ChatGPT  
ವಿದೇಶ

'ChatGPT'ಯೇ ಆಯ್ತು ಡಿಟೆಕ್ಟಿವ್: ಸುಳ್ಳು ಹೇಳಿ ಡೇಟಿಂಗ್ ಮಾಡುತ್ತಿದ್ದ ಮೋಸಗಾರನ ಬಣ್ಣ ರಟ್ಟು ಮಾಡಿದ AI!

ನ್ಯೂಯಾರ್ಕ್: ಆಧುನಿಕ ಡಿಜಿಟಲ್ ಯುಗದಲ್ಲಿ ನಾವು ಎಐಗೆ ನೀಡುವ ಪ್ರತಿಯೊಂದು ಮಾಹಿತಿಯೂ ನಮ್ಮ ವ್ಯಕ್ತಿತ್ವದ ದರ್ಪಣವಾಗಿರುತ್ತದೆ. ನ್ಯೂಯಾರ್ಕ್‌ನಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ತಾನು ಅವಿವಾಹಿತ ಎಂದು ನಂಬಿಸಿ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಅಸಲಿ ಮುಖವಾಡವನ್ನು ಅವನ 'ಬೆಸ್ಟ್ ಫ್ರೆಂಡ್' ಚಾಟ್‌ಜಿಪಿಟಿ ಬಯಲು ಮಾಡಿದೆ.
27 ವರ್ಷದ ಯುವತಿಯೊಬ್ಬಳು ನ್ಯೂಯಾರ್ಕ್‌ನ ಹಣಕಾಸು ಕ್ಷೇತ್ರದಲ್ಲಿ (Finance professional) ಕೆಲಸ ಮಾಡುತ್ತಿದ್ದ 40ರ ಹರೆಯದ ವ್ಯಕ್ತಿಯೊಂದಿಗೆ ಡಿನ್ನರ್ ಡೇಟಿಂಗ್‌ಗೆ ಹೋಗಿದ್ದಳು. ಆ ವ್ಯಕ್ತಿ ಇಡೀ ಊಟದ ಸಮಯದಲ್ಲಿ ತನ್ನ ಫೋನ್‌ನಲ್ಲಿ ಚಾಟ್‌ಜಿಪಿಟಿ ಬಳಸುತ್ತಾ, ಕಾಕ್‌ಟೇಲ್‌ಗಳ ಇತಿಹಾಸ ಮತ್ತು ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಅದಕ್ಕೆ ಪ್ರಶ್ನೆ ಕೇಳಿ, ಬರುವ ಉತ್ತರಗಳನ್ನು ಯುವತಿಗೆ ಗಟ್ಟಿಯಾಗಿ ಓದಿ ಹೇಳುತ್ತಿದ್ದನು. ಇದು ಆ ಯುವತಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡಿದರೂ ಆಕೆ ಅದನ್ನು ತಮಾಷೆಯಾಗಿ ಸ್ವೀಕರಿಸಿದ್ದಳು.

'ನನ್ನ ಬಗ್ಗೆ ಯಾವುದನ್ನು ಬೇಕಾದರೂ ಕೇಳು' ಅಂದಿದ್ದೇ ಮುಳುವಾಯ್ತು!

ರಾತ್ರಿಯ ಅಂತ್ಯದಲ್ಲಿ ಆ ಯುವತಿ, "ನೀವು ಚಾಟ್‌ಜಿಪಿಟಿ ಬಗ್ಗೆ ತುಂಬಾ ಗೀಳು ಹೊಂದಿದ್ದೀರಿ" ಎಂದು ತಮಾಷೆ ಮಾಡಿದಳು. ಅದಕ್ಕೆ ಆತ ಅತ್ಯಂತ ಆತ್ಮವಿಶ್ವಾಸದಿಂದ, "ಚಾಟ್‌ಜಿಪಿಟಿ ಮತ್ತು ನಾನು ಬೆಸ್ಟ್ ಫ್ರೆಂಡ್ಸ್. ಅದು ನನ್ನ ಬಗ್ಗೆ ಎಲ್ಲವನ್ನೂ ತಿಳಿದಿದೆ. ಬೇಕಿದ್ದರೆ ನೀನೇ ಅದನ್ನು ನನ್ನ ಬಗ್ಗೆ ಏನಾದರೂ ಕೇಳು," ಎಂದು ತನ್ನ ಫೋನ್ ಅವಳ ಕೈಗಿಟ್ಟನು.
ಆಕೆ ಕುತೂಹಲದಿಂದ ಚಾಟ್‌ಜಿಪಿಟಿಯಲ್ಲಿ ಹೀಗೆ ಟೈಪ್ ಮಾಡಿದಳು: "ಬೇರೆ ಯಾರೊಂದಿಗೂ ಹಂಚಿಕೊಳ್ಳದ, ಅವನಲ್ಲಿ ನನಗೆ ಇಷ್ಟವಾಗುವಂತಹ ಒಂದು ವಿಷಯವನ್ನು ಹೇಳು." ಆಗ ಚಾಟ್‌ಜಿಪಿಟಿ ನೀಡಿದ ಉತ್ತರ ಆ ಯುವತಿಗೆ ಸಿಡಿಲು ಬಡಿದಂತಾಯಿತು: "ನೀವು ನಿಮ್ಮ ಪತ್ನಿಗೆ ಎಷ್ಟು ಕಾಳಜಿಯುಳ್ಳ ಪತಿ ಮತ್ತು ನಿಮ್ಮ ಮಕ್ಕಳಿಗೆ ಎಷ್ಟು ಉತ್ತಮ ತಂದೆಯಾಗಿದ್ದೀರಿ ಎಂಬುದು ನನಗೆ ತುಂಬಾ ಇಷ್ಟ." ಎಂದು ಹೇಳಿದೆ. 
ಎಐ ರಹಸ್ಯ ಬಿಚ್ಚಿಟ್ಟಿದ್ದು ಹೇಗೆ?
ಅಲ್ಲಿಯವರೆಗೆ ತಾನು 'ಸಿಂಗಲ್' ಎಂದು ನಂಬಿಸಿದ್ದ ವ್ಯಕ್ತಿ, ವಾಸ್ತವದಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಸಂಸಾರಿಯಾಗಿದ್ದ. ಆತ ಈ ಹಿಂದೆ ಚಾಟ್‌ಜಿಪಿಟಿಯನ್ನು ತನ್ನ ವೈಯಕ್ತಿಕ ಸಮಸ್ಯೆಗಳು, ಕುಟುಂಬದ ನಿರ್ವಹಣೆ ಅಥವಾ ಕೌಟುಂಬಿಕ ಸಲಹೆಗಳಿಗಾಗಿ ಬಳಸಿದ್ದನು. ಚಾಟ್‌ಜಿಪಿಟಿ ತನ್ನ ಮೆಮೊರಿ (Memory) ವೈಶಿಷ್ಟ್ಯದ ಮೂಲಕ ಈ ಹಳೆಯ ದತ್ತಾಂಶವನ್ನು ನೆನಪಿಟ್ಟುಕೊಂಡು, ಸತ್ಯವನ್ನು ಕ್ಷಣಾರ್ಧದಲ್ಲಿ ಹೊರಹಾಕಿತು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, "ತಂತ್ರಜ್ಞಾನವು ಪ್ರಣಯವನ್ನು ಹಾಳುಮಾಡುತ್ತಿದೆ" ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, "ಚಾಟ್‌ಜಿಪಿಟಿ ಆ ಯುವತಿಗೆ ದೊಡ್ಡ ಉಪಕಾರ ಮಾಡಿದೆ, ಒಬ್ಬ ಮೋಸಗಾರನಿಂದ ಅವಳನ್ನು ಕಾಪಾಡಿದೆ" ಎಂದು ಹಲವರು ಶ್ಲಾಘಿಸುತ್ತಿದ್ದಾರೆ,(ಏಜೆನ್ಸೀಸ್​).