16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಯುಕೆ
- ಆಸ್ಟ್ರೇಲಿಯಾ ಮಾದರಿಯನ್ನೇ ಅನುಸರಿಸಿದ ಯುನೈಟೆಡ್ ಕಿಂಗ್ಡಮ್
- 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧಕ್ಕೆ ನಿರ್ಧಾರ
ಲಂಡನ್: ಈ ಮೊದಲು 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ಬ್ಯಾನ್ ಮಾಡುವ ಮೂಲಕ ಆಸ್ಟ್ರೇಲಿಯಾ ಐತಿಹಾಸಿಕ ತೀರ್ಪು ಕೊಟ್ಟ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಈಗ ಅದೇ ರೀತಿ ಯುನೈಟೆಡ್ ಕಿಂಗ್ಡಮ್ ಕೂಡ ಮಾಡಿದ್ದು, ತನ್ನ ದೇಶದಲ್ಲಿಯೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಿದ್ದಾಗಿ ಘೋಷಿಸಿದೆ.
ಮಕ್ಕಳ ಆನ್‌ಲೈನ್ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಅತ್ಯಂತ ಕಠಿಣ ಹಾಗೂ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಆ್ಯಪ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ (ಜೂ.15) ಘೋಷಿಸಿದ್ದಾರೆ. ಇದರೊಟ್ಟಿಗೆ, ಗೇಮಿಂಗ್ ಮತ್ತು ಲೈವ್‌ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೂ ಕಠಿಣ ನಿರ್ಬಂಧಗಳನ್ನು ಹೇರಲು ಸರ್ಕಾರ ಮುಂದಾಗಿದೆ.
ಈ ಕುರಿತು ಮಾತನಾಡಿದ ಪ್ರಧಾನಿ ಸ್ಟಾರ್ಮರ್, "ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಇರುವುದನ್ನು ನೋಡಿದರೆ, ಅವರ ಯೋಗಕ್ಷೇಮವನ್ನು ಉತ್ತಮವಾಗಿ ರಕ್ಷಿಸಲು ಸಾಮಾಜಿಕ ಮಾಧ್ಯಮ ನಿಯಂತ್ರಣದಲ್ಲಿ ನಾವು ಮಹತ್ವದ ಬದಲಾವಣೆಗಳನ್ನು ತರಬೇಕು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ ಬಳಿಕ, ಸಂಪೂರ್ಣ ನಿಷೇಧವೇ ಸರಿಯಾದ ಆಯ್ಕೆ ಎಂಬುದು ನಮ್ಮ ನಿರ್ಧಾರವಾಗಿದೆ. ಮೇಲ್ನೋಟಕ್ಕೆ ಇದು ಸುಲಭ ಅನಿಸಿದರೂ, ಅಂದುಕೊಂಡತಿಲ್ಲ. ಪ್ರಭಾವಿ ದೈತ್ಯ ತಂತ್ರಜ್ಞಾನ (Big Tech) ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಮತ್ತು ಜವಾಬ್ದಾರಿ ಸರ್ಕಾರಕ್ಕಿದೆ ಎಂದು ಪ್ರಧಾನಿಗಳು ಒತ್ತಿ ಹೇಳಿದರು.
ಕಠಿಣ ಕ್ರಮಕ್ಕೆ ಕಾರಣಗಳೇನು?
ಮಾನಸಿಕ ಆರೋಗ್ಯದ ಕಾಳಜಿ: ಮಕ್ಕಳು ಆನ್‌ಲೈನ್‌ನಲ್ಲಿ ಅತಿಯಾದ ಸಮಯ ಕಳೆಯುವುದರಿಂದ ಎದುರಿಸುತ್ತಿರುವ ಮಾನಸಿಕ ಆರೋಗ್ಯದ ಅಪಾಯಗಳ ಬಗ್ಗೆ ಕಳವಳ ಹೆಚ್ಚುತ್ತಿರುವುದು ಈ ಕಠಿಣ ನಿರ್ಧಾರಕ್ಕೆ ಮುಖ್ಯ ಕಾರಣ.
ಪೋಷಕರೊಂದಿಗೆ ಸಮಾಲೋಚನೆ: ಇತ್ತೀಚೆಗೆ ಹಲವು ಪೋಷಕರನ್ನು ಭೇಟಿಯಾಗಿ, ಅವರಿಂದ ಕೇಳಿಬಂದ ಸಲಹೆಗಳನ್ನು ಆಲಿಸಿದ ನಂತರವೇ ಈ ನಿರ್ಧಾರಕ್ಕೆ ತೀರ್ಮಾನ.
ಆಸ್ಟ್ರೇಲಿಯಾ ಮಾದರಿ: ಕಳೆದ ವರ್ಷ ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸಿದ ಕಾನೂನು ಮತ್ತು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಬ್ರಿಟನ್ ಈ ದಾರಿಯನ್ನು ಆರಿಸಿದ್ದಾಗಿ ವರದಿಯಾಗಿದೆ.
ಹೇಗಿರಲಿದೆ ನಿಯಮ?
- ಆನ್‌ಲೈನ್‌ನಲ್ಲಿ ಕಡ್ಡಾಯ ವಯಸ್ಸಿನ ಪರಿಶೀಲನೆ (Age Verification)
- ಮಕ್ಕಳನ್ನು ಸೆಳೆಯುವ ಅಲ್ಗಾರಿದಮ್‌ಗಳು ಸಂಪೂರ್ಣ ಬದಲು
- ಸ್ಮಾರ್ಟ್ಫೋನ್ಗಳಲ್ಲಿ ಮಕ್ಕಳು ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳದಂತೆ ತಡೆ