- 2024ರಿಂದ ಆಸ್ತಿ ಸಂಬಂಧ ಮಲ್ಟಿಪಲ್ ಕೋರ್ಟ್ ನೀಡಿದ್ದ ಆದೇಶ ಉಲ್ಲಂಘನೆ
- ಬೈಜೂಸ್ ಸಂಸ್ಥಾಪಕ ರವೀಂದ್ರನ್ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ ಕೋರ್ಟ್
- ಕಾನೂನು ವೆಚ್ಚ 90,000 ಸಿಂಗಾಪುರ ಡಾಲರ್ ಪಾವತಿಸುವಂತೆ ಆದೇಶ
ನವದೆಹಲಿ: ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ (Byju’s Founder Raveendran) ಅವರಿಗೆ ಸಿಂಗಾಪುರ ಕೋರ್ಟ್ ಶಾಕಿಂಗ್ ನ್ಯೂಸ್ವೊಂದನ್ನು ಕೊಟ್ಟಿದೆ. ನ್ಯಾಯಾಲಯದ ಆದೇಶವನ್ನು ನಿರಂತರವಾಗಿ ಉಲ್ಲಂಘಿಸಿದ ಪರಿಣಾಮವಾಗಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
2024ರಿಂದ ಬೈಜು ರವೀಂದ್ರನ್ ಅವರ ಆಸ್ತಿಗೆ ಸಂಬಂಧಪಟ್ಟಂತೆ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದಿದ್ದ ಕಾರಣಕ್ಕೆ ಸಿಂಗಾಪುರ ಕೋರ್ಟ್ನಿಂದ ಈ ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ.
ಶರಣಾಗುವಂತೆ ಆದೇಶ
ಅಧಿಕಾರಿಗಳ ಮುಂದೆ ಶರಣಾಗುವಂತೆ, ಪ್ರಕರಣದ ವೆಚ್ಚವಾಗಿ 90,000 ಸಾವಿರ ಸಿಂಗಾಪುರ ಡಾಲರ್ (67.50 ಲಕ್ಷ) ಪಾವತಿಸುವಂತೆ ಆದೇಶಿಸಿದೆ. ಜೊತೆಗೆ ಬೀಯಾರ್ ಇನ್ವೆಸ್ಟ್ಕೋ ಪ್ರೈವೇಟ್ ಲಿಮಿಟೆಡ್ ಕಾರ್ಪೋರೇಟ್ ಸಂಸ್ಥೆಯ ಮೇಲಿನ ತಮ್ಮ ಕಾನೂನು ಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸುವಂತೆ ಸಿಂಗಾಪುರ ಕೋರ್ಟ್ ಸೂಚಿಸಿದೆ.
ಅಮೆರಿಕದಲ್ಲೂ ಸಮಸ್ಯೆ
ಅಮೆರಿಕದ ಸಾಲದಾತರು 1.2 ಬಿಲಿಯನ್ ಡಾಲರ್ ಸಾಲ ಹಿಂಪಡೆಯಲು ಕಾನೂನು ಹೋರಾಟ ಮಾಡುತ್ತಿರುವ ಈ ಹೊತ್ತಲ್ಲಿ ಅವರಿಗೆ ಸಿಂಗಾಪುರ ಕೋರ್ಟ್ನಿಂದ ಈ ಶಿಕ್ಷೆ ಪ್ರಕಟವಾಗಿದೆ. ಸದ್ಯ ರವೀಂದ್ರನ್ ಅವರು ಭಾರತದಲ್ಲಿದ್ದರೋ ಅಥವಾ ವಿದೇಶದಲ್ಲಿರುವರೋ ಎನ್ನುವ ಮಾಹಿತಿಗೆ ಸ್ಪಷ್ಟನೆ ಸಿಕ್ಕಿಲ್ಲ.
ಯಾರು ಈ ರವೀಂದ್ರನ್?
ರವೀಂದ್ರನ್ ಅವರು ಬೈಜೂಸ್ ಎಂದೇ ಪ್ರಸಿದ್ಧವಾಗಿರುವ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ಸ್ಥಾಪಸಿದರು. ಇದರತ್ತ ಆಕರ್ಷಣೆಗೊಳಗಾದ ಯುವ ಜನತೆ, ಅವರನ್ನು ಶತ ಕೋಟ್ಯಾಧಿಪತಿಯಾಗುವಂತೆ ಮಾಡಿತ್ತು. ಜಾಗತಿಕ ಸಂಸ್ಥೆಗಳಿಂದ ಬಂಡವಾಳವನ್ನು ಆಕರ್ಷಿಸಿರುವ ಭಾರತೀಯ ಸ್ಟಾರ್ಟ್-ಅಪ್‌ಗಳ ಅಲೆಯಲ್ಲಿ ಅವರನ್ನು ಪ್ರಮುಖ ಯಶಸ್ಸಿನ ಕಥೆಗಳಲ್ಲಿ ಒಬ್ಬರನ್ನಾಗಿ ಮಾಡಿತು, (ಏಜೆನ್ಸೀಸ್).