ಮಧ್ಯಪ್ರಾಚ್ಯದ ಮಹಾಯುದ್ಧಕ್ಕೆ ಬಿಗ್ ಟ್ವಿಸ್ಟ್? 33 ವರ್ಷಗಳ ನಂತರ ಮುಖಾಮುಖಿಯಾಗಲಿವೆ ಇಸ್ರೇಲ್-ಲೆಬನಾನ್! ಶಾಂತಿ ಸಿಗುತ್ತಾ ಅಥವಾ ಸಂಘರ್ಷ ಹೆಚ್ಚುತ್ತಾ?
ಬೈರೂತ್: ಮಧ್ಯಪ್ರಾಚ್ಯದ ರಣರಂಗದಲ್ಲಿ ಕ್ಷಿಪಣಿಗಳು ಹಾರುತ್ತಿರುವಾಗಲೇ, ಜಗತ್ತು ಕುತೂಹಲದಿಂದ ಕಾಯುತ್ತಿರುವ ಒಂದು ರಾಜತಾಂತ್ರಿಕ ಬೆಳವಣಿಗೆ ಇಂದು ನಡೆಯಲಿದೆ. ಇಸ್ರೇಲ್ ಮತ್ತು ಲೆಬನಾನ್(Israel-Lebanon Talks) ದೇಶಗಳು ಸುಮಾರು ಮೂರು ದಶಕಗಳ ನಂತರ ಮೊದಲ ಬಾರಿಗೆ ಅತಿ ಉನ್ನತ ಮಟ್ಟದ ನೇರ ಮಾತುಕತೆಗೆ ಸಜ್ಜಾಗಿವೆ. ಅಮೆರಿಕದ ವಿದೇಶಾಂಗ ಇಲಾಖೆಯ ಆತಿಥ್ಯದಲ್ಲಿ ಇಂದು ರಾತ್ರಿ 8:30ಕ್ಕೆ ವಾಷಿಂಗ್ಟನ್‌ನಲ್ಲಿ ಈ ಐತಿಹಾಸಿಕ ಸಭೆ ನಡೆಯಲಿದೆ.
33 ವರ್ಷಗಳ ನಂತರ ನೇರ ಸಂವಾದ: ಹಳೆಯ ಇತಿಹಾಸದ ಪುನರಾವರ್ತನೆಯೇ?
ಇಸ್ರೇಲ್ ಮತ್ತು ಲೆಬನಾನ್ ನಡುವೆ ಇಷ್ಟೊಂದು ನೇರವಾದ ಎಂಗೇಜ್‌ಮೆಂಟ್ ನಡೆಯುತ್ತಿರುವುದು 1993ರ ನಂತರ ಇದೇ ಮೊದಲಾಗಿದ್ದು. 1993ರಲ್ಲಿ ಇಸ್ರೇಲ್ ಹೆಜ್ಬುಲ್ಲಾ ವಿರುದ್ಧ ಆಪರೇಷನ್ ಅಕೌಂಟಬಿಲಿಟಿ ಆರಂಭಿಸಿದಾಗ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ನೇತೃತ್ವದಲ್ಲಿ ಇಸ್ರೇಲ್ ರಾಯಭಾರಿ ಯೆಚಿಯೆಲ್ ಲೈಟರ್ ಮತ್ತು ಲೆಬನಾನ್ ರಾಯಭಾರಿ ನಾದಾ ಹಮಾದೆ ಮುಖಾಮುಖಿಯಾಗಲಿದ್ದಾರೆ.
ಚರ್ಚೆಯ ಪ್ರಮುಖ ಅಂಶಗಳೇನು..?
ಈ ಮಾತುಕತೆಯ ಕಾರ್ಯಸೂಚಿ ಅತ್ಯಂತ ಸಂಕೀರ್ಣವಾಗಿದೆ. ಪ್ರಮುಖವಾಗಿ ಮೂರು ವಿಷಯಗಳ ಮೇಲೆ ಗಮನ ಹರಿಸಲಾಗುವುದು.
ತಕ್ಷಣದ ಕದನ ವಿರಾಮ: ಗಡಿಯಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸುವುದು.
ಹೆಜ್ಬುಲ್ಲಾ ನಿಶ್ಶಸ್ತ್ರೀಕರಣ: ದೀರ್ಘಾವಧಿಯ ಶಾಂತಿಗಾಗಿ ಹಜಬುಲ್ಲಾ ಸಂಘಟನೆಯ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡುವುದು.
ಸಾರ್ವಭೌಮತ್ವದ ರಕ್ಷಣೆ: ಲೆಬನಾನ್ ತನ್ನ ಸಂಪೂರ್ಣ ಭೂಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಮತ್ತು ಇಸ್ರೇಲ್‌ನ ಉತ್ತರ ಗಡಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು.
ಅಮೆರಿಕದ ಅಧಿಕಾರಿಗಳ ಪ್ರಕಾರ, ಇಸ್ರೇಲ್ ಇರುವುದು ಹಜ್ಬುಲ್ಲಾ ಜೊತೆಗಿನ ಯುದ್ಧದಲ್ಲೇ ಹೊರತು ಲೆಬನಾನ್ ದೇಶದ ಜೊತೆಗಲ್ಲ. ಆದ್ದರಿಂದ ನೆರೆಯ ರಾಷ್ಟ್ರಗಳು ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ.
ಯುದ್ಧದ ಭೀಕರತೆ ಮತ್ತು ಸಾವು-ನೋವು
ಒಂದೆಡೆ ಶಾಂತಿ ಮಾತುಕತೆಯ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್‌ನ ಭೂಸೇನಾ ಕಾರ್ಯಾಚರಣೆ ತೀವ್ರಗೊಂಡಿದೆ. ಲೆಬನಾನ್ ಆರೋಗ್ಯ ಇಲಾಖೆಯ ಪ್ರಕಾರ, ಇಸ್ರೇಲ್ ದಾಳಿಗೆ ನೂರಾರು ನಾಗರಿಕರು ಬಲಿಯಾಗಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಅತ್ತ ಹಜ್ಬುಲ್ಲಾ ಕೂಡ ಉತ್ತರ ಇಸ್ರೇಲ್ ಮೇಲೆ ನಿರಂತರವಾಗಿ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದು, ಇಸ್ರೇಲ್‌ನ ಗಡಿ ಗ್ರಾಮಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಹಜ್ಬುಲ್ಲಾದ ಭದ್ರಕೋಟೆಯಾದ ಬಿಂಟ್ ಜ್ಬೈಲ್ನಲ್ಲಿ ಭೀಕರ ಯುದ್ಧ ಮುಂದುವರಿದಿದೆ.
ಸವಾಲುಗಳ ಬೆಟ್ಟ: ಹೆಜ್ಬುಲ್ಲಾದ ಹಠಮಾರಿ ಧೋರಣೆ
ಈ ಮಾತುಕತೆಯ ಹಾದಿ ಸುಗಮವಾಗಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೆಜ್ಬುಲ್ಲಾವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುವವರೆಗೆ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಹೆಜ್ಬುಲ್ಲಾ ನಾಯಕತ್ವವು ಶಸ್ತ್ರಾಸ್ತ್ರ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದೆ. ನಾವು ನಮ್ಮ ಭೂಮಿಯನ್ನು ಆಕ್ರಮಣಕಾರರಿಂದ ರಕ್ಷಿಸುತ್ತಿದ್ದೇವೆ ಎಂಬುದು ಹೆಜ್ಬುಲ್ಲಾದ ವಾದ.
1993ರ ಆಪರೇಷನ್ ಅಕೌಂಟಬಿಲಿಟಿ ನೆನಪು
1993ರಲ್ಲಿ ಇಸ್ರೇಲ್ ನಡೆಸಿದ ಒಂದು ವಾರದ ಭೀಕರ ದಾಳಿಯಿಂದಾಗಿ ಸುಮಾರು 3 ಲಕ್ಷ ಜನರು ದಕ್ಷಿಣ ಲೆಬನಾನ್‌ನಿಂದ ಪಲಾಯನ ಮಾಡಿದ್ದರು. ಆಗ ಅಮೆರಿಕ ಮಧ್ಯಸ್ಥಿಕೆ ವಹಿಸಿ ಅನೌಪಚಾರಿಕ ಕದನ ವಿರಾಮ ತಂದಿತ್ತು. ಈಗಿನ ಪರಿಸ್ಥಿತಿಯೂ ಅಷ್ಟೇ ಗಂಭೀರವಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಒತ್ತಡದ ನಂತರವೇ ನೆತನ್ಯಾಹು ಈ ನೇರ ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಜಗತ್ತಿನ ಕಣ್ಣು ವಾಷಿಂಗ್ಟನ್ ಮೇಲೆ
ಈ ಸಭೆಯು ಕೇವಲ ಒಂದು ಆರಂಭವಷ್ಟೇ. ಒಂದು ವೇಳೆ ಇಂದು ರಾತ್ರಿಯ ಮಾತುಕತೆ ಯಶಸ್ವಿಯಾದರೆ, ಅದು ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಒಂದು ಹೊಸ ಅಧ್ಯಾಯ ಬರೆಯಲಿದೆ. ಇಲ್ಲವಾದರೆ, ಈ ಯುದ್ಧ ಮತ್ತಷ್ಟು ವಿನಾಶಕ್ಕೆ ಕಾರಣವಾಗುವ ಆತಂಕವಿದೆ,(ಏಜೆನ್ಸೀಸ್).