ಚೀನಾದಲ್ಲಿ ಪತ್ತೆಯಾದ ಮೊದಲ ಮಾನವ H1N2v ಹಂದಿ ಜ್ವರ ಪ್ರಕರಣ
- ಚೀನಾದಲ್ಲಿ ಮೊದಲ ಮಾನವ H1N2v ಹಂದಿ ಜ್ವರ ಕೇಸ್ ಪತ್ತೆ
- ಯುನ್ನಾನ್‌ನ 2 ವರ್ಷ 10 ತಿಂಗಳ ಮಗುವಿನಲ್ಲಿ ವೈರಸ್
- ಸಧ್ಯ ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಇಲ್ಲ
H1N2v: ಚೀನಾದಲ್ಲಿ ಇದೇ ಮೊದಲ ಬಾರಿಗೆ ಮನುಷ್ಯನಲ್ಲಿ ಅಪರೂಪದ ಜ್ವರದ A(H1N2)v ಸೋಂಕು ಪತ್ತೆಯಾಗಿದೆ. ಹಂದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ವೈರಸ್ ಮನುಷ್ಯನಿಗೆ ತಗುಲಿರುವುದು ಆತಂಕ ಮೂಡಿಸಿದರೂ, ಸದ್ಯಕ್ಕೆ ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಯಾವುದೇ ಉದಾಹರಣೆಗಳು ಸಿಕ್ಕಿಲ್ಲ. ಹೀಗಾಗಿ ಇದು ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇನ್ನು, ಚೀನಾದ ಯುನ್ನಾನ್ ಪ್ರಾಂತ್ಯದ 2 ವರ್ಷ 10 ತಿಂಗಳ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿತ್ತು. ಮಗುವಿಗೆ ಪದೇಪದೇ ಜ್ವರ ಹಾಗೂ ತೀವ್ರ ಕೆಮ್ಮು ಕಾಣಿಸಿಕೊಂಡಿದ್ದು, ಬಳಿಕ ಶ್ವಾಸಕೋಶದಲ್ಲಿ ಉರಿಯೂತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಮಗು ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
H1N2v ಅಂದರೆ ಏನು?
ಎಚ್1ಎನ್2ವಿ ಅಂದ್ರೆ ಎನ್ನುವುದು ಮೂಲತಃ ಹಂದಿಗಳಲ್ಲಿ ಹರಡುವ ವೈರಸ್‌ನ ರೂಪಾಂತರ. ಇಲ್ಲಿ ‘V’ ಎಂದರೆ variant (ರೂಪಾಂತರ) ಅಂದರೆ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವೈರಸ್ ಮನುಷ್ಯನಿಗೆ ಸೋಂಕು ತಗುಲಿಸಿರುವುದು. ಸಾಮಾನ್ಯ ಜ್ವರಕ್ಕೆ ಹೋಲಿಸಿದರೆ, ಇಂತಹ ಪ್ರಾಣಿಜನ್ಯ ವೈರಸ್‌ಗಳು ಮನುಷ್ಯರಲ್ಲಿ ಸಾಮಾನ್ಯವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರಲ್ಲ.
ಹಂದಿಯಿಂದಲೇ ಸೋಂಕು ಬಂದಿತ್ತಾ?
ಮಗು ವಾಸಿಸುತ್ತಿದ್ದ ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಸಮೀಪವೇ ಹಂದಿ, ಕೋಳಿ ಮತ್ತು ಪಾರಿವಾಳಗಳನ್ನು ಸಾಕಲಾಗುತ್ತಿತ್ತು. ಮಗು ಅನಾರೋಗ್ಯಕ್ಕೆ ಒಳಗಾಗುವ ಸಮಯದಲ್ಲೇ ಸಂಬಂಧಿಕರೊಬ್ಬರ ಹಂದಿ ಮೃತಪಟ್ಟಿದ್ದು, ಇನ್ನೆರಡು ಹಂದಿಗಳಲ್ಲಿ ಕೆಮ್ಮು ಮತ್ತು ಅತಿಸಾರ ಕಾಣಿಸಿಕೊಂಡಿತ್ತು. ಸತ್ತ ಹಂದಿಯ ಮಾದರಿಯಲ್ಲಿ ಸೋಂಕು A ಪತ್ತೆಯಾಗಿರುವುದರಿಂದ, ಅದು ಸೋಂಕಿನ ಮೂಲವಾಗಿರಬಹುದು ಎಂದು ವರದಿ ಹೇಳಿದೆ. ಆದರೆ ಸೋಂಕು ನಿಖರವಾಗಿ ಹೇಗೆ ಬಂತು ಎಂಬುದು ಖಚಿತವಾಗಿಲ್ಲ.
ಭಾರತಕ್ಕೆ ಅಪಾಯ ಇದೆಯಾ?
ಸದ್ಯದ ಮಾಹಿತಿಯ ಪ್ರಕಾರ, ಭಾರತದಲ್ಲಿ H1N2v ಪತ್ತೆಯಾಗಿಲ್ಲ. ಏಕಾಏಕಿ ಹರಡುವಿಕೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಪ್ರಾಣಿಗಳಲ್ಲಿ ಹರಡುವ ಇನ್‌ಫ್ಲುಯೆಂಜಾ ವೈರಸ್‌ಗಳ ಮೇಲೆ ನಿರಂತರ ನಿಗಾ ಇಡಬೇಕು. ಆತಂಕ ಪಡುವ ಬದಲು ಜಾಗರೂಕರಾಗಿರುವುದು ಉತ್ತಮ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸಿದೆ.
ಹಂದಿ ಜ್ವರದ ಲಕ್ಷಣಗಳೇನು ?
ಹಂದಿಯಲ್ಲಿ ಕಾಣಿಸುವ ಸೋಂಕಿನಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಸುಸ್ತು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ತೀವ್ರ ಉಸಿರಾಟದ ತೊಂದರೆಯೂ ಆಗಬಹುದು. ವೈರಸ್ ಇರುವ ಹಂದಿಯ ಸಂಪರ್ಕಕ್ಕೆ ಬಂದದವರು ವೈದ್ಯರಿಗೆ ಮಾಹಿತಿ ನೀಡುವುದು ಮುಖ್ಯ. ಸದ್ಯಕ್ಕೆ ಮನುಷ್ಯರಿಂದ ಮನುಷ್ಯರಿಗೆ ಪರಿಣಾಮಕಾರಿಯಾಗಿ ಹರಡುತ್ತಿದೆ ಎಂಬ ಸಾಕ್ಷ್ಯ ಲಭ್ಯವಿಲ್ಲ,(ಏಜೆನ್ಸೀಸ್).