ನವದೆಹಲಿ: ಬಾಂಗ್ಲಾದೇಶದಲ್ಲಿ ನಿರ್ಮಾಣವಾಗುತ್ತಿದ್ದ ದೇಶದ ಅತಿ ಎತ್ತರದ 81 ಅಡಿ ಶ್ರೀರಾಮನ ಪ್ರತಿಮೆ(Statue of Rama) ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಹಲವು ಇಸ್ಲಾಮಿಕ್ ಸಂಘಟನೆಗಳಿಂದ ವಿರೋಧ ಮತ್ತು ಬೆದರಿಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಮೆಯ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬೆಳವಣಿಗೆ ಬಾಂಗ್ಲಾದೇಶದ ಹಿಂದೂ ಸಮುದಾಯದಲ್ಲಿ ಆತಂಕ ಉಂಟುಮಾಡಿದ್ದು, ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಉತ್ತರ ಬಾಂಗ್ಲಾದೇಶದ ಗೈಬಾಂಧಾ ಜಿಲ್ಲೆಯ ಪಲಾಶ್‌ಬಾರಿ ಪ್ರದೇಶದಲ್ಲಿರುವ ಶ್ರೀ ಶ್ರೀ ರಾಧಾ ಗೋವಿಂದ ದೇವಾಲಯದ ಆವರಣದಲ್ಲಿ ಈ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 220 ಮಿಲಿಯನ್ ಟಾಕಾ (ಸುಮಾರು 15.6 ಕೋಟಿ) ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯಲ್ಲಿ 81 ಅಡಿ ಎತ್ತರದ ಶ್ರೀರಾಮನ ಪ್ರತಿಮೆ, 50 ಅಡಿ ಎತ್ತರದ ಶ್ರೀಕೃಷ್ಣನ ಪ್ರತಿಮೆ ಹಾಗೂ 30 ಅಡಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸುವ ಯೋಜನೆ ಇತ್ತು.
ದೇವಾಲಯ ಸಮಿತಿಯ ಅಧ್ಯಕ್ಷ ಹರಿದಾಸ್ ಚಂದ್ರ ದಾಸ್ ಅವರ ಪ್ರಕಾರ, ಶ್ರೀರಾಮನು ಸನಾತನ ಧರ್ಮದ ಪ್ರಮುಖ ಆರಾಧ್ಯ ದೇವರಲ್ಲಿ ಒಬ್ಬರಾಗಿದ್ದು, ಅವರ ಗೌರವಾರ್ಥ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಆದರೆ ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಧಾರ್ಮಿಕ ಮುಖಂಡರು ಮತ್ತು ಸಂಘಟನೆಗಳು ಪ್ರತಿಮೆ ನಿರ್ಮಾಣದ ವಿರುದ್ಧ ಪ್ರಚಾರ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಮೆ ನಿರ್ಮಾಣ ಆರಂಭವಾದ ದಿನದಿಂದಲೇ ಕೆಲವು ಸಂಘಟನೆಗಳು ಅಡ್ಡಿಪಡಿಸುತ್ತಿದ್ದವು. ಯೋಜನೆಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ವಿಚಾರಣೆಯನ್ನೂ ನಡೆಸಬೇಕು ಎಂದು ಒತ್ತಾಯಿಸಲಾಗಿತ್ತು. ಇತ್ತೀಚೆಗೆ ಒಬ್ಬ ಧಾರ್ಮಿಕ ಪ್ರಚಾರಕ, "ಸರ್ಕಾರ ಬುಲ್ಡೋಜರ್ ಬಳಸಿ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಸಾಮಾನ್ಯ ಮುಸ್ಲಿಮರೇ ಅದನ್ನು ಕೆಡವುತ್ತಾರೆ" ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಈ ಬೆದರಿಕೆಗಳ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವರು ಭಯಗೊಂಡಿದ್ದಾರೆ ಎಂದು ದೇವಾಲಯ ಸಮಿತಿ ಹೇಳಿದೆ. ಇದೇ ಕಾರಣದಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ದೇವಾಲಯ ಸಮಿತಿಯ ಸಲಹೆಗಾರ ಶ್ಯಾಮಲಾಲ್ ಕುಮಾರ್ ಮಹಾಂತ ಅವರು, "ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇವೆ. ಯಾವುದೇ ವಿವಾದಕ್ಕೆ ನಾವು ಕಾರಣವಾಗಲು ಬಯಸುವುದಿಲ್ಲ" ಎಂದು ಹೇಳಿದ್ದಾರೆ.
ಆದರೆ ಈ ನಿರ್ಧಾರ ಹಿಂದೂ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿ ಎಲ್ಲರಿಗೂ ತಮ್ಮ ಧರ್ಮ ಆಚರಿಸುವ ಹಕ್ಕು ಇದೆ ಎಂದು ಸರ್ಕಾರ ಹೇಳುತ್ತದೆ. ಹಾಗಿದ್ದರೆ ಹಿಂದೂಗಳು ತಮ್ಮ ದೇವರ ಪ್ರತಿಮೆ ನಿರ್ಮಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಕೇಳಲಾಗುತ್ತಿದೆ,(ಏಜೆನ್ಸೀಸ್).