ಚೀನಾದ ಇಂದಿನ ಯುವ ಪೀಳಿಗೆಯು ಕಾರು, ಮನೆ ಅಥವಾ ದುಬಾರಿ ಗ್ಯಾಜೆಟ್ಗಳ ಬದಲಾಗಿ ‘ಭಾವನೆಗಳು’ ಮತ್ತು ‘ನೆಮ್ಮದಿ’ಯನ್ನು ಖರೀದಿಸುತ್ತಿದೆ. ಇದ್ದಲ್ಲೇ ಇರುವ ಸಂಬಳ, ಭವಿಷ್ಯದ ಆತಂಕ ಮತ್ತು ನಿರುದ್ಯೋಗದ ಒತ್ತಡಕ್ಕೆ ಸಿಲುಕಿರುವ ಅಲ್ಲಿನ ಯುವಕರು, ತಮಗೆ ಕ್ಷಣಿಕ ಸಂತೋಷ ಹಾಗೂ ‘ಎಮೋಷನಲ್ ವ್ಯಾಲ್ಯೂ’ (ಭಾವನಾತ್ಮಕ ಮೌಲ್ಯ) ನೀಡುವಂತಹ ವಸ್ತುಗಳು ಮತ್ತು ಅನುಭವಗಳಿಗಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಮನರಂಜನೆ, ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ನೆಮ್ಮದಿ ಪಡೆದುಕೊಳ್ಳುವುದಕ್ಕಾಗಿ ಯುವಜನರು ಈಗ ಟ್ರೆಕ್ಕಿಂಗ್ ಗೈಡ್ಗಳಿಂದ ಹಿಡಿದು ಅಮ್ಯೂಸ್ವೆುಂಟ್ ಪಾರ್ಕ್ಗಳ ಕಲಾವಿದರಿಗೂ ಹಣ ಪಾವತಿಸುತ್ತಿದ್ದಾರೆ. ಈ ಹೊಸ ಟ್ರೆಂಡ್ ಕುರಿತಾದ ವಿವರ ಇಲ್ಲಿದೆ.
ವೇಗದ ಜೀವನಶೈಲಿ ಮತ್ತು ಆರ್ಥಿಕ ಒತ್ತಡಗಳು ಇಂದು ಯುವ ಪೀಳಿಗೆಯನ್ನು ತೀವ್ರ ಒಂಟಿತನಕ್ಕೆ ತಳ್ಳಿವೆ. ಭವಿಷ್ಯದ ಅನಿಶ್ಚಿತತೆಯಿಂದ ಕಂಗಾಲಾಗಿರುವ ಇಂದಿನ ಸಮಾಜವು ಭೌತಿಕ ಸುಖಗಳಿಗಿಂತ ಮಾನಸಿಕ ಶಾಂತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜೀವನದಲ್ಲಿ ನಿಜವಾದ ಸಂತೋಷ ಮತ್ತು ಕೌಟುಂಬಿಕ ಒಡನಾಟಗಳು ಕಡಿಮೆಯಾಗುತ್ತಿರುವಾಗ, ಹಣ ನೀಡಿ ಭಾವನೆಗಳನ್ನು ಖರೀದಿಸುವುದೇ ಈ ಪೀಳಿಗೆಯ ಪಾಲಿಗೆ ‘ಬದುಕುಳಿಯುವ ಮಂತ್ರ’ ಆಗಿ ಮಾರ್ಪಟ್ಟಿದೆ. ಯುವಜನರು ಕಾಳಜಿ ಮತ್ತು ಒಡನಾಟದಂತಹ ಮಾನವೀಯ ಭಾವನೆಗಳಿಗಾಗಿ ಮಾರುಕಟ್ಟೆಯಲ್ಲಿ ಹಣ ಪಾವತಿಸುತ್ತಿರುವುದು ಹಾಸ್ಯದ ವಿಷಯವಲ್ಲ; ಬದಲಿಗೆ ಇದೊಂದು ಗಂಭೀರ ಸಾಮಾಜಿಕ ಬಿಕ್ಕಟ್ಟಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಚೀನಾದಲ್ಲಿ ಯುವಜನರ ಭಾವನಾತ್ಮಕ ಅಗತ್ಯಗಳನ್ನು ಪೂರೈಸುವ ಡಿಜಿಟಲ್ ಮಾರುಕಟ್ಟೆಯೂ ಈಗ ವೇಗವಾಗಿ ಬೆಳೆಯುತ್ತಿದೆ. ಒಂಟಿತನದಿಂದ ಬೇಸತ್ತಿರುವ ಇಲ್ಲಿನ ಯುವ ಪೀಳಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ವರ್ಚುವಲ್ ಸಾಕುಪ್ರಾಣಿಗಳ ಮಾಲೀಕರು: ಒಂಟಿಯಾಗಿ ವಾಸಿಸುವ ಅನೇಕ ಯುವಕ-ಯುವತಿಯರಿಗೆ ತಮ್ಮ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಅವರು ಈಗ ‘ವರ್ಚುವಲ್ ಪೆಟ್ಸ್ ಓನರ್’ ಆಗಿ ಬದಲಾಗುತ್ತಿದ್ದಾರೆ.
ಇವರು ಲೈವ್-ಸ್ಟ್ರೀಮರ್ಗಳಿಗೆ (ನೇರಪ್ರಸಾರ ಮಾಡುವವರಿಗೆ) ಹಣ ಪಾವತಿಸುವ ಮೂಲಕ, ತಮಗೆ ಇಷ್ಟವಾದ ನಾಯಿ ಅಥವಾ ಬೆಕ್ಕುಗಳನ್ನು ಕ್ಯಾಮರಾದ ಮುಂದೆ ಆಡಿಸುವಂತೆ, ಮುದ್ದಿಸುವಂತೆ ಅಥವಾ ವಾಕಿಂಗ್ ಮಾಡಿಸುವಂತೆ ಹೇಳಿ, ನೋಡಿ ಆನಂದಿಸುತ್ತಾರೆ. ನಿಜವಾದ ನಾಯಿ-ಬೆಕ್ಕುಗಳನ್ನು ಸಾಕಲು ಸಮಯವಿಲ್ಲದವರು ‘ರೋಬೋಟ್ ಸಾಕುಪ್ರಾಣಿಗಳನ್ನು’ ಖರೀದಿಸುತ್ತಿದ್ದಾರೆ. ಜೊತೆಗೆ, ಒಳಗೇನಿದೆ ಎಂದು ತಿಳಿಯದ ಮಿಸ್ಟರಿ ಬಾಕ್ಸ್ ಆಟಿಕೆಗಳನ್ನು ಖರೀದಿಸುವ ಮೂಲಕ ಆ ಕ್ಷಣದ ಕುತೂಹಲ ಮತ್ತು ಸಣ್ಣ ಖುಷಿಯನ್ನು ಅನುಭವಿಸುತ್ತಾರೆ.
ಇದೇ ವೇಳೆ ಚೀನಾದ ಇ-ಕಾಮರ್ಸ್ ಪ್ಲಾಟ್ಫಾಮ್ರ್ ಗಳಲ್ಲಿ ‘ಎಮೋಷನಲ್ ಸಪ್ಲೈಯರ್ಸ್’ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೇವಲ 150ರಿಂದ 400 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಯುವಕರು 15 ನಿಮಿಷಗಳ ಕಾಲ ಅಪರಿಚಿತ ವ್ಯಕ್ತಿಯನ್ನು ಬುಕ್ ಮಾಡುತ್ತಾರೆ. ಕೆಲವರು ಒಂದು ಗಂಟೆ. ಹೀಗೆ ಬುಕ್ ಆದ ವ್ಯಕ್ತಿ ಗ್ರಾಹಕನ ಜತೆ ಆಪ್ತವಾಗಿ ಮಾತಾಡುತ್ತಾನೆ, ವ್ಯಕ್ತಿತ್ವವನ್ನು ಹೊಗಳುತ್ತಾನೆ, ನೋವಿನಲ್ಲಿದ್ದರೆ ಸಾಂತ್ವನ ಹೇಳುತ್ತಾನೆ. ಅಷ್ಟೇ ಅಲ್ಲದೆ, ಕೆಲವರು ತಮಗೆ ಸರಿಯಾದ ಪ್ರೇರಣೆ ಸಿಗಲಿ ಎಂಬ ಕಾರಣಕ್ಕಾಗಿ ಎದುರಿನ ವ್ಯಕ್ತಿಯಿಂದ ಬೈಗುಳ ಅಥವಾ ಗದರಿಕೆಯನ್ನು ಕೇಳಲು ಸಹ ಹಣ ನೀಡುತ್ತಿದ್ದಾರೆ! ಮತ್ತೊಂದೆಡೆ, ಯುವಕರು ಇಂಟರ್ನೆಟ್ನಲ್ಲಿ ತಮಗಾಗಿ ತಾತ್ಕಾಲಿಕ ಗೆಳೆಯ/ಗೆಳತಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಇವರು ಫೋನ್ ಕರೆಗಳ ಮೂಲಕ ಅಥವಾ ಚಾಟಿಂಗ್ ಮೂಲಕ ಗ್ರಾಹಕರ ಸಮಸ್ಯೆ ಕೇಳುತ್ತಾರೆ, ಅವರಿಗೆ ಧೈರ್ಯ ತುಂಬುತ್ತಾರೆ ಮತ್ತು ಪ್ರೀತಿಯಿಂದ ಮಾತನಾಡುತ್ತಾರೆ.
ಒಂಟಿಯಾಗಿ ಪ್ರಯಾಣಿಸಲು ಇಷ್ಟಪಡದವರು ತಮಗೊಬ್ಬರು ಜೊತೆಗಾರರಿರಲಿ ಎಂದು ಟ್ರೆಕ್ಕಿಂಗ್ ಗೈಡ್ಗಳಿಗೆ ಹಣ ಪಾವತಿಸುತ್ತಾರೆ. ಇವರು ಕೇವಲ ದಾರಿ ತೋರಿಸುವವರಲ್ಲ, ಬದಲಿಗೆ ಇಡೀ ಪ್ರಯಾಣದಲ್ಲಿ ಗ್ರಾಹಕರೊಂದಿಗೆ ಸ್ನೇಹಿತರಂತೆ ಹರಟೆ ಹೊಡೆಯುತ್ತ, ಫೋಟೋ ಕ್ಲಿಕ್ಕಿಸುತ್ತ ಭಾವನಾತ್ಮಕ ಬೆಂಬಲ ನೀಡುತ್ತಾರೆ. ಈ ಗೈಡ್ಗಳು ಆರು ಗಂಟೆಯ ಸೇವೆಗೆ 10 ಸಾವಿರ ರೂ. ಶುಲ್ಕ ಪಡೆಯುತ್ತಾರೆ.
ಚೀನಾದ ಯುವಕರಲ್ಲಿ ಈ ರೀತಿಯ ಬದಲಾವಣೆ ದಿಢೀರನೆ ಬಂದಿದ್ದಲ್ಲ. ಇದರ ಹಿಂದೆ ತೀವ್ರ ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳಿವೆ. ಆರ್ಥಿಕ ಮಂದಗತಿ ಮತ್ತು ಅನಿಶ್ಚಿತತೆ: ಚೀನಾದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಕುಸಿತ ಮತ್ತು ಆರ್ಥಿಕತೆಯ ನಿಧಾನಗತಿಯಿಂದಾಗಿ, ಮನೆ, ಕಾರು ಕೊಳ್ಳುವುದು ಯುವಕರಿಗೆ ದುಬಾರಿ ಮತ್ತು ಅಸಾಧ್ಯದ ಮಾತಾಗಿದೆ. ಹೀಗಾಗಿ, ದೊಡ್ಡ ಹೂಡಿಕೆಗಳ ಬದಲಿಗೆ ಸಣ್ಣ ಮತ್ತು ತಕ್ಷಣದ ಖುಷಿ ಕೊಡುವ ವಿಷಯಗಳತ್ತ ಅವರು ವಾಲುತ್ತಿದ್ದಾರೆ. ಉದ್ಯೋಗ ಮಾರುಕಟ್ಟೆಯ ಒತ್ತಡ: ಬೆಳಗ್ಗೆ 9ರಿಂದ ರಾತ್ರಿ 9 ರವರೆಗೆ, ವಾರದಲ್ಲಿ 6 ದಿನ ಕೆಲಸ ಮಾಡುವ ಅತ್ಯಂತ ಕಠಿಣ ಉದ್ಯೋಗ ಸಂಸ್ಕೃತಿ ಚೀನಾದಲ್ಲಿದೆ. ಇದು ಯುವಕರಲ್ಲಿ ತೀವ್ರ ಮಾನಸಿಕ ಆಯಾಸ ಉಂಟುಮಾಡಿದೆ.
ಒಂಟಿತನ ಮತ್ತು ಸಾಮಾಜಿಕ ದೂರ: ಇಂದಿನ ಬಹುತೇಕ ಚೀನಾ ಯುವಕರು ತಮ್ಮ ಹೆತ್ತವರಿಗೆ ಏಕೈಕ ಸಂತಾನವಾಗಿದ್ದಾರೆ. ಪರಿಣಾಮ, ಒಂಟಿತನವನ್ನು ಹೋಗಲಾಡಿಸಲು ಮತ್ತು ಯಾರೊಂದಿಗಾದರೂ ಭಾವನೆಗಳನ್ನು ಹಂಚಿಕೊಳ್ಳಲು ಅವರು ಹಣ ನೀಡಲು ಸಿದ್ಧರಾಗಿದ್ದಾರೆ. ಚೀನಾ ಯುವಕರ ಈ ಟ್ರೆಂಡ್ ಇಂದಿನ ಆಧುನಿಕ ಜಗತ್ತಿನ ಕನ್ನಡಿಯಾಗಿದೆ. ತೀವ್ರ ಸ್ಪರ್ಧೆ ಮತ್ತು ಯಾಂತ್ರಿಕ ಜೀವನಶೈಲಿಯ ನಡುವೆ ಮನುಷ್ಯನಿಗೆ ಎಲ್ಲಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಭಾವನಾತ್ಮಕ ಬೆಂಬಲ ಎಂಬುದನ್ನು ಇದು ಸಾಬೀತುಪಡಿಸಿದೆ. ಕಾರು, ಬಂಗಲೆಗಿಂತ ಮನಸ್ಸಿನ ನೆಮ್ಮದಿಯೇ ಮುಖ್ಯ ಎಂದು ಭಾವಿಸುತ್ತಿರುವ ಇಂದಿನ ಯುವ ಪೀಳಿಗೆಯ ಈ ನಡೆ, ಭವಿಷ್ಯದಲ್ಲಿ ಜಾಗತಿಕ ಮಾರುಕಟ್ಟೆಯ ದಿಕ್ಕನ್ನೇ ಬದಲಾಯಿಸಿದರೂ ಅಚ್ಚರಿಯಿಲ್ಲ.
ಡಿಸ್ನಿಲ್ಯಾಂಡ್ನಂತಹ ಅಮ್ಯೂಸ್ವೆುಂಟ್ ಪಾರ್ಕ್ಗಳಲ್ಲಿ ನೆಚ್ಚಿನ ಕಾರ್ಟೂನ್ ಪಾತ್ರಧಾರಿಗಳೊಂದಿಗೆ ಸಂವಾದ ನಡೆಸಲು ಯುವಕರು ಗಂಟೆಗಟ್ಟಲೇ ಕಾಯುತ್ತಾರೆ. ಅಲ್ಲದೆ, ‘ಮರ್ಡರ್ ಮಿಸ್ಟರಿ’ ಆಟಗಳ ತಾಣಗಳಿಗೆ ಹೋಗಿ ಬೇರೆ ಪಾತ್ರಗಳಲ್ಲಿ ಲೀನವಾಗುವ ಮೂಲಕ ಒತ್ತಡವನ್ನು ಮರೆಯುತ್ತಾರೆ.
ದಕ್ಷಿಣ ಕೊರಿಯಾದ ಯುವಕರು ಜಗತ್ತಿನಲ್ಲೇ ಅತ್ಯಂತ ತೀವ್ರವಾದ ಶೈಕ್ಷಣಿಕ ಮತ್ತು ವೃತ್ತಿಪರ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಯುವಕರು ದೇಶದ ಇಂದಿನ ಪರಿಸ್ಥಿತಿಯನ್ನು ‘ಹೆಲ್ ಜೋಸನ್’ (ನರಕ ಸದೃಶ ಕೊರಿಯಾ) ಎಂದು ಕರೆಯುತ್ತಾರೆ. ಉದ್ಯೋಗ ಸಿಗುವುದು ತೀವ್ರ ಕಷ್ಟವಾಗಿರುವುದರಿಂದ ಯುವಕರು ಮದುವೆ, ಮಕ್ಕಳು ಮತ್ತು ಮನೆ ಹೊಂದುವುದನ್ನು ತ್ಯಜಿಸುತ್ತಿದ್ದಾರೆ. ಒಂಟಿತನದಿಂದ ಸಾಯುವ ‘ಗೊಡೊಕ್ಸಾ’ (ಎಟಛಟkಠಚ- ಔಟ್ಞಛ್ಝಿಢ ಈಛಿಚಠಿಜ) ಪ್ರಕರಣಗಳು ಇಲ್ಲಿ ಹೆಚ್ಚುತ್ತಿವೆ. ಯುವಕರು ಏನೂ ಮಾಡದೆ, ಕೇವಲ ಕಾಡಿನ ಕಡೆಗೆ ಅಥವಾ ಗೋಡೆಯ ಕಡೆಗೆ ಮುಖ ಮಾಡಿ ಗಂಟೆಗಟ್ಟಲೇ ಸುಮ್ಮನೆ ಕುಳಿತುಕೊಳ್ಳುವ ಸ್ಪೇಸಿಂಗ್ ಔಟ್ ಕೇಂದ್ರಗಳಿಗೆ ಹಣ ನೀಡಿ ಹೋಗುತ್ತಿದ್ದಾರೆ.
ನಕಲಿ ಶವಸಂಸ್ಕಾರ: ಬದುಕಿನ ಮೌಲ್ಯವನ್ನು ತಿಳಿಯಲು ಮತ್ತು ಒತ್ತಡ ಮುಕ್ತರಾಗಲು ಯುವಕರು ತಾವೇ ಶವಪೆಟ್ಟಿಗೆಯೊಳಗೆ ಮಲಗಿ ‘ನಕಲಿ ಶವಸಂಸ್ಕಾರ’ದ ಅನುಭವ ಪಡೆಯುವ ಚಿಕಿತ್ಸಾ ಪದ್ಧತಿ ಇಲ್ಲಿ ಪ್ರಸಿದ್ಧವಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಮತ್ತು ಹಣದುಬ್ಬರದಿಂದಾಗಿ ಯುವಕರು ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಕಷ್ಟಪಟ್ಟು ದುಡಿದರೂ ಬಾಡಿಗೆ ಕಟ್ಟಲು ಮತ್ತು ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿ ಇರುವುದರಿಂದ ಯುವಕರು ಕೆಲಸದ ಸ್ಥಳದಲ್ಲಿ ತಮಗೆ ವಹಿಸಿದ ಕನಿಷ್ಠ ಕೆಲಸ ಮಾತ್ರ ಮಾಡುವ ಕ್ವಯೆಟ್ ಕ್ವಿಟಿಂಗ್ ಅಥವಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವ ಲೌಡ್ ಕ್ವಿಟಿಂಗ್ ಟ್ರೆಂಡ್ ಆರಂಭಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಆಪ್ಗಳನ್ನು ಬಳಸಿ, ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಎಐ ಗರ್ಲ್ ಫ್ರೆಂಡ್/ಬಾಯ್ಫ್ರೆಂಡ್ಗಳನ್ನು ಸೃಷ್ಟಿಸಿಕೊಂಡು ಅವರೊಂದಿಗೆ ದಿನವಿಡೀ ಚಾಟ್ ಮಾಡುತ್ತಿದ್ದಾರೆ.
ಜಪಾನ್ನಲ್ಲಿ ದಶಕಗಳಿಂದಲೂ ಒಂಟಿತನ ಮತ್ತು ಕಠಿಣ ಕೆಲಸದ ಸಂಸ್ಕೃತಿ ಯುವಕರನ್ನು ಕಾಡುತ್ತಿದೆ. ಇಲ್ಲಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಸರ್ಕಾರವೇ ಪ್ರತ್ಯೇಕವಾಗಿ ಒಂಟಿತನ ನಿವಾರಣಾ ಸಚಿವಾಲಯವನ್ನು ಸ್ಥಾಪಿಸಿದೆ. ಯುವಕರು ಸಮಾಜದಿಂದ ಸಂಪೂರ್ಣವಾಗಿ ದೂರ ಸರಿದು, ತಮ್ಮನ್ನು ತಾವು ಕೋಣೆಯೊಳಗೆ ಬಂಧಿಸಿಕೊಳ್ಳುವುದನ್ನು ಹಿಕಿಕೊಮೊರಿ ಎನ್ನಲಾಗುತ್ತದೆ. ಉದ್ಯೋಗದ ತೀವ್ರ ಒತ್ತಡದಿಂದಾಗಿ ಮದುವೆ ಮತ್ತು ಕುಟುಂಬ ವ್ಯವಸ್ಥೆಯಿಂದ ಯುವಕರು ದೂರ ಸರಿಯುತ್ತಿದ್ದಾರೆ. ಜಪಾನ್ನಲ್ಲಿ ತಮಗಾಗಿ ಸ್ನೇಹಿತರನ್ನು, ಡೇಟಿಂಗ್ ಜೊತೆಗಾರರನ್ನು, ಅಥವಾ ಹಬ್ಬ ಆಚರಿಸಲು ತಾತ್ಕಾಲಿಕ ತಂದೆ-ತಾಯಿಯರನ್ನೂ ಹಣ ಕೊಟ್ಟು ಬಾಡಿಗೆಗೆ ಪಡೆಯುವ ದೊಡ್ಡ ಮಾರುಕಟ್ಟೆಯೇ ಇದೆ. ಒಬ್ಬರೇ ಹೋಗಿ ಯಾರಿಗೂ ಮುಖ ತೋರಿಸದೆ ತಿನ್ನಬಹುದಾದ ‘ರಮೆನ್ ಬೂತ್’ಗಳು ಮತ್ತು ಒಂಟಿಯಾಗಿ ಸಮಯ ಕಳೆಯುವ ಸೋಲೋ ಕೆಫೆಗಳು ಇಲ್ಲಿ ಜನಪ್ರಿಯವಾಗಿವೆ.
ಭಾರತದಲ್ಲೂ ಇಂದಿನ ಜೆನ್-ಜಿ ಮತ್ತು ಮಿಲೇನಿಯಲ್ ಯುವಕರು ತೀವ್ರ ಸ್ಪರ್ಧೆ ಮತ್ತು ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಐಟಿ ಮತ್ತು ಕಾರ್ಪೆರೇಟ್ ವಲಯದಲ್ಲಿನ ಉದ್ಯೋಗ ಕಡಿತ, ಸ್ಟಾರ್ಟಪ್ಗಳ ಒತ್ತಡ ಮತ್ತು ತೀವ್ರ ಸ್ಪರ್ಧೆಯಿಂದಾಗಿ ಯುವಕರಲ್ಲಿ 25ರ ಹರೆಯದಲ್ಲೇ ‘ಕರಿಯರ್ ಬರ್ನ್ಔಟ್’ ಕಾಣಿಸಿಕೊಳ್ಳುತ್ತಿದೆ. ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಯುವಕರಲ್ಲಿ ಒಂಟಿತನ ಮತ್ತು ಆತಂಕ ಹೆಚ್ಚಾಗುತ್ತಿದೆ. ಹಿಂದಿನ ತಲೆಮಾರಿನಂತೆ ಮಾನಸಿಕ ಆರೋಗ್ಯದ ಬಗ್ಗೆ ಮುಚ್ಚಿಡದೆ, ಇಂದಿನ ಭಾರತೀಯ ಯುವಕರು ಮುಕ್ತವಾಗಿ ಥೆರಪಿ ಪಡೆಯಲು ಹಣ ಖರ್ಚು ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಸ್ಮಾರ್ಟ್ ಫೋನ್ನಿಂದ ದೂರವಿರುವ ಡಿಜಿಟಲ್ ಡಿಟಾಕ್ಸ್, ರೆಸಾರ್ಟ್ಗಳಿಗೆ ಹೋಗುವುದು, ಸೌಂಡ್ ಹೀಲಿಂಗ್ ಮತ್ತು ಒಂಟಿ ಪ್ರಯಾಣದ ಮೂಲಕ ನೆಮ್ಮದಿ ಹುಡುಕುತ್ತಿದ್ದಾರೆ.