ಕರಾಚಿಯಲ್ಲಿ ಪ್ರತ್ಯೇಕ ಸಿಂಧುದೇಶಕ್ಕಾಗಿ ಲಕ್ಷಾಂತರ ಜನರ ಬೃಹತ್ ಪ್ರತಿಭಟನೆ  
ವಿದೇಶ

ಪಾಕಿಸ್ತಾನದಲ್ಲಿ ಪ್ರತ್ಯೇಕ 'ಸಿಂಧುದೇಶ'ದ ಕೂಗು: ಕರಾಚಿಯಲ್ಲಿ ಲಕ್ಷಾಂತರ ಜನರಿಂದ ಬೃಹತ್ ಪ್ರತಿಭಟನೆ! Sindhudesh

ಕರಾಚಿ: ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಆಸಿಮ್​ ಮನೀರ್​, ಸಿಂಧ್​ ಪ್ರಾಂತ್ಯವನ್ನು ಇಬ್ಭಾಗ ಮಾಡುವ ಯೋಜನೆ ಬಗ್ಗೆ ಮಾತನಾಡಿದ ನಂತರ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಕ್ಷಾಂತರ ಸಿಂಧಿ ಪ್ರಜೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಪ್ರತ್ಯೇಕ ಸಿಂಧುದೇಶದ ಪ್ರಸ್ತಾಪವನ್ನು ಮಾಡಿದ್ದಾರೆ.

ಪಾಕಿಸ್ತಾನದ ಪ್ರಮುಖ ಆರ್ಥಿಕ ಹಾಗೂ ರಾಜಕೀಯ ಪ್ರಾಮುಖ್ಯತೆ ಪಡೆದಿರುವ ಪ್ರಾಂತ್ಯವಾಸ ಸಿಂಧ್​ ಪ್ರಾಂತ್ಯವನ್ನು ಎರಡು ಭಾಗಗಳಲ್ಲಿ ವಿಂಗಡಿಸುವುದು ಆಸಿಮ್​ ಮುನೀರ್​ ಅವರ ಯೋಜನೆ ಎಂದು ಹೇಳಲಾಗುತ್ತಿದೆ. ಆದರೆ, ಈ ಯೋಜನೆಗೆ ಸಿಂಧ್ ಪ್ರಾಂತ್ಯದ ಜನರ ಒಪ್ಪಿಗೆ ಇಲ್ಲ, ಹೀಗಾಗಿ ಇಂದು (ನ.24) ಸಿಂಧ್​​ನ ಜನರು ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಬೃಹತ್​ ಮೆರವಣಿಗೆ ನಡೆಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಸಿಂಧ್ ಕೇವಲ ಪ್ರಾಂತ್ಯವಲ್ಲ; ಇದೊಂದು ನಾಗರಿಕತೆ!

ಪಾಕಿಸ್ತಾನದಲ್ಲಿ ಸದ್ಯಕ್ಕೆ ನಾಲ್ಕು ಪ್ರಮುಖ ಪಾಂತ್ಯಗಳಿವೆ. ಇವುಗಳ ಸಂಖ್ಯೆಯನ್ನು 12-14 ಕ್ಕೆ ಏರಿಕೆ ಮಾಡುವುದು ಪಾಕ್​ ಸರ್ಕಾರದ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಪ್ರಾಂತ್ಯಗಳಲ್ಲಿ ಆಡಳಿತ ನಡೆಸಲು ಕಷ್ಟವಾಗುತ್ತಿದ್ದು, ಸಣ್ಣ ಪ್ರಾಂತ್ಯಗಳಲ್ಲಿ ಅಧಿಕಾರ ನಡೆಸುವುದು ಸುಲಭ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಆದರೆ, ಇದಕ್ಕೆ ಸಿಂಧ್​ ಪ್ರಾಂತ್ಯದ ಜನ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದು, ಸಿಂಧ್ ಪ್ರಾಂತ್ಯ ಎನ್ನವುದು ಕೇವಲ ಒಂದು ಭೂಮಿಯಲ್ಲ, ಈ ನೆಲದಲ್ಲಿ ಜಗತ್ತಿನ ಪುರಾತನ ನಾಗರಿಕತೆ ಜನ್ಮತಾಳಿತ್ತು. ಈ ಪ್ರಾಂತ್ಯ ಹಾಗೂ ಪಾಕಿಸ್ತಾನಕ್ಕೆ ಇತಿಹಾಸದಷ್ಟೇ ಹಳೆಯದಾದ ಸಂಬಂಧವಿದೆ. ಹೀಗಾಗಿ ಈ ಪ್ರಾಂತ್ಯವನ್ನು ಯಾವುದೇ ಕಾರಣಕ್ಕೂ ಒಡೆಯಬಾರದು. ಹಾಗೇನಾದರೂ ಆದರೆ ಇಲ್ಲಿಯ ಜನ ಕೈಗೆ ಬಂದೂಕನ್ನು ಎತ್ತಿಕೊಳ್ಳಲು ಹಿಂಜರಿಯುವುದಿಲ್ಲವೆಂದು ಪಾಕ್​ ಸರ್ಕಾರಕ್ಕೆ ನೇರ ಬೆದರಿಕೆ ಒಡ್ಡಿದ್ದಾರೆ.

ಸಿಂಧುದೇಶಕ್ಕೆ ಆಗ್ರಹ!

ಇನ್ನು ಪಾಕ್​ ಸರ್ಕಾರ ಸಿಂಧ್​ ಪ್ರಾಂತ್ಯವನ್ನು ಇಬ್ಭಾಗ ಮಾಡುವ ಬಗ್ಗೆ ಮಾತನಾಡಿದಕ್ಕೆ, ಸರ್ಕಾರಕ್ಕೆ ಸಿಂಧ್​ ಪ್ರಾಂತ್ಯದಲ್ಲಿ ಆಡಳಿತ ನಡೆಸಲು ಅಷ್ಟು ಕಷ್ಟವಾಗುತ್ತಿದ್ದರೆ, ಸಿಂಧಿ ಜನರಿಗಾಗಿ ಪ್ರತ್ಯೇಕ ಸಿಂಧು ದೇಶವನ್ನು ಘೋಷಣೆ ಮಾಡಿಬಿಡಲಿ. ಇಲ್ಲಿರುವ ಜನರು ಶಿಕ್ಷಿತರಾಗಿದ್ದಾರೆ, ನಮ್ಮಲ್ಲಿ ಸಕಲ ಸೌಕರ್ಯಗಳಿವೆ ಹಾಗೆಯೇ ನಮಗೆ ಹೇಗೆ ಆಡಳಿತ ನಡೆಸಬೇಕೆಂದು ತಿಳಿದಿದೆ.

ಈ ಆಸಿಮ್​ ಮುನೀರ್​ ನೇತೃತ್ವದ ಸರ್ಕಾರ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡಲು ಮುಂದಾಗಿದೆ. ಇದನ್ನು ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒಂದಾನು ವೇಳೆ ವಿಭಜನೆ ಮಾಡುವುದೇ ಆದರೆ, ನಾವು ಪ್ರತ್ಯೇಕ ದೇಶವಾಗಿ ವಿಭಜನೆ ಆಗುತ್ತೇವೆಂದು ತಿಳಿಸಿದ್ದಾರೆ, (ಏಜೆನ್ಸೀಸ್).