ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ನೇತೃತ್ವದ ಇರಾನ್​ ನಿಯೋಗ ಆಗಮಿಸಿರುವುದು. 
ವಿದೇಶ

ಇರಾನ್​-ಅಮೆರಿಕ ನಡುವೆ ಕದನ ವಿರಾಮ; ಇಂದು ಪಾಕ್​ನಲ್ಲಿ ಉನ್ನತ ಮಟ್ಟದ ಸಭೆ: ಇಸ್ಲಾಮಾಬಾದ್​ಗೆ ಆಗಮಿಸಿದ ಇರಾನ್ ನಿಯೋಗ | High-level meeting

ಇಸ್ಲಾಮಾಬಾದ್​: ಇರಾನ್​ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಕದನ ವಿರಾಮದ ಬಳಿಕ ಇಂದು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಶಾಂತಿ ಮಾತುಕತೆಗೆ ಉನ್ನತಮಟ್ಟದ ಸಭೆ(High-level meeting) ನಡೆಯಲಿದ್ದು, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ನೇತೃತ್ವದ ಇರಾನಿನ ನಿಯೋಗವು ತಡರಾತ್ರಿ(ಏ. 10) ಇಸ್ಲಾಮಾಬಾದ್​ಗೆ ಆಗಮಿಸಿದೆ ಎಂದು ವರದಿಯಾಗಿದೆ.
ಇರಾನ್​ ನಿಯೋಗದಲ್ಲಿ ಇರಾನ್ ವಿದೇಶಾಂಗ ಸಚಿವರು, ರಕ್ಷಣಾ ಮಂಡಳಿ ಕಾರ್ಯದರ್ಶಿ, ಕೇಂದ್ರ ಬ್ಯಾಂಕ್ ಗವರ್ನರ್ ಹಾಗೂ ಹಲವಾರು ಸಂಸತ್ ಸದಸ್ಯರು ಸೇರಿದಂತೆ ಹಿರಿಯ ರಾಜಕೀಯ, ಮಿಲಿಟರಿ ಮತ್ತು ಆರ್ಥಿಕ ಅಧಿಕಾರಿಗಳು ಸೇರಿದ್ದಾರೆ. ಇನ್ನೂ ಅಮೆರಿಕ ಇರಾನ್​ನ ಪೂರ್ವಭಾವಿ ಷರತ್ತುಗಳನ್ನು ಒಪ್ಪಿಕೊಂಡರೇ ಮಾತ್ರ ಮಾತುಕತೆ ಮುಂದುವರೆಯುತ್ತದೆ ಎಂದು ಹೇಳಿದೆ.
ಕದನ ವಿರಾಮ ಮತ್ತು ನಿರ್ಬಂಧಿತ ಇರಾನಿನ ಸ್ವತ್ತುಗಳ ಬಿಡುಗಡೆ ಈ ಎರಡು ಅಂಶಗಳನ್ನು ಪರಸ್ಪರ ಒಪ್ಪಿಕೊಂಡಿದ್ದು, ಇನ್ನೂ ಜಾರಿಗೆ ತಂದಿಲ್ಲ. ಮಾತುಕತೆಗಳು ಪ್ರಾರಂಭವಾಗುವ ಮೊದಲು ಈ ಎರಡು ವಿಷಯಗಳನ್ನು ಪೂರೈಸಬೇಕು ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಎಂದು ಹೇಳಿದ್ದಾರೆ.

ಜೆ.ಡಿ.ವ್ಯಾನ್ಸ್​ ನೇತೃತ್ವದ ಅಮೆರಿಕ ನಿಯೋಗ

ಅಮೆರಿಕವನ್ನು ಪ್ರತಿನಿಧಿಸುವ ಉನ್ನತ ಮಟ್ಟದ ನಿಯೋಗ ನಿನ್ನೆಯೇ ಪಾಕ್​ಗೆ ಆಗಮಿಸಿದ್ದು, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಪಾಕ್​ಗೆ ತೆರಳುವ ಮೊದಲು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​, ಶಾಂತಿ ಮಾತುಕತೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದು, ನಾವು ಮಾತುಕತೆಗಾಗಿ ಎದುರು ನೋಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಇದೇ ವೇಳೆ ಶಾಂತಿ ಮಾತುಕತೆಗೆ ಬರದೇ ಅಮೆರಿಕ ಜೊತೆ ಆಟವಾಡಬಾರದು ಎಂದು ಇರಾನ್​ಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಶಾಂತಿ ಮಾತುಕತೆಗೆ ಸಂಬಂಧಪಟ್ಟಂತೆ ಟ್ರಂಪ್ ಆಡಳಿತವು ತನ್ನದೇ ಆದ 15 ಅಂಶಗಳನ್ನು ಸಿದ್ದಪಡಿಸಿದ್ದು, ವಿವರಗಳನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು, ಹೆಚ್ಚು ಸಮೃದ್ಧವಾಗಿರುವ ಯುರೇನಿಯಂನ ದಾಸ್ತಾನುಗಳನ್ನು ಒಪ್ಪಿಸಬೇಕು, ತನ್ನ ಮಿಲಿಟರಿ ಸಾಮರ್ಥ್ಯಗಳ ಮೇಲಿನ ಮಿತಿಗಳನ್ನು ಒಪ್ಪಿಕೊಳ್ಳಬೇಕು ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕು ಎಂಬ ಅಂಶಗಳನ್ನು ಒಳಗೊಂಡಿದೆ.
ಇರಾನ್ ಸಹ ತನ್ನದೇ ಆದ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಪ್ರಮುಖವಾಗಿ ಲೆಬನಾನ್ ಮೂಲದ ಮಿತ್ರ ರಾಷ್ಟ್ರವಾದ ಹೆಜ್ಬೊಲ್ಲಾ ಮೇಲಿನ ಯಾವುದೇ ದಾಳಿಯನ್ನು ಕದನ ವಿರಾಮ ಒಳಗೊಳ್ಳುತ್ತದೆ ಎಂದು ಹೇಳಿದೆ. ಆದರೆ ಇಸ್ರೇಲ್ ಲೆಬನಾನ್ ಮೇಲೆ ನಿಲ್ಲಿಸಲ್ಲ ಎಂದು ದೃಢವಾಗಿ ತಿಳಿಸಿದೆ (ಏಜೆನ್ಸೀಸ್).