ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಪಟ್ಟು; ಭಾರತದ ಮೇಲೆ ಒತ್ತಡ ಹೇರುತ್ತಾ ಬಾಂಗ್ಲಾದ ಹೊಸ ಸರ್ಕಾರ..?
ಢಾಕಾ: ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ, ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರ ಹಸ್ತಾಂತರದ ವಿಷಯದಲ್ಲಿ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ. ಭಾರತವು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಿದೆ ಎಂಬ ಭರವಸೆ ನಮಗಿದೆ ಎಂದು ಬಿಎನ್‌ಪಿ ಹಿರಿಯ ನಾಯಕ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಶನಿವಾರ (ಫೆ.14) ಮಹತ್ವದ ಹೇಳಿಕೆ ನೀಡಿದ್ದಾರೆ.
ನ್ಯಾಯಾಂಗ ಪ್ರಕ್ರಿಯೆ ಮತ್ತು ಅಂತರಾಷ್ಟ್ರೀಯ ಕಾನೂನು
ಈ ಬಗ್ಗೆ ಪಕ್ಷದ ಮುಖ್ಯಸ್ಥ ತಾರಿಕ್ ರಹಮಾನ್ ಅವರ ಆಪ್ತರೂ ಆಗಿರುವ ಫಕ್ರುಲ್, ಹಸೀನಾ ಅವರ ಹಸ್ತಾಂತರ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನು ಚೌಕಟ್ಟಿನಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಈಗಾಗಲೇ ಭಾರತಕ್ಕೆ ಈ ಬಗ್ಗೆ ವಿನಂತಿ ಮಾಡಿದ್ದೇವೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅನ್ವಯವೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಹಸೀನಾ ಅವರನ್ನು ಮರಳಿ ಕರೆತರುವುದು ಸೇಡಿನ ರಾಜಕಾರಣವಲ್ಲ, ಬದಲಾಗಿ ನ್ಯಾಯದ ಹಾದಿ ಎಂದು ಬಣ್ಣಿಸಿದ್ದಾರೆ.
ಹಸೀನಾ ಮೇಲೆ ಮರಣದಂಡನೆ ಶಿಕ್ಷೆಯ ತೂಗುಗತ್ತಿ..!
2024ರ ಆಗಸ್ಟ್‌ನಲ್ಲಿ ನಡೆದ ಭೀಕರ ಜನಸಾಮಾನ್ಯರ ದಂಗೆಯ ನಂತರ ಶೇಖ್ ಹಸೀನಾ ಅಧಿಕಾರ ತ್ಯಜಿಸಿ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯು, 2024ರ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹತ್ಯಾಕಾಂಡದ ಆರೋಪದ ಮೇಲೆ ಶೇಖ್ ಹಸೀನಾ ಅವರಿಗೆ ಗೈರುಹಾಜರಿಯಲ್ಲೇ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಬಿಎನ್‌ಪಿ ಈಗ ಕಾನೂನುಬದ್ಧವಾಗಿ ಹಸೀನಾ ಅವರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ಭಾರತ-ಬಾಂಗ್ಲಾ ಸಂಬಂಧಕ್ಕೆ ಅಡ್ಡಿಯಿಲ್ಲ
ಹಸೀನಾ ಅವರ ಹಸ್ತಾಂತರದ ವಿಷಯವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಫಕ್ರುಲ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಈ ವಿಷಯವು ಉಭಯ ದೇಶಗಳ ಸ್ನೇಹಕ್ಕೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ. ಭಾರತವು ಹಸೀನಾ ಅವರನ್ನು ಕಳುಹಿಸಿಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಮುಂದಿನ ನಿರ್ಧಾರಗಳು ಕಾಲಕ್ಕೆ ತಕ್ಕಂತೆ ನಡೆಯಲಿವೆ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಸ್ತಾಂತರ ಒಪ್ಪಂದದ ಅಸ್ತ್ರ
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗಾಗಲೇ ಅಪರಾಧಿಗಳ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿದೆ. ಬಿಎನ್‌ಪಿ ಅಧಿಕಾರಕ್ಕೆ ಬಂದ ನಂತರ ಅಧಿಕೃತವಾಗಿ ಈ ಒಪ್ಪಂದದ ಅಡಿಯಲ್ಲಿ ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ನಾವು ಹಸೀನಾ ಅವರನ್ನು ಮರಳಿ ದೇಶಕ್ಕೆ ಕರೆತರಲು ಬಯಸುತ್ತೇವೆ ಮತ್ತು ಅದಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಫಕ್ರುಲ್ ಹೇಳಿದ್ದಾರೆ.
ಈ ಬೆಳವಣಿಗೆಯು ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಹೊಸ ತಿರುವು ನೀಡಿದ್ದು, ಭಾರತವು ತನ್ನ ಹಳೆಯ ಮಿತ್ರ ಹಸೀನಾ ಮತ್ತು ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಎನ್‌ಪಿ ಸರ್ಕಾರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಸವಾಲನ್ನು ಎದುರಿಸುತ್ತಿದೆ,(ಏಜೆನ್ಸೀಸ್).