28,000 ಅಡಿಯಿಂದ ದಿಢೀರ್​ ಕೆಳಗಿಳಿದ ಬ್ರಿಟಿಷ್ ಏರ್​ವೇಸ್​​​ ವಿಮಾನ ಆಗಸದಲ್ಲೇ ಗಿರಕಿ ಹೊಡೆದ್ದಿದೇಕೆ? | British Airways  
ವಿದೇಶ

28,000 ಅಡಿಯಿಂದ ದಿಢೀರ್​ ಕೆಳಗಿಳಿದ ಬ್ರಿಟಿಷ್ ಏರ್​ವೇಸ್​​​ ವಿಮಾನ ಆಗಸದಲ್ಲೇ ಗಿರಕಿ ಹೊಡೆದ್ದಿದೇಕೆ? | British Airways

ವಿಮಾನ ಟ್ರ್ಯಾಕಿಂಗ್ ಸಂಸ್ಥೆ 'ಫ್ಲೈಟ್‌ರಾಡಾರ್24' ನೀಡಿರುವ ಮಾಹಿತಿಯಂತೆ, ಬೋಯಿಂಗ್ 777 ವಿಮಾನವು 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ತಾಂತ್ರಿಕ ತೊಂದರೆ ಅನುಭವಿಸಿದೆ ಎಂದು ತಿಳಿಸಿದೆ.

ಲಂಡನ್: ಕಳೆದ ವಾರ ಫ್ಲೈ ದುಬೈ ವಿಮಾನವೊಂದು ಹೈಜಾಕ್​ ಆಗಿ, ಭಾರತೀಯ ಪೈಲಟ್​ ಸ್ಮಿತ್​ ಮಚ್ಚಾರ್ ಸಾವಿನಿಂದ ಪವಾಡದಂತೆ ಬದುಕುಳಿದ ಘಟನೆ ಮರೆಯುವ ಮುನ್ನವೇ ಇದೀಗ ಲಂಡನ್​ನಿಂದ ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್‌ (British Airways ) ವಿಮಾನವೊಂದು ದಿಢೀರ್ ಯು-ಟರ್ನ್​ ಹೊಡೆದ ಘಟನೆ ಸದ್ಯ ಭಾರಿ ಗೊಂದಲಕ್ಕೆ ಕಾರಣವಾಗಿದೆ.

ಲಂಡನ್‌ ಹೀಥ್ರೂ ವಿಮಾನ ನಿಲ್ದಾಣದಿಂದ ಅಮೆರಿಕದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಹಾರಾಟದ ಮಧ್ಯೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನವು ಐರ್ಲೆಂಡ್ ವಾಯುಪ್ರದೇಶದಲ್ಲಿ ತುರ್ತುಸ್ಥಿತಿ ಘೋಷಿಸಿದ ಕೂಡಲೇ ಲಂಡನ್‌ಗೆ ವಾಪಾಸ್​ ಆಗುವ ಮೂಲಕ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಟ್ರ್ಯಾಕಿಂಗ್ ಸಂಸ್ಥೆ 'ಫ್ಲೈಟ್‌ರಾಡಾರ್24' ನೀಡಿರುವ ಮಾಹಿತಿಯಂತೆ, ಬೋಯಿಂಗ್ 777 ವಿಮಾನವು 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ತಾಂತ್ರಿಕ ತೊಂದರೆ ಅನುಭವಿಸಿದೆ ಎಂದು ತಿಳಿಸಿದೆ.

ಆಕಾಶದಲ್ಲೇ ಗಿರಕಿ ಹೊಡೆದ ವಿಮಾನ

ದೀರ್ಘ ದೂರದ ಪ್ರಯಾಣಕ್ಕಾಗಿ ವಿಮಾನದಲ್ಲಿ ಅಪಾರ ಪ್ರಮಾಣದ ಇಂಧನವನ್ನು ತುಂಬಿಸಲಾಗಿತ್ತು. ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ಅದರ ತೂಕ ಇಳಿಯಬೇಕಿದ್ದು ಕಡ್ಡಾಯ ಆಗಿದ್ದರಿಂದ, ಲಂಡನ್‌ ಹೀಥ್ರೂ ತಲುಪುವ ಮುನ್ನ ವಿಮಾನವು ಆಕಾಶದಲ್ಲೇ ಕೆಲ ಸಮಯ ವೃತ್ತಾಕಾರದಲ್ಲಿ ಗಿರಕಿ ಹೊಡೆದು, ಇಂಧನವನ್ನು ಖಾಲಿ ಮಾಡಿಕೊಂಡಿದೆ. 9,000 ಅಡಿ ಕೆಳಗೆ ಬರುತ್ತಿದ್ದಂತೆ ಲಂಡನ್​ನತ್ತ ವಾಪಾಸ್​ ಆಗಿದೆ.

ಅಂತಿಮವಾಗಿ ಅಗತ್ಯವಿದ್ದಷ್ಟು ತೂಕ ಕಡಿಮೆಯಾದ ಬಳಿಕವೇ, ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಪ್ರಾಣ ಅಪಾಯವಿಲ್ಲದೇ ನಿಟ್ಟುಸಿರು ಬಿಟ್ಟಿದ್ದಾರೆ.

ಅಷ್ಟಕ್ಕೂ ಸಮಸ್ಯೆ ಏನು?

ವಿಮಾನದಲ್ಲಿ ಯಾವ ರೀತಿಯ ತುರ್ತು ಪರಿಸ್ಥಿತಿ ಸಂಭವಿಸಿದೆ ಎಂಬುದನ್ನು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದು ತಾಂತ್ರಿಕ ಸಮಸ್ಯೆಯೇ, ವೈದ್ಯಕೀಯ ತುರ್ತು ಸ್ಥಿತಿಯೇ ಅಥವಾ ಇನ್ನೇನಾದರೂ ಸಂಭವಿಸಿದೆಯಾ ಎಂಬುದು ಸದ್ಯದ ಮಟ್ಟಿಗೆ ಅಸ್ಪಷ್ಟವಾಗಿದೆ. ವಿಮಾನಯಾನ ಸಂಸ್ಥೆ ಅಥವಾ ಸಂಬಂಧಿತ ಅಧಿಕಾರಿಗಳು ಅಧಿಕೃತವಾಗಿ ವಿವರಗಳನ್ನು ಬಿಡುಗಡೆ ಮಾಡಿದ ನಂತರವೇ ತುರ್ತು ಪರಿಸ್ಥಿತಿಯ ಅಸಲಿ ಕಾರಣ ಹೊರಬೀಳಲಿದೆ,(ಏಜೆನ್ಸೀಸ್).