Florida restaurant offers free pizza for giving Python
- ಬರ್ಮೀಸ್ ಹೆಬ್ಬಾವು ತಂದು ಕೊಡಿ, ದೊಡ್ಡದಾದ ಪಿಜ್ಜಾ ಫ್ರೀಯಾಗಿ ತಿನ್ನಿ.
- ಅಮೆರಿಕದ ಫ್ಲೋರಿಡಾದಲ್ಲಿರುವ ರೆಸ್ಟೋರೆಂಟ್ನಲ್ಲಿ ಜನರಿಗೆ ವಿಶೇಷ ಆಫರ್.
- ಹೆಬ್ಬಾವಿನಿಂದ ಆಗುತ್ತಿರುವ ಸಮಸ್ಯೆಯನ್ನು ತೊಡೆದು ಹಾಕಲು ವಿಶೇಷ ಕ್ರಮ.
Florida restaurant offers free pizza for giving Python: ಆಯಾ ದೇಶದ ವಿಶೇಷ ದಿನಗಳಂದು ಅಂಗಡಿ, ಮಾರುಕಟ್ಟೆ, ಮಾಲ್, ರೆಸ್ಟೋರೆಂಟ್ಗಳಲ್ಲಿ ಉಡುಪು, ಆಹಾರ ಸೇರಿದಂತೆ ಹಲವು ವಿಚಾರಗಳಲ್ಲಿ ರಿಯಾಯಿತಿಯನ್ನು ಕೊಡೋದು ಕಂಡಿರುತ್ತೇವೆ. ಹೊಸದಾಗಿ ಆಹಾರ ಮಳಿಗೆ ತೆರೆದಾಗ ಒಂದು ದಿನದ ಮಟ್ಟಿಗೆ ಉಚಿತವಾಗಿ ಅಥವಾ ಶೇ.50ರಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ಅಚ್ಚರಿಯೆಂದರೆ ಅಮೆರಿಕದ ಫ್ಲೋರಿಡಾದಲ್ಲಿರುವ ರೆಸ್ಟೋರೆಂಟ್ ಮಾಲೀಕರೊಬ್ಬರು ಹೆಬ್ಬಾವು ತಂದುಕೊಟ್ಟರೆ ಉಚಿತ ದೊಡ್ಡ ವಿಶೇಷ ಪಿಜ್ಜಾ ಸಿಗುತ್ತೆ ಎನ್ನುವ ಆಫರ್ ಕೊಟ್ಟಿದ್ದಾರೆ.
ನ್ಯೂಯಾರ್ಕ್ನ ಖಾಸಗಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಫ್ಲೋರಿಡಾದ ಎವರ್‌ಗ್ಲೇಡ್ಸ್ ಸಿಟಿಯಲ್ಲಿರುವ ರೆಸ್ಟೋರೆಂಟ್ ಮಾಲೀಕ ಡಸ್ಟಿನ್ ಕ್ರಮ್ ಎಂಬುವವರೇ ಈ ವಿಚಿತ್ರ ಆಫರ್ ಕೊಡುತ್ತಿರುವ ಆಸಾಮಿ ಎಂದು ಗುರುತಿಸಲಾಗಿದೆ. ಸತ್ತ ಅಥವಾ ಜೀವಂತವಾಗಿರುವ ಬರ್ಮೀಸ್ ಹೆಬ್ಬಾವನ್ನು ರೆಸ್ಟೋರೆಂಟ್ ಮಾಲೀಕರಿಗೆ ತಂದು ಕೊಟ್ಟರೆ ವಿಶೇಷವಾದ ದೊಡ್ಡ ಪಿಜ್ಜಾವನ್ನು ಉಚಿತವಾಗಿ ತಿನ್ನಬಹುದಾಗಿದೆ ಎಂದು ಹೇಳಲಾಗಿದೆ.
ಹೆಬ್ಬಾವು ಪಡೆಯಲು ಕಾರಣ ಏನು?
ದಶಕದ ಕಾಲದಿಂದಲೂ ಫ್ಲೋರಿಡಾದಲ್ಲಿರುವ ಹೆಬ್ಬಾವುಗಳು ಇಲ್ಲಿನ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿವೆ. 1970 ರ ದಶಕದಲ್ಲಿ ಆಗ್ನೇಯ ಏಷ್ಯಾದಿಂದ ಫ್ಲೋರಿಡಾಗೆ ಈ ಹೆಬ್ಬಾವು ಬಂದಿವೆ ಎನ್ನಲಾಗಿದೆ. ಫ್ಲೋರಿಡಾದಲ್ಲಿ 300,000 ವರೆಗೆ ಹೆಬ್ಬಾವು ಇರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಜೀವಸಂಕುಲದ ಸಮತೋಲನದಲ್ಲಿ ಏರುಪೇರು
ಹೆಣ್ಣು ಬರ್ಮೀಸ್ ಹೆಬ್ಬಾವುಗಳು ಒಮ್ಮೆಗೆ 70 ಮೊಟ್ಟೆಗಳನ್ನು ಇಡಬಲ್ಲವು, ಇದು ಅವುಗಳ ಜನಸಂಖ್ಯೆಯ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಅವು 20 ಅಡಿಗಳಿಗಿಂತ ಹೆಚ್ಚು ಉದ್ದಕ್ಕೆ ಬೆಳೆಯಬಹುದು. ಸಂತಾನೋತ್ಪತ್ತಿ ಹೆಚ್ಚಿಸಿಕೊಂಡು ತನ್ನ ವಂಶವನ್ನು ವೃದ್ಧಿ ಮಾಡಿಕೊಳ್ಳುವ ಈ ಹೆಬ್ಬಾವುಗಳು ಇಲ್ಲಿನ ಪ್ರಾಣಿಗಳನ್ನು ತಿಂದು ಮುಗಿಸುತ್ತವೆ. ಇದರಿಂದಾಗಿ ನೈಸರ್ಗಿಕ ಸಮತೋಲನವನ್ನು ಅಡ್ಡಿಯಾಗುತ್ತಿದೆ ಎನ್ನುವುದು ಪರಿಸರ ತಜ್ಞರ ಅಳಲು.
ಸಮಸ್ಯೆಗೆ ಬ್ರೇಕ್
ಹೀಗಾಗಿ ರೆಸ್ಟೋರೆಂಟ್ ಮಾಲೀಕ ಡಸ್ಟಿನ್ ಕ್ರಮ್ ಆಕ್ರಮಣಕಾರಿ ಜಾತಿಯ ಹೆಬ್ಬಾವನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪರೋಕ್ಷವಾಗಿ ಫ್ಲೋರಿಡಾದಲ್ಲಿ ಹೆಚ್ಚುತ್ತಿರುವ ಹೆಬ್ಬಾವುಗಳ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸುವ ವಿಭಿನ್ನ ಮಾರ್ಗವಾಗಿದೆ.
ಡಸ್ಟಿನ್ ಕ್ರಮ್ಗೆ ಈ ಐಡಿಯಾ ಬಂದದ್ದು ಹೀಗೆ
ಫ್ಲೋರಿಡಾ ರಾಜ್ಯದಲ್ಲಿ ಪರಿಸರ ಸಮತೋಲನವನ್ನು ಕಾಪಾಡುವ ಸಲುವಾಗಿ ಸರ್ಕಾರವು ಬೃಹತ್ ಹಾವಿನ ಬೇಟೆ (Snake Hunt) ಅಭಿಯಾನವನ್ನು ಆಯೋಜಿಸಿದೆ. ಈ ವಿಶಿಷ್ಟ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಬರೋಬ್ಬರಿ 10,000 ಡಾಲರ್ (ಸುಮಾರು 8.3 ಲಕ್ಷಕ್ಕೂ ಅಧಿಕ ರೂಪಾಯಿ) ಬಹುಮಾನವನ್ನು ನೀಡಲಾಗುತ್ತಿದೆ. ಇದರಿಂದ ತಮ್ಮ ರೆಸ್ಟೋರೆಂಟ್ನಲ್ಲಿಯೂ ವಿಶೇಷ ಆಫರ್ ನೀಡುವ ಪ್ಲ್ಯಾನ್ ಅನ್ನು ಡಸ್ಟಿನ್ ಮಾಡಿದರು.
ಡಸ್ಟಿನ್ ಕ್ರಮ್ ಹೇಳಿದ್ದೇನು
ಕೆಲವರಿಗೆ ಹಿಡಿದ ಹೆಬ್ಬಾವು ಏನು ಮಾಡೋದು ಅಂತಲೇ ತಿಳಿಯೋದಿಲ್ಲ. ಹೀಗಾಗಿ ಅವನ್ನು ಕಾಡಿಗೆ ಬಿಟ್ಟು ಬಿಡುತ್ತಾರೆ. ಅದು ಮತ್ತೆ ಜನರಿಗೆ ಹಾಗೂ ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಈ ಆಫರ್ ಅನ್ನು ಜಾರಿ ಮಾಡಿದ್ದೇನೆ. ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ. ಹೆಬ್ಬಾವಿನ ಪ್ರತಿ ಭಾಗವೂ ಒಂದೊಂದು ವಿಚಾರಕ್ಕೆ ಬಳಕೆಯಾಗುತ್ತದೆ.
ಬರ್ಮಿನ್ ತಳಿಯ ಹೆಬ್ಬಾವಿನ ಕೊಬ್ಬನ್ನು ಚರ್ಮದ ಎಣ್ಣೆ ಅಥವಾ ಕ್ರೀಮ್ ಹಾಗೂ ಸೋಪ್ಗಳನ್ನು ತಯಾರಿ ಮಾಡಲು ಬಳಕೆ ಮಾಡಿಕೊಳ್ಳಬಹುದು. ಅದರ ಮೂಳೆಗಳನ್ನು ಆಭರಣ ಮಾಡಬಹುದು. ಪಿಜ್ಜಾಗೆ ಹೆಬ್ಬಾವಿನ ಮಾಂಸವನ್ನು ಹಾಕಿ ತಯಾರಿ ಮಾಡಬಹುದು ಎನ್ನುವುದನ್ನು ಡಸ್ಟಿನ್ ಕ್ರಮ್ ವಿವರಿಸಿದರು.
ಕಾನೂನು ಬದ್ಧವಾಗಿ ಹೆಬ್ಬಾವಿನ ಮಾಂಸ ಮಾರಾಟ ಮಾಡೋದು ತಪ್ಪು ಹೀಗಾಗಿ ಹೆಬ್ಬಾವಿನ ಮಾಂಸದಿಂದ ತಯಾರಾದ ಪಿಜ್ಜಾ ತಯಾರಿಸಿ ಉಚಿತವಾಗಿ ನೀಡಲಾಗುತ್ತಿದೆ. ಇದರ ರುಚಿ ಕೊಂಚ ಬೇರೆ ರೀತಿ ಇರುತ್ತದೆ. ಆದರೆ ರುಚಿಕರವಾಗಿರವುದು ಗ್ಯಾರಂಟಿ ಎಂದಿದ್ದಾರೆ,(ಏಜೆನ್ಸೀಸ್).