ಪಾಕ್​ನಲ್ಲಿ ರಕ್ತಪಾತ: ಇಸ್ಲಾಮಾಬಾದ್ ಸ್ಫೋಟಕ್ಕೆ 70 ಬಲಿ, 250ಕ್ಕೂ ಹೆಚ್ಚು ಜನರಿಗೆ ಗಾಯ..! 
ವಿದೇಶ

ಪಾಕ್​ನಲ್ಲಿ ರಕ್ತಪಾತ: ಇಸ್ಲಾಮಾಬಾದ್ ಸ್ಫೋಟಕ್ಕೆ 70 ಬಲಿ, 250ಕ್ಕೂ ಹೆಚ್ಚು ಜನರಿಗೆ ಗಾಯ..! Islamabad blast

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್(Islamabad blast) ಇಂದು ಮಧ್ಯಾಹ್ನ ಭೀಕರ ಆತ್ಮಹತ್ಯಾ ಬಾಂಬ್ ದಾಳಿಗೆ ನಲುಗಿ ಹೋಗಿದೆ. ನಗರದ ಶೆಹಜಾದ್ ಟೌನ್ ಪ್ರದೇಶದ ತರ್ಲಾಯ್ ಇಮಾಂಬರ್ಗಾ ಎಂಬ ಶಿಯಾ ಪ್ರಾರ್ಥನಾ ಮಂದಿರದಲ್ಲಿ ನಡೆದ ಈ ಸ್ಫೋಟದಲ್ಲಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪ್ರಾರ್ಥನೆಯ ನಂತರ ಸಂಭವಿಸಿದ ದುರಂತ

ಶುಕ್ರವಾರದ ವಿಶೇಷ ಪ್ರಾರ್ಥನೆ ಮುಗಿಸಿ ಭಕ್ತರು ಹೊರಬರುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಮಸೀದಿಯ ಕಟ್ಟಡದ ಬಹುಭಾಗ ಧರೆಗುರುಳಿದೆ. ಗಾಯಾಳುಗಳನ್ನು ತಕ್ಷಣವೇ PIMS ಮತ್ತು ಪಾಲಿಕಿನಿಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ಅಮಾನವೀಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ರದ್ದ್-ಉಲ್-ಫಿತ್ನಾ-1 ಮತ್ತು ಪ್ರತೀಕಾರದ ಭೀತಿ

ಈ ಬಾಂಬ್ ದಾಳಿಯು ಪಾಕಿಸ್ತಾನ ಸೇನೆಯು ಬಲೂಚಿಸ್ತಾನದಲ್ಲಿ ಆರಂಭಿಸಿರುವ ಬೃಹತ್ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ ನಡೆದಿದೆ. ಜನವರಿ 26 ರಂದು ಆರಂಭವಾದ ಆಪರೇಷನ್ ರದ್ದ್-ಉಲ್-ಫಿತ್ನಾ-1 ಮೂಲಕ ಪಾಕಿಸ್ತಾನಿ ಪಡೆಗಳು ಇದುವರೆಗೆ 216 ಬಲೂಚ್ ಬಂಡುಕೋರರನ್ನು ಹತ್ಯೆ ಮಾಡಿವೆ. ಈ ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮತ್ತು 36 ನಾಗರಿಕರು ಸಹ ಮೃತಪಟ್ಟಿದ್ದಾರೆ. ಬಲೂಚ್ ಸಂಘಟನೆಗಳು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ವಿರೋಧಿಸುತ್ತಿದ್ದು, ಈ ದಾಳಿಯು ಅದರ ಪ್ರತೀಕಾರವೇ ಎಂಬ ಸಂಶಯ ವ್ಯಕ್ತವಾಗಿದೆ.

ಮೂರು ತಿಂಗಳಲ್ಲಿ ಎರಡನೇ ದಾಳಿ: ಭದ್ರತಾ ವೈಫಲ್ಯ..?

ಇಸ್ಲಾಮಾಬಾದ್‌ನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಆತ್ಮಹತ್ಯಾ ದಾಳಿ ಇದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ನಡೆದ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದರು. ಅಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಈ ಭಯೋತ್ಪಾದನೆಗೆ ಅಫ್ಘಾನಿಸ್ತಾನವೇ ಕಾರಣ ಎಂದು ನೇರ ಆರೋಪ ಮಾಡಿದ್ದರು. ಪಾಕಿಸ್ತಾನವು ಯುದ್ಧದ ಸ್ಥಿತಿಯಲ್ಲಿದೆ, ಇದು ಕೇವಲ ಗಡಿಭಾಗದ ಹೋರಾಟವಲ್ಲ, ಇಡೀ ದೇಶದ ಅಸ್ತಿತ್ವದ ಪ್ರಶ್ನೆ ಎಂದು ಎಚ್ಚರಿಸಿದ್ದರು.

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಮೇಲೆ ಕಣ್ಣು..?

ಬಲೂಚ್ ಬಂಡುಕೋರರು ದೀರ್ಘಕಾಲದಿಂದ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ವಿಶೇಷವಾಗಿ ಚೀನಾದ 60 ಬಿಲಿಯನ್ ಡಾಲರ್ ಹೂಡಿಕೆಯ CPEC ಯೋಜನೆಗಳನ್ನು ಇವರು ವಿರೋಧಿಸುತ್ತಿದ್ದು, ಈ ಯೋಜನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇಂದಿನ ದಾಳಿಯೂ ಅದರ ಭಾಗವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅತಂತ್ರ ಸ್ಥಿತಿಯಲ್ಲಿ ಪಾಕಿಸ್ತಾನ

ಪ್ರಸ್ತುತ ಘಟನೆಯ ಜವಾಬ್ದಾರಿಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಇನ್ನೂ ಹೊತ್ತುಕೊಂಡಿಲ್ಲ. ಆದರೆ, ಒಂದು ಕಡೆ ಬಲೂಚಿಸ್ತಾನದ ಬಂಡಾಯ, ಇನ್ನೊಂದು ಕಡೆ ಅಫ್ಘಾನಿಸ್ತಾನದ ಗಡಿ ವಿವಾದ ಹಾಗೂ ರಾಜಧಾನಿಯ ಹೃದಯಭಾಗದಲ್ಲೇ ನಡೆಯುತ್ತಿರುವ ಸರಣಿ ಸ್ಫೋಟಗಳು ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿವೆ. ರಕ್ಷಣಾ ಪಡೆಗಳು ಈಗ ಇಡೀ ಇಸ್ಲಾಮಾಬಾದ್ ಅನ್ನು ಸುತ್ತುವರೆದಿದ್ದು, ಹೆಚ್ಚಿನ ದಾಳಿಗಳು ನಡೆಯದಂತೆ ತೀವ್ರ ನಿಗಾ ವಹಿಸಿವೆ,(ಏಜೆನ್ಸೀಸ್).