ಗಾಜಾದಲ್ಲಿ ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ; ಇಸ್ರೇಲ್ ದಾಳಿಗೆ 17 ಪ್ಯಾಲೆಸ್ಟೀನಿಯನ್ನರ ಸಾವು  
ವಿದೇಶ

ಗಾಜಾದಲ್ಲಿ ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ; ಇಸ್ರೇಲ್ ದಾಳಿಗೆ 17 ಪ್ಯಾಲೆಸ್ಟೀನಿಯನ್ನರ ಸಾವು | Israeli attack on Gaza

ಪ್ರಮುಖ ಮುಖ್ಯಾಂಶಗಳು

  • ಗಾಜಾದಲ್ಲಿ ಇಸ್ರೇಲ್ ಭೀಕರ ದಾಳಿ: 17 ಸಾವು, ಮಹಿಳೆಯರು ಮತ್ತು ಮಕ್ಕಳೇ ಬಲಿ
  • ಗಾಜಾದಲ್ಲಿ ಮತ್ತೆ ಕಿಡಿ ಹೊತ್ತಿಸಿದ ಇಸ್ರೇಲ್ ದಾಳಿ..!
  • ಇಸ್ರೇಲ್ ಸೈನಿಕನಿಗೆ ಗಾಯ: ಸೇನೆಯ ಸಮರ್ಥನೆ
ಗಾಜಾ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕದನ ವಿರಾಮಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದರೂ, ಗಾಜಾ(Israeli attack on Gaza) ಪಟ್ಟಿಯಲ್ಲಿ ಹಿಂಸಾಚಾರಕ್ಕೆ ಬ್ರೇಕ್ ಬಿದ್ದಿಲ್ಲ. ಬುಧವಾರ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 17 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಈ ಪೈಕಿ ಬಹುಪಾಲು ಬಲಿಯಾದವರು ಮಹಿಳೆಯರು ಮತ್ತು ಅಮಾಯಕ ಮಕ್ಕಳು ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.

ಟಫ್ಫಾ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಸಾವು

ಉತ್ತರ ಗಾಜಾದ ಟಫ್ಫಾ ನೆರೆಹೊರೆಯಲ್ಲಿ ಇಸ್ರೇಲಿ ಪಡೆಗಳು ವಸತಿ ಕಟ್ಟಡವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಒಂದೇ ಕುಟುಂಬದ 11 ಸದಸ್ಯರು ಮೃತಪಟ್ಟಿದ್ದಾರೆ. ಇದರಲ್ಲಿ ಕೇವಲ 10 ದಿನದ ಹಸುಗೂಸು, 5 ತಿಂಗಳ ಮಗು ಮತ್ತು ಅವರ ಅಜ್ಜಿಯೂ ಸೇರಿದ್ದಾರೆ ಎಂದು ಅಲ್-ಶಿಫಾ ಆಸ್ಪತ್ರೆ ತಿಳಿಸಿದೆ. ಈ ದೃಶ್ಯಗಳು ಯುದ್ಧದ ಭೀಕರತೆಯನ್ನು ಮತ್ತೆ ಜಗತ್ತಿನ ಮುಂದೆ ತೆರೆದಿಟ್ಟಿವೆ.

ಖಾನ್ ಯೂನಿಸ್ ಮತ್ತು ಝೈತೂನ್ ಮೇಲೂ ದಾಳಿ

ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ನಿರ್ವಸಿತರ ಡೇರೆಯ ಮೇಲೆ ನಡೆದ ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಹಾಗೆಯೇ ಗಾಜಾ ನಗರದ ಪೂರ್ವ ಭಾಗದ ಝೈತೂನ್ ಪ್ರದೇಶದಲ್ಲಿ ನಡೆದ ಟ್ಯಾಂಕ್ ಶೆಲ್ ದಾಳಿಯಲ್ಲಿ ದಂಪತಿಗಳು ಸೇರಿದಂತೆ ಮತ್ತಿಬ್ಬರು ಬಲಿಯಾಗಿದ್ದಾರೆ.

ಇಸ್ರೇಲ್ ಸೈನಿಕನಿಗೆ ಗಾಯ: ಸೇನೆಯ ಸಮರ್ಥನೆ

ಈ ಘಟನೆಗಳ ನಡುವೆ, ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ತಾವು ವಾಯು ಮತ್ತು ಶಸ್ತ್ರಸಜ್ಜಿತ ಘಟಕಗಳ ಮೂಲಕ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ಸಮರ್ಥಿಸಿಕೊಂಡಿದೆ. ಅಲ್ಲದೆ, ಉಗ್ರರ ಈ ಕೃತ್ಯವು ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಇಸ್ರೇಲ್ ಕಿಡಿಕಾರಿದೆ.

ಅತಂತ್ರ ಸ್ಥಿತಿಯಲ್ಲಿ ಕದನ ವಿರಾಮ

2025ರ ಅಕ್ಟೋಬರ್ 10 ರಿಂದ ಜಾರಿಗೆ ಬಂದಿರುವ ಅಮೆರಿಕ ಬೆಂಬಲಿತ ಕದನ ವಿರಾಮ ಒಪ್ಪಂದದ ನಂತರವೂ ಈವರೆಗೆ 530ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ದಾಳಿಗೆ ಬಲಿಯಾಗಿದ್ದಾರೆ. ಈ ಯುದ್ಧ ಇನ್ನೂ ನಿಂತಿಲ್ಲ, ನಮಗೆ ಕದನ ವಿರಾಮದ ಅನುಭವವೇ ಆಗುತ್ತಿಲ್ಲ ಎಂದು ಗಾಜಾದ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).