ಅರಬ್ಬೀ ಸಮುದ್ರದಲ್ಲಿ ಇಳಿದ ಬ್ರಿಟನ್ನಿನ ಪರಮಾಣು ಚಾಲಿತ ಜಲಾಂತರ್ಗಾಮಿ
- ಮಧ್ಯಪ್ರಾಚ್ಯದಲ್ಲಿ ಮುಗಿಯದ ಸಂಘರ್ಷ
- ಅರಬ್ಬೀ ಸಮುದ್ರದಲ್ಲಿ ಇಳಿದ ಬ್ರಿಟನ್ನಿನ ಪರಮಾಣು ಚಾಲಿತ ಜಲಾಂತರ್ಗಾಮಿ
- ಚಲಿಸುವ ಡೆತ್ ಮೆಷಿನ್ ಖ್ಯಾತಿಯ HMS ಅನ್ಸನ್ ಹಾರ್ಮುಜ್ನಲ್ಲಿ ನಿಯೋಜನೆ
- ಇರಾನ್‌ಗೆ ಹೆಚ್ಚಾದ ಆತಂಕ
ಅರಬ್ಬೀ ಸಮುದ್ರ: ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡಿರುವ ಕಿಚ್ಚು ಸದ್ಯಕ್ಕೆ ಆರುವ ಲಕ್ಷಣ ಕಾಣುತ್ತಿಲ್ಲ. ಬದಲಿಗೆ, ದಿನದಿಂದ ದಿನಕ್ಕೆ ಯುದ್ಧದ ಭೀತಿ ಜಗತ್ತನ್ನೇ ಆವರಿಸುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಈ ಸಂಘರ್ಷ ಈಗ ಕೇವಲ ಎರಡು ದೇಶಗಳ ನಡುವಿನ ಜಗಳವಾಗಿ ಉಳಿದಿಲ್ಲ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕೆಂಡ ಕಾರುತ್ತಿದ್ದರೆ, ಅತ್ತ ಬ್ರಿಟನ್ (Britain joins Israel-US) ಈಗ ಗುಟ್ಟಾಗಿ ದೊಡ್ಡ ದಾಳವೊಂದನ್ನು ಉರುಳಿಸಿದೆ.
ಅರಬ್ಬೀ ಸಮುದ್ರದಲ್ಲಿ ಬ್ರಿಟನ್ ಶಕ್ತಿ ಪ್ರದರ್ಶನ!
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಈಗ ಇರಾನ್ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಬ್ರಿಟನ್‌ನ ಅತ್ಯಂತ ಶಕ್ತಿಶಾಲಿ ಪರಮಾಣು ಚಾಲಿತ ಜಲಾಂತರ್ಗಾಮಿ (Nuclear Submarine) HMS ಅನ್ಸನ್ (HMS Anson) ಈಗ ಅರಬ್ಬೀ ಸಮುದ್ರಕ್ಕೆ ಎಂಟ್ರಿ ಕೊಟ್ಟಿದೆ. ಇರಾನ್‌ನ ಪ್ರಮುಖ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯ (Strait of Hormuz) ತೀರಕ್ಕೆ ಅತ್ಯಂತ ಹತ್ತಿರದಲ್ಲಿ ಈ ಸಬ್‌ಮರಿನ್ ಬೀಡುಬಿಟ್ಟಿದೆ ಎಂಬ ವರದಿಗಳು ಸಂಚಲನ ಮೂಡಿಸಿವೆ.
ಮಾರ್ಚ್ 6 ರಂದು ಆಸ್ಟ್ರೇಲಿಯಾದ ಪರ್ತ್‌ನಿಂದ ಹೊರಟಿದ್ದ ಈ ಜಲಾಂತರ್ಗಾಮಿ, ಈಗ ರಣತಂತ್ರದ ಜಾಗದಲ್ಲಿ ಮೌನವಾಗಿ ಕುಳಿತಿದೆ. ಇದು ಇರಾನ್ ಮೇಲಿನ ಸಂಭವನೀಯ ದಾಳಿಗೆ ಮುನ್ನುಡಿಯೇ ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಶುರುವಾಗಿದೆ.
ಏನಿದರ ವಿಶೇಷತೆ?
ಬ್ರಿಟನ್ ಕಳುಹಿಸಿರುವ ಈ ಜಲಾಂತರ್ಗಾಮಿ ಕೇವಲ ಒಂದು ವಾಹನವಲ್ಲ, ಇದೊಂದು ಚಲಿಸುವ ಡೆತ್ ಮೆಷಿನ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಶಸ್ತ್ರಾಸ್ತ್ರಗಳ ಪಟ್ಟಿ ನೋಡಿದರೆ ಎಂತಹವರಿಗೂ ನಡುಕ ಉಂಟಾಗುತ್ತದೆ.
ಇದರಲ್ಲಿ ಸುಮಾರು 1,600 ಕಿಲೋಮೀಟರ್ ದೂರದಲ್ಲಿರುವ ಶತ್ರು ನೆಲೆಯನ್ನು ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯ ಈ ಟೊಮಾಹಾಕ್ ಬ್ಲಾಕ್ IV ಕ್ಷಿಪಣಿಗಳಿಗಿದೆ. ಅಂದರೆ, ಸಮುದ್ರದ ಒಳಗಿದ್ದೇ ಇರಾನ್‌ನ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ.
ಒಂದು ವೇಳೆ ಶತ್ರುಗಳ ಹಡಗು ಅಥವಾ ಸಬ್‌ಮರಿನ್‌ಗಳು ಇದರ ಮೇಲೆ ದಾಳಿಗೆ ಬಂದರೆ ಅವುಗಳನ್ನು ಮಟ್ಟಹಾಕಲು ಸ್ಪಿಯರ್‌ಫಿಶ್ ಟಾರ್ಪಿಡೊಗಳನ್ನು ಈ ಜಲಾಂತರ್ಗಾಮಿ ಹೊಂದಿದೆ.
ಇಸ್ರೇಲ್-ಅಮೆರಿಕ ಜೊತೆ ಸೇರಿದ ಬ್ರಿಟನ್!
ಈ ಮೊದಲು ಬ್ರಿಟನ್ ಕೇವಲ ತನ್ನ ಮಿಲಿಟರಿ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಿತ್ತು. ಆದರೆ ಈಗ ನೇರವಾಗಿ ತನ್ನ ಅತ್ಯಂತ ಘಾತಕ ಜಲಾಂತರ್ಗಾಮಿಯನ್ನು ರಣರಂಗಕ್ಕೆ ಇಳಿಸಿರುವುದು ದೊಡ್ಡ ಬದಲಾವಣೆಯಾಗಿದೆ. ಇದರರ್ಥ ಇರಾನ್ ವಿರುದ್ಧದ ಈ ಯುದ್ಧದಲ್ಲಿ ಬ್ರಿಟನ್ ಈಗ ಕೇವಲ ಬೆಂಬಲಿಗನಲ್ಲ, ಬದಲಿಗೆ ಸಕ್ರಿಯವಾಗಿ ಕಣಕ್ಕಿಳಿದಿದೆ.
ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಸೂಚನೆ ನೀಡುತ್ತಿರುವ ಬೆನ್ನಲ್ಲೇ ಬ್ರಿಟನ್‌ನ ಈ ನಡೆ ಇರಾನ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ, ಅರಬ್ಬೀ ಸಮುದ್ರದಿಂದಲೇ ಕ್ಷಿಪಣಿಗಳ ಮಳೆ ಸುರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ,(ಏಜನ್ಸೀಸ್).