ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್
- ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್
- 14 ದಿನಗಳ ಕದನ ವಿರಾಮ ಘೋಷಣೆ
- ಹೊರ್ಮುಜ್ ಜಲಸಂಧಿಯಲ್ಲಿ ಶಾಂತಿ ಸ್ಥಾಪಿಸಿ ಎಂದ ಟ್ರಂಪ್
- ಅಮೆರಿಕ ಮುಂದೆ ಕೆಲ ಷರತ್ತುಗಳನ್ನು ಮುಂದಿಟ್ಟ ಇರಾನ್
- ಲೆಬನಾನ್ ಮೇಲೆ ದಾಳಿ ನಿಲ್ಲಿಸಲ್ಲ ಎಂದ ನೆತನ್ಯಾಹು
ವಾಷಿಂಗ್ಟನ್/ಟೆಹ್ರಾನ್: ಕಳೆದೊಂದು ತಿಂಗಳಿಂದ ಇಡೀ ಜಗತ್ತಿನ ನೆಮ್ಮದಿಯನ್ನು ಭಂಗ ಮಾಡಿದ್ದ ಮಧ್ಯಪ್ರಾಚ್ಯದಲ್ಲಿನ ಕದನಕ್ಕೆ ಈಗ ತಾತ್ಕಾಲಿಕ ಬ್ರೇಕ್ ದೊರೆತಿದೆ. ಇಡೀ ಇರಾನ್ನ್ನೇ ನಾಶ ಪಡಿಸುತ್ತೇನೆಂದು ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಎರಡು ವಾರಗಳ ಕದನ ವಿರಾಮ (Ceasefire in the Middle East) ವನ್ನು ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ಅಧ್ಯಕ್ಷ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ನಂತರ ಇರಾನ್ ಮೇಲೆ ನಡೆಸಬೇಕಿದ್ದ ದಾಳಿಯನ್ನು ಮುಂದೂಡಿದ್ದು, ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ತನ್ನ ಪಡೆಗಳನ್ನು ಹಿಂಪಡೆಯಬೇಕು ಮತ್ತು ಆ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಬೇಕು. ಆಗ ನಾವು ದಾಳಿಯ ಯೋಜನೆಯನ್ನು ಕೈಬಿಟ್ಟು, ಕದನ ವಿರಾಮವನ್ನು ಸ್ವಾಗತಿಸುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ.
ಹೊರ್ಮುಜ್ನಲ್ಲಿ ಶಾಂತಿ ಸ್ಥಾಪನೆಯಾಗಲಿದೆಯೇ?
ಅಮೆರಿಕ ಕದನ ವಿರಾಮ ಘೋಷಿಸಲು, ಇರಾನ್ ಹೊರ್ಮುಜ್ ಜಲಸಂಧಿ ಮೇಲೆ ಹೊಂದಿರುವ ಹಿಡಿತವೇ ಕಾರಣವಾಗಿದೆ. ಕೇವಲ 34 ಕಿ.ಮೀ ಅಗಲವಾಗಿರುವ ಈ ಜಲಸಂಧಿ ಪ್ರಪಂಚದ ಶೇ. 20 ರಷ್ಟು ಇಂಧನ ಹಾಗೂ ಶೇ. 25 ರಷ್ಟು ಕಚ್ಚಾ ತೈಲ ಈ ಮಾರ್ಗದ ಮೂಲಕವೇ ಆಮದು ಮತ್ತು ರಫ್ತಾಗುವ ಕಾರಣ ಈ ಜಲಸಂಧಿಯಲ್ಲಿ ಏನಾದರೂ ಸಂಪೂರ್ಣವಾಗಿ ಸ್ಥಗಿತಗೊಂಡರೆ ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಉಂಟಾಗುವುದು ನಿಶ್ಚಿತವಾಗಿದೆ.
ಇದೇ ಕಾರಣಕ್ಕೆ ಅಮೆರಿಕ, ಇರಾನ್‌ಗೆ ಈ ಹೊರ್ಮುಜ್ ಜಲಸಂಧಿಯಲ್ಲಿ ಮೇಲೆ ವಿಧಿಸಿರುವ ನಿರ್ಬಂಧವನ್ನು ಹಿಂತೆಗೆದುಕೊಳ್ಳುವಂತೆ ಬೇಡಿಕೆಯಿಟ್ಟಿದೆ. ಆದರೆ ಈ ಹೊರ್ಮುಜ್ ಜಲಸಂಧಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿಡಿತದಲ್ಲಿದ್ದು, ಇವರು ನಿಗದಿತ ಸಂಖ್ಯೆಯ ಹಡಗುಗಳನ್ನು ಮಾತ್ರ ಈ ಮಾರ್ಗದಲ್ಲಿ ಚಲಿಸಲು ಅನುಮತಿ ನೀಡಿದೆ. ಈ ಮಾರ್ಗದಲ್ಲಿ ಎಲ್ಲಾ ಹಡಗುಗಳು ಚಲಿಸುವಂತಾಗಬೇಕು ಎನ್ನುವುದು ಅಮೆರಿಕದ ಉದ್ದೇಶವಾಗಿದೆ, ಆದರೆ ಈ ಕುರಿತು ಇರಾನಿನ ಕಡೆಯಿಂದ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಹೊರ್ಮುಜ್ ಸ್ಥಗಿತಗೊಂಡರೆ ಭಾರತಕ್ಕೆ ಏನು ತೊಂದರೆ?
ಒಂದು ವೇಳೆ ಹೊರ್ಮುಲ್ ಜಲಸಂಧಿ ಸಂಪೂರ್ಣವಾಗಿ ಸ್ಥಗಿತಗೊಂಡರೆ ಭಾರತ ಅರ್ಥಿಕ ಮತ್ತು ಇಂಧನ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆ.
ಭಾರತವು ತನ್ನ ಕಚ್ಚಾ ತೈಲದ ಸುಮಾರು 50% ಕ್ಕಿಂತ ಹೆಚ್ಚಿನ ಪಾಲನ್ನು ಕೊಲ್ಲಿ ರಾಷ್ಟ್ರಗಳಾದ ಇರಾಕ್, ಸೌದಿ ಅರೇಬಿಯಾ, ಯುಎಇ ಗಳಿಂದ ಪಡೆಯುತ್ತಿದ್ದು, ಈ ತೈಲವು ಹೊರ್ಮುಜ್ ಮೂಲಕವೇ ಭಾರತವನ್ನು ತಲುಪುತ್ತದೆ. ಇದೇನಾದರೂ ಸ್ಥಗಿತಗೊಂಡರೆ ತೈಲ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತದೆ.
ಭಾರತವು ತನ್ನ ಒಟ್ಟು ಎಲ್‌ಪಿಜಿ (LPG) ಆಮದಿನ ಶೇ. 50-60 ರಷ್ಟನ್ನು ಈ ಹೊರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ತರುತ್ತದೆ. ಈ ಜಲಸಂಧಿ ಸ್ಥಗಿತಗೊಂಡರೆ ಅಡುಗೆ ಅನಿಲದ ಕೊರತೆಗೆ ಕಾರಣವಾಗಿ ಬೆಲೆ ಏರಿಕೆ ದಾರಿ ಮಾಡಿ ಕೊಡುತ್ತದೆ.
ಈ ಜಲಸಂಧಿ ತೈಲ ಮಾರುಕಟ್ಟೆಯೊಂದಿಗೆ ನೇರ ಸಂಬಂಧ ಹೊಂದಿರುವ ಕಾರಣ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 130 ರಿಂದ 150 ಡಾರಲ್ ತಲುಪಿದರೆ, ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚಾಗುತ್ತದೆ. ಇದರಿಂದ ಸಾರಿಗೆ ಶುಲ್ಕ ಏರಿಕೆಯಾದ ಪರಿಣಾಮ ಹಣ್ಣು-ತರಕಾರಿ, ದಿನಸಿ ಸೇರಿದಂತೆ ಅಗತ್ಯ ಸಾಮಾಗ್ರಿಗಳ ಬೆಲೆ ಮುಗಿಲು ಮುಟ್ಟುವಂತಾಗುತ್ತದೆ.
ಇರಾನ್ ಏನು ಹೇಳುತ್ತಿದೆ?
ಅಮೆರಿಕ ಅಧ್ಯಕ್ಷರ ಕದನ ವಿರಾಮವನ್ನು ಒಪ್ಪಿಕೊಂಡಿರುವ ಇರಾನ್, ನಮ್ಮ ಮೇಲೆ ಅಮೆರಿಕ ದಾಳಿ ನಿಲ್ಲಿಸಿದರೆ ನಾವೂ ಸಹ ನಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ತಡೆ ಹಿಡಿಯುದಾಗಿ ಎಕ್ಸ್ನಲ್ಲಿ ತಿಳಿಸಿದೆ. ಹಾಗೆಯೇ ಈ ಕದನ ವಿರಾಮ ಘೋಷಣೆಗೆ ಕಾರಣೀಕರ್ತರಾದ ಪಾಕ್ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ರನ್ನು ಅಭಿನಂದಿಸಿದೆ.
ಹಾಗೆಯೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷ ಕೊನೆಗೊಳಿಸಲು ಇರಾನ್ ಕದನ ವಿರಾಮದ ಜೊತೆಗೆ ತನ್ನ ಕೆಲವು ಬೇಡಿಕೆಗಳನ್ನು ಅಮೆರಿಕಾ ಮತ್ತು ಇಸ್ರೇಲ್ನ ಮುಂದಿಟ್ಟಿದೆ.
ಶಾಶ್ವತ ಕದನ ವಿರಾಮ
ಕೇವಲ 45 ದಿನಗಳ ತಾತ್ಕಾಲಿಕ ವಿರಾಮಕ್ಕೆ ಇರಾನ್ ಸಮ್ಮತಿಸುತ್ತಿಲ್ಲ. ಬದಲಾಗಿ, ಯುದ್ಧಕ್ಕೆ ಸಂಪೂರ್ಣ ಮತ್ತು ಶಾಶ್ವತ ಅಂತ್ಯ ಬೇಕೆಂದು ಒತ್ತಾಯಿಸುತ್ತಿದೆ.
ಆಕ್ರಮಣ ಮಾಡದ ಭರವಸೆ
ಭವಿಷ್ಯದಲ್ಲಿ ಅಮೆರಿಕ ಅಥವಾ ಇಸ್ರೇಲ್ ತನ್ನ ಮೇಲೆ ಮತ್ತೆ ದಾಳಿ ಮಾಡುವುದಿಲ್ಲ ಎಂಬ ದೃಢವಾದ ಅಂತರರಾಷ್ಟ್ರೀಯ ಭದ್ರತಾ ಖಾತರಿಯನ್ನು ಇರಾನ್ ಕೇಳುತ್ತಿದೆ.
ನಿರ್ಬಂಧಗಳ ತೆರವು
ಇರಾನ್ ಮೇಲೆ ಅಮೆರಿಕದ ಆದೇಶದ ಮೇರೆಗೆ ಪ್ರಪಂಚಾದಾದ್ಯಂತ ಹೇರಲಾಗಿರುವ ಆರ್ಥಿಕ ನಿರ್ಬಂಧಗಳನ್ನು (Sanctions) ತೆಗೆದುಹಾಕಬೇಕು ಮತ್ತು ಫ್ರೀಜ್ ಆಗಿರುವ ಇರಾನ್‌ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು.
ಸಾರ್ವಭೌಮತ್ವವನ್ನು ಒಪ್ಪಬೇಕು
ಇರಾನ್‌ನ ಸಾರ್ವಭೌಮ ಹಕ್ಕುಗಳನ್ನು ಅಮೆರಿಕ ಗೌರವಿಸಬೇಕು ಮತ್ತು ಆಂತರಿಕ ವಿಷಯಗಳಲ್ಲಿ ಪಶ್ಚಿಮ ದೇಶಗಳು ಹಸ್ತಕ್ಷೇಪ ಮಾಡಬಾರದು ಎಂಬುದು ಅಧ್ಯಕ್ಷ ಪೆಜೆಶ್ಕಿಯನ್ ಅವರ ಸ್ಪಷ್ಟ ನಿಲುವಾಗಿದೆ.
ಪರಿಹಾರ ಕೊಡಬೇಕು
ಇತ್ತೀಚಿನ ಸಂಘರ್ಷದಿಂದ ಇರಾನ್‌ನ ಮೂಲಸೌಕರ್ಯಗಳಿಗೆ ಅದರಲ್ಲೂ ವಿಶೇಷವಾಗಿ ಇಂಧನ ಕ್ಷೇತ್ರಕ್ಕೆ ಆಗಿರುವ ಹಾನಿಗೆ ಪರಿಹಾರವನ್ನು ಅಮೆರಿಕ ಮತ್ತು ಇಸ್ರೇಲ್ ನೀಡಬೇಕು ಎನ್ನುವುದು ಇರಾನ್‌ನ ವಾದವಾಗಿದೆ.
ಲೆಬನಾನ್ ಮೇಲೆ ದಾಳಿ ಸಲ್ಲದು
ಯಾವುದೇ ಕದನ ವಿರಾಮ ಒಪ್ಪಂದವು ಕೇವಲ ಇರಾನ್‌ಗೆ ಸೀಮಿತವಾಗಿರಬಾರದು, ಅದು ಲೆಬನಾನ್ ಮತ್ತು ಹಿಜ್ಬುಲ್ಲಾ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎನ್ನುವುದು ಇರಾನ್‌ನ ಷರತ್ತಾಗಿದೆ.
ಇಸ್ರೇಲ್ನ ವಾದವೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಕದನ ವಿರಾಮವನ್ನು ಒಪ್ಪಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು, ಹಿಜ್ಬೊಲ್ಲಾ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹೇರಿರುವ ನಿರ್ಬಂಧನ್ನು ತೆಗೆದು ಹಾಕುವುದು ಮತ್ತು ತನ್ನ ಪಡೆಗಳನ್ನು ಹಿಂತೆಗೆದು ಕೊಳ್ಳುವುದು ಈ ಕದನ ವಿರಾಮದ ಉದ್ದೇಶವಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ಕದನ ವಿರಾಮವು ಇರಾನ್‌ಗೆ ಮಾತ್ರ ಸಂಬಂಧಿಸಿದ್ದು, ಇದರಲ್ಲಿ ಲೆಬನಾನ್ ಮತ್ತು ಹಿಜ್ಬೊಲ್ಲಾದ ಯಾವುದೇ ಉಲ್ಲೇಖವಿಲ್ಲ, ಹಾಗೂ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಇಸ್ರೇಲ್ನ ವಾದವಾಗಿದೆ, (ಏಜನ್ಸೀಸ್).