ಲೆಬನಾನಿನ ಹಿಜ್ಬೊಲ್ಲಾ ಸಂಘಟನೆ ಮೇಲೆ ಇಸ್ರೇಲ್ ದಾಳಿ
- ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸಾವು
- ಪ್ರತೀಕಾರಕ್ಕೆ ಮುಂದಾದ ಲೆಬಾನಾನ್ ಮೇಲೆ ಇಸ್ರೇಲ್ ಪ್ರತಿದಾಳಿ
- 31 ಜನ ಸಾವು ಮತ್ತು 149 ಜನ ಗಾಯಗೊಂಡಿರುವುದಾಗಿ ಮಾಹಿತಿ
ಬೈರುತ್: ಇಸ್ರೇಲ್ ಮೇಲೆ ಲೆಬಾನಾನಿನ ಸಂಘಟನೆ ಹಿಜ್ಬೊಲ್ಲಾ ರಾಕೆಟ್ ಮತ್ತು ಡ್ರೋಣ್ ದಾಳಿ ಮಾಡಿದ ನಂತರ ಬೈರುತ್ ಮೇಲೆ ಇಸ್ರೇಲ್ (Lebanon Israel) ನಡೆಸಿದ ಪ್ರತಿದಾಳಿಗೆ ಸುಮಾರು 31 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಲೆಬನಾನಿನ ಬೈರುತ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ 31 ಜನ ಸಾವನ್ನಪ್ಪಿದ್ದು ಸುಮಾರು 149 ನಾಗರಿಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಸೋಮವಾರ (ಮಾ.2) ತಿಳಿಸಿದೆ.
ಇರಾನಿನ ಸವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸಾವನ್ನಪ್ಪಿದ ನಂತರ ಲೆಬನಾನ್ ತನ್ನ ಶತ್ರು ದೇಶ ಇಸ್ರೇಲ್ ಮೇಲೆ ರಾಕೆಟ್ ಮತ್ತು ಡ್ರೋಣ್ಗಳ ಮೂಲಕ ದಾಳಿ ಮಾಡಿತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸೋಮವಾರ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಹಿಜ್ಬೊಲ್ಲಾ ನಮ್ಮ ಮೇಲೆ ವಿನಾಕಾರಣ ದಾಳಿ ಮಾಡಿದ ಹಿನ್ನಲೆ, ನಾವು ಅವರ ಭಯೋತ್ಪಾದಕ ನೆಲೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಖಮೇನಿ ಸಾವಿನ ಪ್ರತೀಕಾರಕ್ಕಾಗಿ ಈ ದಾಳಿ
ಅಯತೊಲ್ಲಾ ಖಮೇಲಿ ಅವರ ಸಾವಿಗೆ ಕಾರಣರಾದವರನ್ನು ನಾವು ಉಳಿಸುವುದಿಲ್ಲ, ಅದಕ್ಕಾಗಿ ನಾವು ಇಸ್ರೇಲ್ ಮೇಲೆ ದಾಳಿ ಮಾಡಿದ್ದೆವೆ ಎಂದು ಹಿಜ್ಬೊಲ್ಲಾ ಸಂಘಟನೆ ಒಪ್ಪಿಕೊಂಡಿದೆ. ಇಸ್ರೇಲ್ನಿಂದ ಲೆಬನಾನ್ಗೆ ಆತಂಕವಿರುವ ಕಾರಣ ನಾವು ಅವರ ಮೇಲೆ ರಾಕೆಟ್ ಹಾಗೂ ಡ್ರೋನ್ಗಳ ಮೂಲಕ ದಾಳಿ ಮಾಡಿರುವುದಾಗಿ ಹಿಜ್ಬೊಲ್ಲಾ ಸ್ಪಷ್ಟ ಪಡಿಸಿದೆ.
ಮುರಿದು ಬಿದ್ದ ಕದನ ವಿರಾಮ
2024 ರ ಸಮಯದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದಮವಿರಾಮ ಘೋಷಣೆಯಾಗಿತ್ತು. ಆದರೆ ಈಗ ಇರಾನ್ ಮೇಲೆ ಇಸ್ರೇಲ್ ದಾಳಿಯ ನಂತರ ಲೆಬನಾನ್, ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಈ ಕದಮವಿರಾಮ ರದ್ದಾಗಿದೆ. ಈಗ ಲೆಬನಾನಿನ ಭಯೋತ್ಪಾದನಾ ಸಂಘಟನೆ ಹಿಜ್ಬೊಲ್ಲಾ ಮೇಲೆ ದಾಳಿ ಮಾಡಿದ ಇಸ್ರೇಲ್ ನಮ್ಮ ದಾಳಿ ನಾಗರಿಕರ ಮೇಲಲ್ಲ, ಕೇವಲ ಭಯೋತ್ಪಾದಕರ ನಿರ್ಮೂಲನೆ ನಮ್ಮ ಗುರಿ ಎಂದು ಹೇಳಿಕೆ ನೀಡಿದೆ,(ಏಜನ್ಸೀಸ್).