ಇರಾನ್: ಇರಾನ್‌ನಲ್ಲಿ( Iran) ಖಮೇನಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈವರೆಗೂ 2 ಸಾವಿರಕ್ಕೂಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ.
ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಈವರೆಗೆ ಕನಿಷ್ಠ 2,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾನ್‌ನ ಆಡಳಿತಾರೂಢ ಮಂಡಳಿಯ ಸದಸ್ಯರೊಬ್ಬರು, "ನಡೆದ ಘರ್ಷಣೆಗಳಲ್ಲಿ ಮೃತಪಟ್ಟವರ ಸಂಖ್ಯೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ. ಅಧಿಕೃತ ದಾಖಲೆಗಳ ಪ್ರಕಾರ 2,000 ಮಂದಿ ಬಲಿಯಾಗಿದ್ದಾರೆ, ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಇರಾನ್ ಸರ್ಕಾರದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಒತ್ತಡವನ್ನು ಉಂಟುಮಾಡಿದೆ.
ಈ ಭೀಕರ ರಕ್ತಪಾತವನ್ನು ವಿಶ್ವಸಂಸ್ಥೆ (UN) ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. "ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮಾರಕ ಆಯುಧಗಳನ್ನು ಬಳಸುವುದು ಮಾನವ ಹಕ್ಕುಗಳ ಘೋರ ಉಲ್ಲಂಘನೆ" ಎಂದು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳು ಕಿಡಿಕಾರಿವೆ. ಅಲ್ಲದೆ, ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುವ ಎಚ್ಚರಿಕೆಯನ್ನೂ ನೀಡಿವೆ.
ಇರಾನ್‌ನಲ್ಲಿ ಆರ್ಥಿಕ ಕುಸಿತ, ಕಠಿಣ ಸಾಮಾಜಿಕ ನಿಯಮಗಳು ಮತ್ತು ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆರಂಭದಲ್ಲಿ ಸಣ್ಣದಾಗಿ ಆರಂಭವಾದ ಈ ಚಳುವಳಿ, ಈಗ ದೇಶದ ಪ್ರಮುಖ ನಗರಗಳಿಗೆ ಹಬ್ಬಿದ್ದು, ಇತ್ತೀಚಿನ ದಶಕಗಳಲ್ಲೇ ಅತ್ಯಂತ ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರವು ಮಿಲಿಟರಿ ಮತ್ತು ಅರೆಸೇನಾ ಪಡೆಗಳನ್ನು ಬಳಸುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಇರಾನ್‌ನ ಹಲವು ನಗರಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಮಾಹಿತಿ ವಿನಿಮಯಕ್ಕೆ ತಡೆಯೊಡ್ಡಲಾಗಿದೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿದ್ದು, ಔಷಧಿಗಳ ಕೊರತೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರವು 'ಕರ್ಫ್ಯೂ' ಜಾರಿಗೊಳಿಸಿದ್ದರೂ, ಜನರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ, (ಏಜೆನ್ಸೀಸ್).