3 Indians kidnapped by Indians in Pattaya
- ಕಡಿಮೆ ಬಜೆಟ್ನಲ್ಲಿ ಬ್ಯಾಂಕಾಕ್ ಸುತ್ತಲು ಹೋದ ಭಾರತೀಯರು ಕಿಡ್ನಾಪ್ ಆದ ಘಟನೆ ಬೆಳಕಿಗೆ ಬಂದಿದೆ.
- ಪಟ್ಟಾಯದಲ್ಲಿ ಅರೆಬೆತ್ತಲೆಗೊಳಿಸಿ ಹಿಂಸೆಗೊಳಗಾಗಿದ್ದ ಯುವಕರನ್ನು ರಕ್ಷಿಸಿದ ಥಾಯ್ ಪೊಲೀಸರು.
- 2 ಲಕ್ಷ ರೂಪಾಯಿಗಳನ್ನು ಪಾವತಿಸಿ ಪಟ್ಟಾಯ ನೋಡಲು ಹೋಗಿದ್ದ 23 ರಿಂದ 26 ವರ್ಷದ ಯುವಕರು.
ಬ್ಯಾಂಕಾಕ್: ಕಡಿಮೆ ಬಜೆಟ್ನಲ್ಲಿ ಥಾಯ್ಲೆಂಡ್ ನೋಡುವ ಅಲ್ಲಿನ ಪರಿಸರ, ಬೀಚ್, ಪಟ್ಟಾಯದ ಕಡಲ ತೀರ ಕಣ್ತುಂಬಿಕೊಳ್ಳುವ ಭರವಸೆಯಲ್ಲಿ ಹೊರಟ ಭಾರತೀಯರಿಗೆ ಜೀವನದಲ್ಲಿಯೇ ಇದೊಂದು ಕಟ್ಟ ಪ್ರವಾಸವಾಗಿ ಮಾರ್ಪಟ್ಟ ಘಟನೆ ಬೆಳಕಿಗೆ ಬಂದಿದೆ. ಹೌದು ಅಗ್ಗದ ಪ್ರವಾಸ ಪ್ಯಾಕೇಜ್ಗೆ ಬಲಿಯಾಗಿ ಥಾಯ್ಲೆಂಡ್ಗೆ ತೆರಳಿದ್ದ ಭಾರತೀಯರು ಪಟ್ಟಾಯದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬಂಧಿಯಾಗಿದ್ದರು. ಥಾಯ್ ಪೊಲೀಸರು ಕಾರ್ಯಾಚರಣೆ ಸದ್ಯ ಅವರನ್ನು ಸೋಮವಾರ ರಕ್ಷಿಸಿದ್ದಾರೆ ಎನ್ನಲಾಗಿದೆ.
ಕಿಡ್ನಾಪ್ ಆಗಿದ್ದು ಹೇಗೆ?
ಥಾಯ್ಲೆಂಡ್ ಪತ್ರಿಕೆ ಬ್ಯಾಂಕಾಂಕ್ ಪೋಸ್ಟ್ ಪ್ರಕಾರ, ಪಾಕ್ ಪ್ರಜೆಗಳನ್ನು ಸೇರಿದಂತೆ, ಭಾರತೀಯರನ್ನು ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಮೂವರ ವಯಸ್ಸು 23 ರಿಂದ 26 ವರ್ಷದ ನಡುವೆ ಇದೆ. 70,000 ಬಾತ್ ಅಂದರೆ ಸುಮಾರು 2 ಲಕ್ಷ ರೂಪಾಯಿಗಳನ್ನು ಪಾವತಿಸಿ, ಜು.21ಕ್ಕೆ ಬ್ಯಾಂಕಾಂಕ್ನ ಸುವರ್ಣ ಭೂಮಿ ಏರ್ಪೋರ್ಟ್ಗೆ ತೆರಳಿದರು. ಅಲ್ಲಿ ಒಬ್ಬ ಭಾರತೀಯ ವ್ಯಕ್ತಿ ಅವರನ್ನು ಕರೆದೊಯ್ದನು. ಕೊಠಡಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆಗಳು ಮತ್ತು ಮೂವರು ಭಾರತೀಯರನ್ನು ಅರೆಬೆತ್ತಲೆಗೊಳಿಸಿ ಅಕ್ರಮವಾಗಿ ಕೂಡಿಹಾಕಿದ್ದರು.
ದೈಹಿಕ ಹಿಂಸೆ
ಅಪಹರಣಕ್ಕೊಳಗಾದ ಯುವಕರನ್ನು ಪಟ್ಟಾಯದ ಬಾಂಗ್ ಲಾಮುಂಗ್ ಜಿಲ್ಲೆಯಲ್ಲಿನ ಕಟ್ಟಡವೊಂದರ ಸೆಕೆಂಡ್ ಫ್ಲೋರ್ನಲ್ಲಿದ್ದ ಮನೆಯಲ್ಲಿ ಸಂತ್ರಸ್ತರನ್ನು ಬಂಧಿಸಿ ಇಡಲಾಗಿತ್ತು. ಬಂಧಿತರ ಕೈ-ಕಾಲಿಗೆ ಹಾಗೂ ಬಾಯಿಗೆ ಟೇಪ್ ಸುತ್ತಿ ಮಾತನಾಡದಂತೆ ಬಿಗಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಅವರಿಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ತಲೆಕೆಳಳಾಗಿ ನೇತುಹಾಕಿ, ಕಠಿಣ ವಸ್ತುಗಳಿಂದ ಕಾಲುಗಳ ಪಾದದ ಭಾಗಕ್ಕೆ ಹೊಡೆದು, ಹಲ್ಲೆ ಮಾಡುತ್ತಿದ್ದರು. ಶೌಚಾಲಯಕ್ಕೂ ತೆರಳದಂತೆ ನರಕ ತೋರಿಸಿದ್ದರು ಎನ್ನಲಾಗಿದೆ.
ಕುಟುಂಬಸ್ಥರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ
ಇಷ್ಟಕ್ಕೆ ಸುಮ್ಮನಾಗದ ವಂಚಕರು, ಅಪಹರಣಕ್ಕೊಳಗಾದ ಯುವಕರ ಪೋಷಕರಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ರಕ್ತಸ್ರಾವವಾಗುತ್ತಿದೆ ಎಂದು ಬಿಂಬಿಸಲು ಕೆಂಪು ಬಣ್ಣ ಹಾಕಿ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ನಂಬಿಸುತ್ತಿದ್ದರು. 2.4 ಮಿಲಿಯನ್ ಬಾತ್ (70 ಲಕ್ಷ ರೂಪಾಯಿಗಳಿಗೂ ಅಧಿಕ) ಹಣ ಸುಲಿಗೆ ಮಾಡಲು ಮುಂದಾಗಿತ್ತು ಎನ್ನಲಾಗಿದೆ.
ಅಪಹರಣಕ್ಕೊಳಗಾದ ಯುವರ ಪೋಷಕರು ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ದೂರು ನೀಡಿದರು. ದೂರಿನ ಮೇರೆಗೆ ಕಾರ್ಯಾಚರಣೆ ಶುರು ಮಾಡಿದ ಥಾಯ್ ಪೊಲೀಸರು, ಪಟ್ಟಾಯದ ಕಟ್ಟಡಗಳ ಮೇಲೆ ದಾಳಿ ಮಾಡಿ ಪತ್ತೆ ಕಾರ್ಯ ಶುರು ಮಾಡಿದರು. ಪೊಲೀಸರು ಇನ್ನೇನು ವಂಚಕರನ್ನು ಸೆರೆಹಿಡಿಯು ಹೊತ್ತಲ್ಲಿ ಮಾಹಿತಿ ತಿಳಿದ ಅವರು ವಾಹನದಲ್ಲಿ ಪರಾರಿಯಾಗಲು ಯತ್ನಿಸಿದರು.
ಥಾಯ್ ಪೊಲೀಸರು ಹೇಳಿದ್ದಿಷ್ಟು
ಬ್ಯಾಂಕಾಕ್ ಪೋಸ್ಟ್ ಉಲ್ಲೇಖಿಸಿದ ಪೊಲೀಸ್ ಮೂಲಗಳ ಪ್ರಕಾರ. ಒಂದು ತಿಂಗಳ ಹಿಂದೆ ಚಾಟ್ ಅಪ್ಲಿಕೇಶನ್ ಮೂಲಕ ಭೇಟಿಯಾದ ಪಾಕಿಸ್ತಾನಿ ಪ್ರಜೆಯೊಬ್ಬರು ಮೂವರು ಭಾರತೀಯ ಪುರುಷರನ್ನು ಅಪಹರಿಸಲು ಸೂಚಿಸಿದ್ದರು ಎಂದು ಬಂಧಿತರು ಹೇಳಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).