ಅಫ್ಘಾನ್​ನ ಶಾಲೆಯಲ್ಲಿ ಭೀಕರ ಸ್ಫೋಟ! ಕನಿಷ್ಠ 7 ಮಕ್ಕಳು ದುರ್ಮರಣ, 100ಕ್ಕೂ ಹೆಚ್ಚು ಮಂದಿಗೆ ಗಾಯ | Afghanistan 
ವಿದೇಶ

ಅಫ್ಘಾನ್​ನ ಶಾಲೆಯಲ್ಲಿ ಭೀಕರ ಸ್ಫೋಟ! ಕನಿಷ್ಠ 7 ಮಕ್ಕಳು ದುರ್ಮರಣ, 100ಕ್ಕೂ ಹೆಚ್ಚು ಮಂದಿಗೆ ಗಾಯ | Afghanistan

ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ಭಾಗದ ಕುನಾರ್ ಭಾಗದಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ.

ಕುನಾರ್​ ಭಾಗದ ರಾಜಧಾನಿ ಅಸಾದಾಬಾದ್‌ನ ಹೊರವಲಯದಲ್ಲಿರುವ ಶಾಲೆಯೊಂದರಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಣಿಗಾರಿಕೆ ಕಂಪನಿಗಳಿಗೆ ಸೇರಿದ ಸ್ಫೋಟಕಗಳನ್ನು ಇಟ್ಟುಕೊಂಡಿದ್ದ ಪಕ್ಕದ ಡಿಪೋದ ನಿರ್ಲಕ್ಷ್ಯವೇ ಭೀಕರ ಸ್ಫೋಟಕ್ಕೆ ಕಾರಣವಿರಬಹುದು ಎಂದು ಸ್ಥಳೀಯ ಸಂಸ್ಕೃತಿ ಮತ್ತು ಮಾಹಿತಿ ನಿರ್ದೇಶಕ ಸಾಮಿ ಉಲ್ ಹಕ್ ಬಯಾನ್ ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದೂ ಹೇಳಿದ್ದಾರೆ.

ಇನ್ನು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಶಾಲಾ ಸಂಕೀರ್ಣವೊಂದರಲ್ಲಿ ನಡೆದ ಹ್ಯಾಂಡ್ ಗ್ರೆನೇಡ್ ದಾಳಿಯಲ್ಲಿ 9ರಿಂದ 14 ವರ್ಷದೊಳಗಿನ 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದರು. ಈಗ ಇಂತಹದ್ದೇ ಘಟನೆ ಮರುಕಳಿಸಿದ್ದು, ಗಣಿಗಾರಿಕೆಗೆ ಸಂಬಂಧಿಸಿದ ಸ್ಫೋಟಕಗಳನ್ನು ಸ್ಟೋರ್​ ಮಾಡಿಕೊಂಡಿದ್ದ ಡಿಪೋ ಎಡವಟ್ಟಿಗೆ ಅಮಾಯಕ ಮಕ್ಕಳು ಬಲಿಯಾಗಿರುವುದು ನಿಜಕ್ಕೂ ದುರಂತ,(ಏಜೆನ್ಸೀಸ್).