ನವದೆಹಲಿ/ಬೀಜಿಂಗ್: ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಅಸಮಾಧಾನ ಇರುವುದು ಸಾಮಾನ್ಯ. ಹೆಚ್ಚಿನವರು ಸಂಬಳ ಹೆಚ್ಚಿಸುವಂತೆ ಕೇಳುತ್ತಾರೆ ಅಥವಾ ಬೇರೆ ಕೆಲಸ ಹುಡುಕುತ್ತಾರೆ. ಆದರೆ ಇಲ್ಲೊಬ್ಬ ಚೀನಾ ಯುವತಿ ತನ್ನ ಸಂಬಳ ಕಡಿಮೆ ಇದೆ ಎಂಬ ಕಾರಣಕ್ಕೆ ಮಾಡಿರುವ ಪ್ರತಿಭಟನೆ(Weird Protest) ಈಗ ಇಡೀ ವಿಶ್ವದ ಗಮನ ಸೆಳೆದಿದೆ. ಆಕೆ ಕೇವಲ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ, ಬದಲಾಗಿ ಆಫೀಸ್‌ನಲ್ಲೇ ಬರೋಬ್ಬರಿ 5 ಗಂಟೆಗಳ ಕಾಲ ನಿದ್ದೆ ಮಾಡುವ ಮೂಲಕ ತನ್ನ ಆಕ್ರೋಶ ಹೊರಹಾಕಿದ್ದಾಳೆ!
ಏನಿದು ವಿಲಕ್ಷಣ ಪ್ರತಿಭಟನೆ?
ಮಧ್ಯ ಚೀನಾದ ಶಾಂಗ್‌ಕಿಯು ಎಂಬಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ತನ್ನ ಸಂಬಳದ ಬಗ್ಗೆ ತೀವ್ರ ಅಸಮಾಧಾನವಿತ್ತು. "ನಾನು ಮಾಡುವ ಕಷ್ಟಕ್ಕೆ ಕಂಪನಿ ನೀಡುತ್ತಿರುವ ಸಂಬಳ ಏನೇನೂ ಸಾಲದು, ನನ್ನ ಶ್ರಮಕ್ಕೆ ಬೆಲೆಯೇ ಇಲ್ಲ" ಎಂದು ಆಕೆ ಭಾವಿಸಿದ್ದಳು. ಹೀಗಾಗಿ, ಕೆಲಸ ಮಾಡುವುದಕ್ಕಿಂತ ನಿದ್ದೆ ಮಾಡುವುದೇ ಲೇಸು ಎಂದು ನಿರ್ಧರಿಸಿದ ಆಕೆ, ಕಚೇರಿ ಅವಧಿಯಲ್ಲೇ ತನ್ನ ಡೆಸ್ಕ್ ಮೇಲೆ ಬರೋಬ್ಬರಿ 5 ಗಂಟೆಗಳ ಕಾಲ ಮಲಗಿದ್ದಾಳೆ. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, "ನೀವು ಎಷ್ಟು ಪಾವತಿಸುತ್ತೀರೋ, ಅಷ್ಟೇ ಕೆಲಸ ಸಿಗುತ್ತದೆ" (You get what you pay for) ಎಂದು ನೇರವಾಗಿ ಉತ್ತರಿಸಿದ್ದಾಳೆ.
ಬಾಸ್ ಪ್ರಾಣಕ್ಕೇ ಸಂಚಕಾರ ತಂದ ಚಾಕಲೇಟ್ ಕಳ್ಳತನ!
ಇಷ್ಟಕ್ಕೇ ಈ ಡ್ರಾಮಾ ನಿಲ್ಲಲಿಲ್ಲ. ನಿದ್ದೆಯಿಂದ ಎದ್ದ ಯುವತಿ, ಹಸಿವಾದ ಕಾರಣ ತನ್ನ ಬಾಸ್ ಟೇಬಲ್ ಮೇಲಿದ್ದ ಚಾಕಲೇಟ್ ಒಂದನ್ನು ತಿಂದುಬಿಟ್ಟಿದ್ದಾಳೆ. ವಿಷಯ ಏನೆಂದರೆ, ಆಕೆಯ ಬಾಸ್‌ಗೆ ಗ್ಲುಕೋಸ್ ಇನ್ಟಾಲರೆನ್ಸ್ (glucose intolerance) ಸಮಸ್ಯೆಯಿತ್ತು. ರಕ್ತದಲ್ಲಿ ಸಕ್ಕರೆ ಮಟ್ಟ ಹಠಾತ್ ಕುಸಿದಾಗ ತುರ್ತಾಗಿ ಸೇವಿಸಲು ಅವರು ಆ ಚಾಕಲೇಟ್ ಇಟ್ಟುಕೊಂಡಿದ್ದರು. ಆದರೆ ಅದು ಸಿಗದ ಕಾರಣ ಬಾಸ್ ಸುಮಾರು ಕುಸಿದು ಬೀಳುವ ಪರಿಸ್ಥಿತಿಗೆ ತಲುಪಿದ್ದರು.
ಇದರಿಂದ ಆಕ್ರೋಶಗೊಂಡ ಬಾಸ್, "ನೀನು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯಾ? ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೆ ಈಗ ಪ್ರಾಣಕ್ಕೆ ಕುತ್ತು ತರುತ್ತೀಯಾ?" ಎಂದು ಕಿರುಚಾಡಿದ್ದಾರೆ. ಅಲ್ಲದೆ, ಇನ್ನೊಮ್ಮೆ ಹೀಗೆ ಮಾಡಿದರೆ ಕೆಲಸದಿಂದ ವಜಾ ಮಾಡುವುದಾಗಿ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಈ ಘಟನೆಯ ನಂತರ ಯುವತಿಯು ಕಣ್ಣೀರು ಹಾಕುತ್ತಾ ವಿಡಿಯೋವೊಂದನ್ನು ಹರಿಬಿಟ್ಟಿದ್ದಾಳೆ. "ನನ್ನ ಸಂಬಳ ಎಷ್ಟು ಕಡಿಮೆ ಇದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ನಾನು ಕೆಲಸ ಬಿಡುವುದಿಲ್ಲ, ಆದರೆ ನನ್ನ ಪ್ರತಿಭಟನೆಯನ್ನು ಮುಂದುವರಿಸುತ್ತೇನೆ" ಎಂದು ಹೇಳಿಕೊಂಡಿದ್ದಾಳೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಕೆಲವರು ಕಡಿಮೆ ಸಂಬಳದ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದರೆ, ಇನ್ನು ಕೆಲವರು "ಕೆಲಸದ ಸ್ಥಳದಲ್ಲಿ ಹೀಗೆ ನಿದ್ದೆ ಮಾಡುವುದು ಮತ್ತು ಬೇರೆಯವರ ತಿಂಡಿ ಕದಿಯುವುದು ವೃತ್ತಿಪರತೆಯಲ್ಲ" ಎಂದು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್).