ಅಯ್ಯೋ ದುರ್ವಿಧಿಯೇ... ನದಿಗೆ ಬಸ್ ಉರುಳಿ 24 ಪ್ರಯಾಣಿಕರ ದುರಂತ ಸಾವು, ಹಲವರ ಸ್ಥಿತಿ ಗಂಭೀರ! Bus Accident
- ನೆರೆಯ ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತ
- ಅಪಘಾತದಲ್ಲಿ ದುರಂತ ಸಾವಿಗೀಡಾದ ಸುಮಾರು 24 ಮಂದಿ
- ಬಾಂಗ್ಲಾದ ರಾಜ್‌ಬರಿ ಜಿಲ್ಲೆಯ ದೌಲತ್ಡಿಯಾ ಟರ್ಮಿನಲ್‌ನಲ್ಲಿ ಸಂಭವಿಸಿದ ದುರ್ಘಟನೆ
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ( Bus Accident ) ಸುಮಾರು 24 ಮಂದಿ ದುರಂತ ಸಾವಿಗೀಡಾಗಿದ್ದಾರೆ. ರಾಜ್‌ಬರಿ ಜಿಲ್ಲೆಯ ದೌಲತ್ಡಿಯಾ ಟರ್ಮಿನಲ್‌ನಲ್ಲಿ 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪದ್ಮಾ ನದಿಗೆ ಉರುಳಿ, ದುರ್ಘಟನೆ ಸಂಭವಿಸಿದೆ.
ಈ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈದ್ ರಜಾದಿನಗಳನ್ನು ಮುಗಿಸಿ ಅನೇಕ ಮಂದಿ ಢಾಕಾಗೆ ಮರಳುತ್ತಿದ್ದರು. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ದೌಲತ್ಡಿಯಾದ ದೋಣಿ ನಿಲ್ದಾಣದ ಬಳಿ ಬಸ್ ನದಿಗೆ ಉರುಳಿ ಈ ಭೀಕರ ಅಪಘಾತ ಸಂಭವಿಸಿದೆ. ಬಸ್ ರಾಜ್ಬರಿಯಿಂದ ಢಾಕಾಗೆ ಹೋಗುತ್ತಿತ್ತು. ಅಪಘಾತದ ಸ್ಥಳ ಢಾಕಾದಿಂದ ಸುಮಾರು 128 ಕಿ.ಮೀ ದೂರದಲ್ಲಿದೆ.
ಬಸ್ ಅಪಘಾತದ ಬಗ್ಗೆ ಮಾಹಿತಿ ತಿಳಿದ ನಂತರ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ನಿನ್ನೆ ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಸ್ತುತ ನಾವು 24 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಇನ್ನೂ ಕೆಲವರು ಕಾಣೆಯಾಗಿರುವ ಸಾಧ್ಯತೆ ಇದೆ. ಕೆಲವರು ಬದುಕುಳಿದಿದ್ದಾರೆ. ರಾತ್ರಿಯಾಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಗ್ನಿಶಾಮಕ ದಳ, ನೌಕಾಪಡೆ, ಪೊಲೀಸ್ ಮತ್ತು ಇತರ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಗುರುವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಎಂಬುವರು ನಿನ್ನೆ ಸಂಜೆ ಹೇಳಿದರು.
ಬಸ್ ಅಪಘಾತದಲ್ಲಿ ಬದುಕುಳಿದ ಅಬ್ದುಲ್ ಅಜೀಜುಲ್ ಎಂಬುವರು ಮಾತನಾಡಿ, ನಾನು ರಾಜ್‌ಬರಿಯ ಕಲುಖಾಲಿ ಉಪಜಿಲ್ಲಾದಿಂದ ಬಸ್ ಹತ್ತಿದೆ. ಬಸ್ ನದಿಗೆ ಉರುಳುತ್ತಿದ್ದಂತೆ, ಅದರಿಂದ ಹೊರಬಂದು ನಾನು ನದಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಈಜಿದೆ ಮತ್ತು ನನ್ನ ಜೀವವನ್ನು ಉಳಿಸಿಕೊಂಡೆ. ಆದರೆ, ನನ್ನ ಹೆಂಡತಿ ಮತ್ತು ಮಗುವನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದರು.
ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರು ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸಂತ್ರಸ್ತರಿಗೆ ತಕ್ಷಣದ ಸಹಾಯವನ್ನು ಆದೇಶಿಸಿದ್ದಾರೆ, (ಏಜೆನ್ಸೀಸ್).