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ಜಂಟಿ ವೈಮಾನಿಕ ದಾಳಿಯು ಇರಾನ್‌ನ ಮಿಲಿಟರಿ ಶಕ್ತಿಯನ್ನು ಮಾತ್ರವಲ್ಲದೆ, ಚೀನಾ ನಿರ್ಮಿತ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯ ಮಾನವನ್ನೂ ಹರಾಜು ಹಾಕಿದೆ. ಇರಾನ್ ಹೆಮ್ಮೆಯಿಂದ ಬೀಗುತ್ತಿದ್ದ ಚೀನಾದ HQ-9B ಏರ್ ಡಿಫೆನ್ಸ್ ಸಿಸ್ಟಮ್ ಶತ್ರುಗಳ ಕ್ಷಿಪಣಿಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇರಾನ್ ನಗರಗಳು ಈಗ ಸ್ಮಶಾನ ಸದೃಶವಾಗಿವೆ.

ಚೀನಾ ತಂತ್ರಜ್ಞಾನದ ಮುಖಭಂಗ: HQ-9B ವೈಫಲ್ಯ

ಇರಾನ್ ತನ್ನ ತೈಲವನ್ನು ನೀಡಿ ಚೀನಾದಿಂದ ಈ HQ-9B ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿ ಮಾಡಿತ್ತು. ರಷ್ಯಾದ S-300 ವ್ಯವಸ್ಥೆಗಿಂತ ಇದು ಶಕ್ತಿಶಾಲಿ ಎಂದು ನಂಬಲಾಗಿತ್ತು. ಆದರೆ, ಶನಿವಾರ ನಡೆದ ದಾಳಿಯಲ್ಲಿ ಇಸ್ರೇಲ್‌ನ ಫೈಟರ್ ಜೆಟ್‌ಗಳು ಈ ರೇಡಾರ್‌ಗಳ ಕಣ್ಣು ತಪ್ಪಿಸಿ ನುಗ್ಗಿವೆ.
ಹಳೆಯ ಇತಿಹಾಸ: ಈ ಹಿಂದೆ ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರದ ವೇಳೆಯೂ ಇದೇ HQ-9B ವ್ಯವಸ್ಥೆ ಫೇಲ್ ಆಗಿತ್ತು. ಈಗ ಇರಾನ್‌ನಲ್ಲೂ ಅದೇ ಪುನರಾವರ್ತನೆಯಾಗಿದೆ.
ಕಾರಣವೇನು?: ಅಮೇರಿಕ ಮತ್ತು ಇಸ್ರೇಲ್‌ನ ಜಂಟಿ ವಾಯುಪಡೆಯು ಇರಾನ್‌ನ ರಕ್ಷಣಾ ವ್ಯವಸ್ಥೆಯನ್ನು ಓವರ್‌ವೆಲ್ಮ್ ಮಾಡಿದೆ. ಅಂದರೆ, ಇರಾನ್ ಒಂದೇ ಬಾರಿಗೆ 100 ಗುರಿಗಳನ್ನು ಪತ್ತೆ ಮಾಡಬಲ್ಲೆ ಎಂದು ಹೇಳಿಕೊಂಡಿದ್ದರೂ, ಶತ್ರುಗಳ ಕ್ಷಿಪಣಿಗಳ ಸಂಖ್ಯೆ ಮತ್ತು ವೇಗಕ್ಕೆ ಈ ಚೀನಾ ಸಿಸ್ಟಮ್ ಮಂಕಾಗಿದೆ.

ಏನಿದು HQ-9B ಸಿಸ್ಟಮ್..? 

ವ್ಯಾಪ್ತಿ: 260 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲದು.
ಎತ್ತರ: 50 ಕಿ.ಮೀ ಎತ್ತರದಲ್ಲಿ ಹಾರುವ ಗುರಿಯನ್ನು ಹೊಡೆಯಬಲ್ಲದು.
ಸಾಮರ್ಥ್ಯ: ಏಕಕಾಲಕ್ಕೆ 100 ಗುರಿಗಳನ್ನು ಟ್ರ್ಯಾಕ್ ಮಾಡಬಲ್ಲದು.
ವಿಶೇಷತೆ: ಸ್ಟೆಲ್ತ್ ವಿಮಾನಗಳನ್ನು ಪತ್ತೆ ಮಾಡುವ ಆಕ್ಟಿವ್ ರೇಡಾರ್ ಹೊಂದಿದೆ.

ನಡುಗಿದ ಇರಾನ್‌ನ 20 ಪ್ರಾಂತ್ಯಗಳು!

ಇರಾನ್‌ನ ಒಟ್ಟು 31 ಪ್ರಾಂತ್ಯಗಳ ಪೈಕಿ ರಾಜಧಾನಿ ಟೆಹ್ರಾನ್ ಸೇರಿದಂತೆ 20ಕ್ಕೂ ಹೆಚ್ಚು ಪ್ರಾಂತ್ಯಗಳ ಮೇಲೆ ಬಾಂಬ್ ಮಳೆ ಸುರಿಸಲಾಗಿದೆ.
ಇರಾನ್‌ನ ಪರಮಾಣು ಕೇಂದ್ರಗಳಾದ ನಟಾಂಜ್ ಮತ್ತು ಫೋರ್ಡೋ ಬಳಿ HQ-9B ವ್ಯವಸ್ಥೆಯನ್ನು ನಿಯೋಜಿಸಲಾಗಿತ್ತು. ಆದರೂ ಶತ್ರುಗಳು ಅಲ್ಲಿಯೂ ಲೀಲಾಜಾಲವಾಗಿ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತರಾಗಿದ್ದು, ಇಡೀ ದೇಶ ನಾಯಕನಿಲ್ಲದಂತಾಗಿದೆ.

ಆಯಿಲ್ ಫಾರ್ ವೆಪನ್ ಡೀಲ್ ವ್ಯರ್ಥ..?

ರಷ್ಯಾದ S-300 ವ್ಯವಸ್ಥೆಯು 2025ರ ಸಂಘರ್ಷದಲ್ಲಿ ಕೈಕೊಟ್ಟಿದ್ದರಿಂದ ಇರಾನ್ ಚೀನಾದ ಮೊರೆ ಹೋಗಿತ್ತು. ಚೀನಾದ ಬೀಜಿಂಗ್ ಮತ್ತು ಟಿಬೆಟ್ ರಕ್ಷಣೆಗೆ ಬಳಸುವ ಇದೇ HQ-9B ವ್ಯವಸ್ಥೆ ಇರಾನ್ ರಕ್ಷಣೆಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಸ್ರೇಲ್‌ನ ಅತ್ಯಾಧುನಿಕ ಸ್ಟೆಲ್ತ್ ವಿಮಾನಗಳ ಮುಂದೆ ಚೀನಾದ ಈ ಕಬ್ಬಿಣದ ತುಂಡುಗಳು ಕೆಲಸ ಮಾಡಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಇರಾನ್‌ನ ಪ್ರತಿಭಟನೆ ಮತ್ತು ಫೆರೋಶಿಯಸ್ ಎಚ್ಚರಿಕೆ

ಖಮೇನಿ ಹತ್ಯೆಯ ಸೇಡು ತೀರಿಸಿಕೊಳ್ಳಲು ಇರಾನ್ ಈಗ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ನಡೆಸುವುದಾಗಿ ಘೋಷಿಸಿದೆ. ಇದಕ್ಕಾಗಿ ಕುವೈತ್, ಕತಾರ್ ಮತ್ತು ಯುಎಇ ಮೇಲೆಯೂ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ. ದುಬೈ ವಿಮಾನ ನಿಲ್ದಾಣ ಈಗಾಗಲೇ ಮುಚ್ಚಲ್ಪಟ್ಟಿದ್ದು, ಜಾಗತಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಡೊನಾಲ್ಡ್ ಟ್ರಂಪ್ ಗುಡುಗು!

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿಯನ್ನು ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿ ಎಂದು ಕರೆದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ನಮ್ಮ ಸೇನಾ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).