Donald Trump | ಅವರೆಲ್ಲಾ ಅಲ್ಲೇ ಇದ್ದಾರೆ, ಒಂದೇ ಏಟಿಗೆ ಮುಗಿಸಬಹುದು! ಆದ್ರೆ...ಅಮೆರಿಕ ಸುಮ್ಮನಿರೋದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್
Donald Trump: ಅಮೆರಿಕಾ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತನಾದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವ ಇರಾನ್‌ನ ಇಡೀ ನಾಯಕತ್ವವನ್ನು ಒಂದೇ ದಾಳಿಯಲ್ಲಿ ಮುಗಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಇರಾನ್ ಜೊತೆ ಮಾತುಕತೆ ಮುಂದುವರಿಸಲು ಬಯಸುವುದರಿಂದ ನಾವು ಇಂತಹ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಕ್ಸಿಯೋಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ಅವರೆಲ್ಲರೂ ಅಲ್ಲಿ (ಅಂತ್ಯಕ್ರಿಯೆಯಲ್ಲಿ) ಇದ್ದಾರೆ. ಒಂದೇ ಶಾಟ್‌ನಲ್ಲಿ ನಾವೆಲ್ಲರನ್ನೂ ಮುಗಿಸಬಹುದು. ಆದರೆ ನಾವು ಅದನ್ನು ಮಾಡುವುದಿಲ್ಲ, ಏಕೆಂದರೆ ಹಾಗೆ ಮಾಡಿದರೆ ನಮಗೆ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಕಣ್ಣೀರು ಹಾಕಿದ ಇರಾನಿಯನ್ನರನ್ನು ಲೇವಡಿ ಮಾಡಿದ ಟ್ರಂಪ್
ಖಮೇನಿ ಅಂತ್ಯಕ್ರಿಯೆಯಲ್ಲಿ ಕೆಲವು ಇರಾನಿಯನ್ನರು ಕಣ್ಣೀರು ಹಾಕುತ್ತಿರುವುದನ್ನು ಕಂಡು ತಮಗೆ ಆಶ್ಚರ್ಯವಾಯಿತು ಎಂದು ಟ್ರಂಪ್ ಹೇಳಿದ್ದಾರೆ. ಜನರು ಅಲಿ ಖಮೇನಿಯನ್ನು ದ್ವೇಷಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಬಹುಶಃ ಅವು ನಕಲಿ ಕಣ್ಣೀರು ಇರಬಹುದು ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ. ಇದಕ್ಕೆ ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಎಕ್ಸ್ ಖಾತೆಯ ಮೂಲಕ ತಿರುಗೇಟು ನೀಡಿದ್ದು, ನಿಮಗೆ ನಾಗರಿಕತೆ, ಇತಿಹಾಸ ಅಥವಾ ಗೌರವ ಯಾವುದೂ ಇಲ್ಲದ ಕಾರಣ ಇಂತಹ ವಿಷಯಗಳು ನಿಮಗೆ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದೆ.
ಇದಕ್ಕೂ ಮುನ್ನ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಟ್ರಂಪ್, ನಾವು ಇರಾನ್ ಅನ್ನು ಧ್ವಂಸಗೊಳಿಸಿದ್ದೇವೆ. ಅವರು ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ. ನಾವು ಒಳ್ಳೆಯವರಾಗಿರುವುದರಿಂದ ಅಂತ್ಯಕ್ರಿಯೆಗಾಗಿ ಅವರಿಗೆ ಒಂದು ವಾರ ರಜೆ ನೀಡಿದ್ದೇವೆ ಎಂದು ವ್ಯಂಗ್ಯವಾಡಿದ್ದರು.
ದಾಳಿ ನಡೆಸಿದರೆ ತಕ್ಕ ಪ್ರತ್ಯುತ್ತರ: ಇರಾನ್ ಎಚ್ಚರಿಕೆ
ಅಲಿ ಖಮೇನಿ ಸರ್ಕಾರಿ ಅಂತ್ಯಕ್ರಿಯೆಯ ಮೆರವಣಿಗೆ ಜುಲೈ 3 ರಂದು ತೆಹ್ರಾನ್‌ನಲ್ಲಿ ಪ್ರಾರಂಭವಾಗಿದ್ದು, ಜುಲೈ 9 ರಂದು ಅವರ ತವರು ಪ್ರದೇಶವಾದ ಮಶ್ಹಾದ್‌ನಲ್ಲಿ ಅಂತ್ಯಗೊಳ್ಳಲಿದೆ. ಈ ನಡುವೆ ಇರಾನ್ ಸೇನಾ ಕಮಾಂಡರ್ ಅಲಿ ಅಬ್ದೊಲ್ಲಾಹಿ ಯುಎಸ್ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಶತ್ರುಗಳು, ವಿಶೇಷವಾಗಿ ಯುಎಸ್ ಮತ್ತು ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಯಾವುದೇ ತಪ್ಪು ಲೆಕ್ಕಾಚಾರಗಳನ್ನು ಮಾಡಬಾರದು. ನಮ್ಮ ದೇಶದ ಮೇಲಿನ ಯಾವುದೇ ಬೆದರಿಕೆ ಅಥವಾ ಆಕ್ರಮಣಕ್ಕೆ ನಮ್ಮ ಸಶಸ್ತ್ರ ಪಡೆಗಳು ನೀಡುವ ಕಠಿಣ ಪ್ರತಿಕಾರವನ್ನು ಅವರು ನೆನಪಿನಲ್ಲಿಡಬೇಕು ಎಂದು ಅಬ್ದೊಲ್ಲಾಹಿ ಹೇಳಿದ್ದಾರೆ.
ಮತ್ತೊಂದೆಡೆ, ಖಮೇನಿಯ ಮಗ ಮತ್ತು ಇರಾನ್‌ನ ಪ್ರಸ್ತುತ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರನ್ನು ಕೊಲ್ಲುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ, ದೇಶದ ನಾಯಕತ್ವ ಅಥವಾ ಜನರ ಮೇಲಿನ ಯಾವುದೇ ಬೆದರಿಕೆಗೆ ತಕ್ಷಣದ ಮತ್ತು ಪ್ರಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುರಕ್ಷತೆಯ ಕಾರಣಗಳಿಗಾಗಿ ಮೊಜ್ತಾಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ಭಾರತದಲ್ಲಿನ ಸರ್ವೋಚ್ಚ ನಾಯಕರ ಪ್ರತಿನಿಧಿ ಆಯತೊಲ್ಲಾ ಹಕೀಮ್ ಇಲಾಹಿ ತಿಳಿಸಿದ್ದಾರೆ(ಏಜೆನ್ಸೀಸ್).