ಭಾನುವಾರ ನಡೆದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ 2ನೇ ಸುತ್ತಿನಲ್ಲಿ ಅಧ್ಯಕ್ಷ ಲುಲಾ ಡಾ ಸಿಲ್ವಾಗೆ ಭರ್ಜರಿ ಜಯ.
ಬ್ರೆಜಿಲ್ನಲ್ಲಿ ಟ್ರಂಪ್ ಆಪ್ತ ಸೆನೆಟರ್ ಫ್ಲಾವಿಯೊ ಬೊಲ್ಸನಾರೊನಿಗೆ ಸೋಲು.
ನಾಲ್ಕನೇ ಬಾರಿಗೆ ಅಧ್ಯಕ್ಷ ಪಟ್ಟಕ್ಕೇರಿದ ಕಾರ್ಮಿಕ ನಾಯಕ ಲೂಲಾ ಡಾ ಸಿಲ್ವಾ.
ರಿಯೊ ಡಿ ಜನೈರೊ: ತೀವ್ರ ಕುತೂಹಲ ಮೂಡಿಸಿದ್ದ ಬ್ರೆಜಿಲ್ನ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಹೊರಬಿದ್ದಿದೆ. ಟ್ರಂಪ್ರ ನೀತಿಗಳನ್ನು ವಿರೋಧಿಸುತ್ತಾ ಬಂದಿದ್ದ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಐತಿಹಾಸಿಕ ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿಗೆ ಅಧ್ಯಕ್ಷ ಗದ್ದುಗೆ ಏರಿದ್ದಾರೆ.
ಡೇಡಾಫೋಲ್ಹಾ ಸಮೀಕ್ಷೆಯ ಪ್ರಕಾರ, ಲೂಲಾ ಡಾ ಸಿಲ್ವಾ ಅವರು ಶೇ.51 ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸೆನೆಟರ್ ಫ್ಲಾವಿಯೊ ಬೊಲ್ಸೊನಾರೊ ಅವರು ಶೇ.48 ರಷ್ಟು ಮತಗಳನ್ನು ಪಡೆದು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಇದೇ ಮಂಗಳವಾರಕ್ಕೆ(ಅ.27) 81 ನೇ ವರ್ಷಕ್ಕೆ ಕಾಲಿಡಲಿರುವ ಲುಲಾ, ಈ ಗೆಲುವಿನೊಂದಿಗೆ ಬ್ರೆಜಿಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಅಧ್ಯಕ್ಷರಾದಂತಾಗಿದೆ.
ಬಲಪಂಥೀಯ ಸೆನೆಟರ್ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೊಲ್ಪನಾರೊ ಅವರ ಪುತ್ರ, ಅಮೆರಿಕ ಅಧ್ಯಕ್ಷ ಟ್ರಂಪ್ ಆಪ್ತ ಎಂದು ಗುರುತಿಸಿಕೊಂಡಿರುವ ಫ್ಲಾವಿಯೊ ಬೊಲ್ಪನಾರೊ ಅವರನ್ನು ಲೂಲಾ ಸೋಲಿಸುವ ಮೂಲಕ ಮತ್ತೆ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ಗೆಟುಲಿಯೊ ವರ್ಗಾಸ್ ನಂತರ ಅತಿ ಹೆಚ್ಚು ಕಾಲ ಬ್ರೆಜಿಲ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದ್ವಿತೀಯ ನಾಯಕ ಎಂಬ ಹೆಗ್ಗಳಿಕೆಗೆ ಲೂಲಾ ಡಾ ಸಿಲ್ವಾ ಪಾತ್ರರಾಗಿದ್ದಾರೆ. ಈ ಅವಧಿ ಸೇರಿ ಲೂಲಾ ಒಟ್ಟು 16 ವರ್ಷಗಳ ಕಾಲ ಆಡಳಿತ ನಡೆಸಲಿದ್ದು, ಅಧಿಕಾರ ಮುಕ್ತಾಯವಾಗುವ ಹೊತ್ತಿಗೆ ಬ್ರೆಜಿಲ್ನ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.
ಈ ಬಾರಿ ಬ್ರೆಜಿಲ್ ಚುನಾವಣೆಯಲ್ಲಿ ದರ ಏರಿಕೆ, ಭ್ರಷ್ಟಾಚಾರ ಮತ್ತು ಅಪರಾಧ ಪ್ರಮುಖ ಅಸ್ತ್ರಗಳಾಗಿದ್ದವು. ಅಪರಾಧದ ವಿರುದ್ಧ ಕಠಿಣ ಕ್ರಮ ಮತ್ತು ಆಹಾರ ಪದಾರ್ಥಗಳ ಬೆಲೆ ಇಳಿಕೆ ಭರವಸೆ ನೀಡುವ ಮೂಲಕ ಲೂಲಾ ಬ್ರೆಜಿಲ್ ಜನರ ಮನ ಗೆದ್ದಿದ್ದಾರೆ. 1989ರಲ್ಲಿ ಬ್ರೆಜಿಲ್ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾದಾಗಿನಿಂದ, ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಸಾಧಿಸದ ಯಾವೊಬ್ಬ ಅಭ್ಯರ್ಥಿಯೂ ಎರಡನೇ ಸುತ್ತಿನ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿರಲಿಲ್ಲ. ಈ ಇತಿಹಾಸವನ್ನು ಲುಲಾ ಈಗ ಬದಲಾಯಿಸಿದ್ದಾರೆ.
1980ರ ದಶಕದಲ್ಲಿ ಬ್ರೆಜಿಲ್ನ ಸರ್ವಾಧಿಕಾರವನ್ನು ಮಟ್ಟಹಾಕಲು ನಡೆದ ಮುಷ್ಕರಗಳ ನೇತೃತ್ವ ವಹಿಸಿದ್ದ ಮೆಟಲ್ವರ್ಕರ್ಸ್ ಯೂನಿಯನ್ ನಾಯಕರಾಗಿ ಲುಲಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರು. 2003 ರಿಂದ 2010 ರವರೆಗೆ ಬ್ರೆಜಿಲ್ನ ಮೊದಲ ಎರಡು ಅವಧಿಗಳಲ್ಲಿ ಲೂಲಾ ಆಡಳಿತ ನಡೆಸಿದಾಗ ದೇಶದ ಆರ್ಥಿಕತೆ ಭರ್ಜರಿಯಾಗಿ ಬೆಳೆದು, ಕೋಟ್ಯಂತರ ಜನರು ಬಡತನದಿಂದ ಹೊರಬಂದಿದ್ದರು.
2010ರ ದಶಕದಲ್ಲಿ ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದ್ದರಿಂದ ಲೂಲಾ ಜೈಲು ವಾಸವನ್ನೂ ಅನುಭವಿಸಬೇಕಾಯಿತು. ಆದರೆ ನಂತರ ಪ್ರಕ್ರಿಯೆಯ ದೋಷಗಳಿಂದಾಗಿ ಅವರ ಮೇಲಿನ ಶಿಕ್ಷೆಗಳು ರದ್ದುಗೊಂಡವು.