Kannada Kali ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕ ನೆಲದಲ್ಲೂ ಮೊಳಗಿದ ಕನ್ನಡದ ನಾದ: ಆಲ್ಬನಿ 'ಕನ್ನಡ ಕಲಿ' ಪದವಿ ಪ್ರದಾನ ಸಮಾರಂಭ ವೈಭವ! Kannada Kali

ನ್ಯೂಯಾರ್ಕ್: ಅಮೆರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಆಲ್ಬನಿಯ 'ಕನ್ನಡ ಕಲಿ' (

Kannada Kali)

ಶಾಲೆಯ ವಾರ್ಷಿಕ ಪದವಿ ಪ್ರದಾನ ಸಮಾರಂಭವು ಭಾನುವಾರ (ಆ.0 2) ಬಾಲ್‌ಸ್ಟನ್ ಲೇಕ್‌ನ ವೆಟರನ್ಸ್ ಮೆಮೋರಿಯಲ್ ಪಾರ್ಕ್‌ನಲ್ಲಿ ಸಂಭ್ರಮದಿಂದ ನಡೆಯಿತು.

ಕನ್ನಡ ಕಲಿಕೆಗೆ ಆದ್ಯತೆ ನೀಡಲು ಕರೆ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾರಾಯಣ ರಾವ್ ಬೆಂಕಿ (81) ಮಾತನಾಡಿ, "ಕರ್ನಾಟಕದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಮುಂದಿನ ಪೀಳಿಗೆಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು ಮತ್ತು ಪೋಷಕರ ಸೇವೆ ಶ್ಲಾಘನೀಯ. ಭಾಷೆಯು ಮಕ್ಕಳನ್ನು ತಮ್ಮ ಬೇರುಗಳೊಂದಿಗೆ ಬೆಸೆಯುವ ಮುಖ್ಯ ಕೊಂಡಿ. ಮಕ್ಕಳು ಇತರ ಚಟುವಟಿಕೆಗಳಲ್ಲಿ ತೊಡಗಿದ್ದರೂ, ಕನ್ನಡ ಕಲಿಕೆಗೆ ಪೋಷಕರು ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಪೋಷಕರ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮ

ಈ ಬಾರಿಯ ಸಮಾರಂಭವನ್ನು ಪಾಲಕರಾದ ಮುಕ್ತಾ ಜೋಶಿ, ಸುಪ್ರಿಯಾ ವಾಳ್ವೇಕರ್ ಹಾಗೂ ರಾಜೀವ್ ಮಹಾಜನ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಚೈತಾಲಿ ಕಲ್ಯಾಣಪುರ ಅವರು ಶಾಲೆಯ ಸುಮಾರು ಒಂದೂವರೆ ದಶಕದ ಪಯಣವನ್ನು ನೆನಪಿಸಿಕೊಂಡರು. 2011-12ರಲ್ಲಿ ಬೆಂಕಿ ಬಸಣ್ಣ ಅವರ ನೇತೃತ್ವದಲ್ಲಿ ಆರಂಭವಾದ ಈ ಪ್ರಯಾಣಕ್ಕೆ ಮೊದಲ ಶಿಕ್ಷಕಿ ಮೀನಾ ಕೃಷ್ಣಪ್ಪ, ಪ್ರವೀಣ್ ರಾವ್, ಅಲ್ಕಾ, ಮಮತಾ, ಲತಾ ಮೇಡಂ ಹಾಗೂ ಪ್ರಸ್ತುತ ಶಿಕ್ಷಕಿ ಮಾಧವಿ ದೀಕ್ಷಿತ್ ಕೊಡುಗೆ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಮಕ್ಕಳು ಕನ್ನಡದಲ್ಲೇ ಕಥೆ, ಹಾಡು, ಭಾಷಣ ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು. ಯಶಸ್ವಿಯಾಗಿ ತರಗತಿ ಪೂರ್ಣಗೊಳಿಸಿದ ಹರಿರಾಮ್, ನಚಿಕೇತ, ಮೊನ್ವಿತ (4ನೇ ಹಂತ), ಜೇಕ್, ಅವ್ಯುಕ್ತ್, ಅಧಿರಾ (3ನೇ ಹಂತ), ಜೇನ್, ಅವ್ನಿ, ನಮನ್ (2ನೇ ಹಂತ), ನಿಹಾರಿಕಾ ಹಾಗೂ ಸುವೀರ್ (1ನೇ ಹಂತ) ಅವರಿಗೆ ಪ್ರಮಾಣಪತ್ರ ಮತ್ತು ಪದಕ ವಿತರಿಸಲಾಯಿತು. 'ಕನ್ನಡ ಕೂಟ ಆಫ್ ಕ್ಯಾಪಿಟಲ್ ಡಿಸ್ಟ್ರಿಕ್ಟ್' (KKCD) ಅಧ್ಯಕ್ಷೆ ಜ್ಯೋತಿ ಮುರುಂಡಿ ಭಾಗವಹಿಸಿ, ತಲಾ 20 ಡಾಲರ್ ನಗದು ಪ್ರೋತ್ಸಾಹಧನ ನೀಡಲಾಯಿತು.

ಕಾರ್ಯಕ್ರಮದ ನಂತರ ಶಿಕ್ಷಕಿ ಮಾಧವಿ ದೀಕ್ಷಿತ್ ಅವರು ಆಯೋಜಿಸಿದ್ದ ಲಗೋರಿ, ಖೋ-ಖೋ, ಕಬಡ್ಡಿ ಆಟಗಳಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಿದರು. ಮನೆಯಿಂದ ತಂದಿದ್ದ ಖಾದ್ಯಗಳ 'ಪಾಟ್‌ಲಕ್' ಭೋಜನ ಹಬ್ಬದ ಕಳೆ ತಂದಿತು. ಸ್ಥಳ ಕಾಯ್ದಿರಿಸಲು ಮುರಳಿ ಮತ್ತು ಸುಷ್ಮಾ ಹಾಗೂ ಪ್ರಮಾಣಪತ್ರ ಮುದ್ರಿಸಲು ಉಮಾ ಬೆಂಕಿ ನೆರವಾದರು.

ಅಜ್ಜನ 11 ಡಾಲರ್; ಪುಟ್ಟ ಅವ್ಯಾನ್‌ನ ದೊಡ್ಡ ಮನಸ್ಸು!

ಮುಖ್ಯ ಅತಿಥಿ ನಾರಾಯಣ ರಾವ್ ಬೆಂಕಿ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಲು ತಮ್ಮ ಸ್ವಂತ ಹಣದಿಂದ 11 ಡಾಲರ್ ನೀಡಿದರು. ಕಾರ್ಯಕ್ರಮದ ನಂತರ 8 ವರ್ಷದ ಅವ್ಯಾನ್ ಕಲ್ಯಾಣಪುರ, "ಅಜ್ಜ ವಯಸ್ಸಾದವರು, ಅವರಿಗೂ ಹಣ ಬೇಕಲ್ಲವೇ?" ಎಂದು ಕೇಳಿ, ಅಜ್ಜ ತನಗೆ ಕೊಟ್ಟಿದ್ದ 11 ಡಾಲರ್​ಗೆ ತನ್ನ ಸ್ವಂತ 9 ಡಾಲರ್ ಸೇರಿಸಿ ಒಟ್ಟು 20 ಡಾಲರ್​ನ್ನು ಅಜ್ಜನಿಗೇ ಮರಳಿ ಕೊಡಲು ಮುಂದಾದರು. 81 ವರ್ಷದ ಅಜ್ಜ ಮಕ್ಕಳಿಗೆ ಉಳಿತಾಯದ ಪಾಠ ಹೇಳಿದರೆ, ಎಂಟು ವರ್ಷದ ಅವ್ಯಾನ್ ಹಿರಿಯರ ಬಗ್ಗೆ ಕಾಳಜಿ ಮತ್ತು ಪ್ರೀತಿಯ ದೊಡ್ಡ ಮನಸ್ಸಿನ ಪಾಠವನ್ನು ನೆನಪಿಸಿದರು.