Fireworks Explosion 
ವಿದೇಶ

Fireworks Explosion: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 21 ಮಂದಿ ದಾರುಣ ಸಾವು, 61 ಜನರಿಗೆ ಗಂಭೀರ ಗಾಯ!

ಬೀಜಿಂಗ್/ಹಾಂಗ್ ಕಾಂಗ್: ಚೀನಾದ ಹುನಾನ್ ಪ್ರಾಂತ್ಯದ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ(Fireworks Explosion) ಕನಿಷ್ಠ 21 ಕಾರ್ಮಿಕರು ಸಾವನ್ನಪ್ಪಿದ್ದು, 61ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಸಂಭವಿಸಿದ ಈ ದುರಂತವು ಇಡೀ ಪ್ರದೇಶವನ್ನು ಸ್ಮಶಾನ ಸದೃಶ್ಯವಾಗಿಸಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಹುನಾನ್ ಪ್ರಾಂತ್ಯದ ರಾಜಧಾನಿ ಚಾಂಗ್ಶಾ ನಗರದ 'ಹುವಾಶೆಂಗ್ ಫೈರ್‌ವರ್ಕ್ಸ್ ಮ್ಯಾನುಫ್ಯಾಕ್ಚರಿಂಗ್' ಕಂಪನಿಯಲ್ಲಿ ಸೋಮವಾರ ಸಂಜೆ ಸುಮಾರು 4:40ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಂಗ್ಶಾ ನಗರವು ಪಟಾಕಿ ಉತ್ಪಾದನೆಯ ಜಾಗತಿಕ ಕೇಂದ್ರವೆಂದೇ ಪ್ರಸಿದ್ಧಿಯಾಗಿದ್ದು, ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡಗಳು ನೆಲಸಮವಾಗಿವೆ.

ನರಕಸದೃಶ್ಯವಾದ ಸ್ಫೋಟದ ತಾಣ

ಸ್ಫೋಟ ಸಂಭವಿಸಿದ ತಕ್ಷಣ ಕಾರ್ಖಾನೆಯಿಂದ ದಟ್ಟವಾದ ಹೊಗೆ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಂಡುಬಂದಿದೆ. ಕಟ್ಟಡದ ಅವಶೇಷಗಳು ನೂರಾರು ಮೀಟರ್ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಾರ್ಖಾನೆಯ ಆವರಣವೆಲ್ಲಾ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ.
ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಸುಮಾರು 500ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಪಡೆ ಮತ್ತು ವೈದ್ಯಕೀಯ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

ತನಿಖೆಗೆ ಅಧ್ಯಕ್ಷ ಷಿ ಜಿನ್‌ಪಿಂಗ್ ಆದೇಶ

ಘಟನೆಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವುದರ ಜೊತೆಗೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
"ಸಾರ್ವಜನಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಪ್ರಮುಖ ಕೈಗಾರಿಕೆಗಳಲ್ಲಿನ ಅಪಾಯಗಳನ್ನು ಗುರುತಿಸಿ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಜಿನ್‌ಪಿಂಗ್ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ವಾರವಷ್ಟೇ ಅವರು ದೇಶದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ನವೀಕರಿಸುವಂತೆ ಕರೆ ನೀಡಿದ್ದರು ಎಂಬುದು ಗಮನಾರ್ಹ.

ಜಾಗತಿಕ ಪಟಾಕಿ ಮಾರುಕಟ್ಟೆಯ ಕೇಂದ್ರ

ಚೀನಾ ಪಟಾಕಿ ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಚೀನಾ ಸುಮಾರು $1.14 ಬಿಲಿಯನ್ ಮೌಲ್ಯದ ಪಟಾಕಿಗಳನ್ನು ರಫ್ತು ಮಾಡಿತ್ತು, ಇದು ಜಾಗತಿಕ ಪಟಾಕಿ ಮಾರಾಟದ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ. ಅದರಲ್ಲಿಯೂ ಹುನಾನ್ ಪ್ರಾಂತ್ಯವು ಈ ಉದ್ಯಮದ ಬೆನ್ನೆಲುಬಾಗಿದೆ. ಆದರೆ, ಪದೇ ಪದೇ ಸಂಭವಿಸುತ್ತಿರುವ ಇಂತಹ ಸ್ಫೋಟಗಳು ಅಲ್ಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸ್ಫೋಟದ ನಂತರ ಇಡೀ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹುವಾಶೆಂಗ್ ಕಂಪನಿಯ ಆಡಳಿತ ಮಂಡಳಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ,(ಏಜೆನ್ಸೀಸ್​).