ಸಾಂದರ್ಭಿಕ ಚಿತ್ರ 
ವಿದೇಶ

ಪುಟ್ಟ ರಾಷ್ಟ್ರಕ್ಕೆ ದೊಡ್ಡ ಸಂಕಷ್ಟ

ನೇಪಾಳ: 

ಮಹಾ ಪ್ರವಾಹವು ನೇಪಾಳದ ಅಭಿವೃದ್ಧಿಯನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಈ ದೇಶಕ್ಕೆ ಭಾರಿ ಪ್ರಮಾಣದ ಹಣಕಾಸಿನ ನೆರವು, ಕಾಲಮಿತಿಯ ಪುನರ್ನಿರ್ವಣ ಯೋಜನೆಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಅಗತ್ಯವಿದೆ. ನೇಪಾಳ ಸರ್ಕಾರ ಈ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸಿ, ಜನರಿಗೆ ನೆರವಿನ ಹಸ್ತ ಚಾಚಬೇಕಿದೆ. ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ತಡೆದುಕೊಳ್ಳಬಲ್ಲ ಮೂಲಸೌಕರ್ಯಗಳನ್ನು ನಿರ್ವಿುಸುವುದು ಅತ್ಯಂತ ಅಗತ್ಯವಾಗಿದೆ.

ಮಾಡುವ ಹೂಡಿಕೆಯು ಕಾಲಕ್ರಮೇಣ ಆರ್ಥಿಕ ಪ್ರತಿಫಲಗಳನ್ನು ನೀಡುತ್ತದೆ. ಸೇತುವೆ, ರಸ್ತೆ ಅಥವಾ ವಿದ್ಯುತ್ ಯೋಜನೆಯ ಮೇಲೆ 1 ರೂಪಾಯಿ ವೆಚ್ಚ ಮಾಡಿದರೆ, ವ್ಯಾಪಾರ, ಉದ್ಯೋಗ ಮತ್ತು ಉತ್ಪಾದಕತೆಯ ಮೂಲಕ ಅರ್ಥವ್ಯವಸ್ಥೆಗೆ ಹಲವಾರು ರೂಪಾಯಿಗಳು ಹಿಂತಿರುಗುತ್ತವೆ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ನೇಪಾಳವು ಒಂದು ನಿರಾಸೆ ಮೂಡಿಸುವ ಸಮಸ್ಯೆಯನ್ನು ಎದುರಿಸುತ್ತಿದೆ. ಅದು ಮೂಲಸೌಕರ್ಯಗಳನ್ನು ನಿರ್ವಿುಸುತ್ತಲೇ ಇರುತ್ತದೆ, ಆದರೆ ಪ್ರಾಕೃತಿಕ ವಿಕೋಪಗಳು ಅವುಗಳನ್ನು ನಾಶಪಡಿಸುತ್ತಲೇ ಇರುತ್ತವೆ. ಈ ಚಕ್ರವು ಹೀಗೆ ಸಾಗುತ್ತಿದೆ. ಯೋಜನೆ ಸಿದ್ಧವಾಗುತ್ತದೆ, ಹಣ ಮಂಜೂರಾಗುತ್ತದೆ, ಸೇತುವೆ ಅಥವಾ ರಸ್ತೆ ನಿರ್ವಣವಾಗುತ್ತದೆ.

ಆದರೆ, ಆ ಹೂಡಿಕೆಯು ತನ್ನ ಸಂಪೂರ್ಣ ಆರ್ಥಿಕ ಮೌಲ್ಯವನ್ನು (ಪ್ರತಿಫಲವನ್ನು) ನೀಡುವ ಮುಂಚೆಯೇ ಪ್ರವಾಹ, ಭೂಕುಸಿತ ಅಥವಾ ಭೂಕಂಪವು ಅದನ್ನು ಹಾನಿಗೊಳಿಸುತ್ತದೆ. ನಂತರ ಮತ್ತೆ ಪುನರ್ನಿರ್ವಣ ಕಾರ್ಯ ಪ್ರಾರಂಭವಾಗುತ್ತದೆ. ಪರಿಣಾಮವಾಗಿ, ನೇಪಾಳವು ತನ್ನ ಹೂಡಿಕೆಯ ಸಂಪೂರ್ಣ ಪ್ರತಿಫಲವನ್ನು ಪಡೆಯಲಾಗದೆ, ಪದೇಪದೆ ಒಂದೇ ಮೂಲಸೌಕರ್ಯದ ಮೇಲೆ ಹಣ ವೆಚ್ಚ ಮಾಡುತ್ತಿದೆ. ಪದೇಪದೆ ಸಂಭವಿಸುವ ತೀವ್ರ ಸ್ವರೂಪದ ನೈಸರ್ಗಿಕ ವಿಕೋಪಗಳು ನೇಪಾಳದ ಆರ್ಥಿಕತೆಗೆ ಪ್ರಮುಖ ಅಪಾಯವೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಗುರುತಿಸಿದೆ.

 ಐಎಂಎಫ್​ನ ‘ಡಿಸಾಸ್ಟರ್ ಸ್ಟ್ರೆಸ್ ಟೆಸ್ಟ್’ ಪ್ರಕಾರ, ಇಂತಹ ಆಘಾತಗಳು ದೇಶದ ಸಾಲದ ಅನುಪಾತಕ್ಕೆ ಜಿಡಿಪಿಯ ಶೇ.10ರಷ್ಟನ್ನು ಸೇರಿಸಬಹುದು, ಹಾಗೆಯೇ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.1.5ರಷ್ಟು ಮತ್ತು ರಫ್ತನ್ನು ಶೇ.3.5ರಷ್ಟು ತಗ್ಗಿಸಬಹುದು.


2025ರಲ್ಲಿ ಜೆನ್ ಜೀ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಮತ್ತು ಅಶಾಂತಿಯು ನೇಪಾಳದ ಅರ್ಥವ್ಯವಸ್ಥೆಗೆ 58.6 ಕೋಟಿ ಡಾಲರ್ ನಷ್ಟವನ್ನು ಉಂಟುಮಾಡಿತ್ತು. ವಿಶ್ವಬ್ಯಾಂಕ್​ನ ಏಪ್ರಿಲ್ 2026ರ ‘ನೇಪಾಳ ಡೆವಲಪ್​ವೆುಂಟ್ ಅಪ್​ಡೇಟ್’ ವರದಿಯ ಪ್ರಕಾರ, ಆರ್ಥಿಕ ವರ್ಷ 2026ರ ಮೊದಲ ತ್ರೖೆಮಾಸಿಕದಲ್ಲಿ ಆರ್ಥಿಕತೆಯು ಶೇ.3.4ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಪ್ರವಾಹದಿಂದ ಉಂಟಾಗಿರುವ ನಷ್ಟದಿಂದ ಮುಂಬರುವ ದಿನಗಳಲ್ಲಿ ಜಿಡಿಪಿ ಶೇ.2.3 ರಷ್ಟಿರಲಿದೆ ಎಂದು ಅದು ಅಂದಾಜಿಸಿದೆ.

ಈಗಿನ ಸ್ಥಿತಿ

ಹಿಮಾಲಯದ ತಪ್ಪಲಿನಲ್ಲಿ ರುವ ಪುಟ್ಟರಾಷ್ಟ್ರ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಗಳು ದೇಶದ ಆರ್ಥಿಕ ಬೆನ್ನೆಲುಬನ್ನೇ ಮುರಿದುಹಾಕಿವೆ. ಭೌಗೋಳಿಕ ಸೂಕ್ಷ ಮತ್ತು ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಈ ಪ್ರವಾಹಗಳು ನೇಪಾಳದ ಪ್ರಮುಖ ಕ್ಷೇತ್ರಗಳ ಮೇಲೆ ತೀವ್ರವಾದ ಹೊಡೆತ ನೀಡಿವೆ. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು, ಸಂಪರ್ಕ ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿವೆ. ಚೀನಾ ಮತ್ತು ಭಾರತದೊಂದಿಗಿನ ಪ್ರಮುಖ ವ್ಯಾಪಾರ ಮಾರ್ಗಗಳು ಕಡಿತಗೊಂಡು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನದಿ ತೀರದ ಸಾವಿರಾರು ಮನೆಗಳು, ಶಾಲೆಗಳು ಹಾಗೂ ಆಸ್ಪತ್ರೆಗಳು ಮಣ್ಣು ಮತ್ತು ನೀರಿನಲ್ಲಿ ಮುಳುಗಡೆಯಾಗಿವೆ. 

ಪ್ರವಾಹದ ನೀರಿನೊಂದಿಗೆ ಬರುವ ಭಾರೀ ಪ್ರಮಾಣದ ಹೂಳು, ಬಂಡೆಗಳು ಮತ್ತು ಮರಗಳು- ಡ್ಯಾಮ್ಳು, ಟರ್ಬೆನ್​ಗಳು ಹಾಗೂ ಪವರ್​ಹೌಸ್​ಗಳನ್ನು ಹಾನಿಗೊಳಿಸಿವೆ. ಅಲ್ಲದೆ, ನೇಪಾಳದ ತೇರಾಯಿ ಬಯಲು ಪ್ರದೇಶ ಹಾಗೂ ನದಿ ಕಣಿವೆಗಳ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗಿದೆ. ಭತ್ತ, ಮೆಕ್ಕೆಜೋಳ ಮತ್ತು ತರಕಾರಿ ಬೆಳೆಗಳು ಕೊಚ್ಚಿಹೋಗಿ, ಜಮೀನುಗಳಲ್ಲಿ ಮಣ್ಣು ಶೇಖರಣೆಯಾಗಿ ಮುಂದಿನ ಕೃಷಿಗೆ ಯೋಗ್ಯವಲ್ಲದಂತಾಗಿದೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುವುದರ ಜತೆಗೆ ಆಹಾರ ಧಾನ್ಯಗಳ ಕೊರತೆ ಮತ್ತು ಬೆಲೆ ಏರಿಕೆ ಭೀತಿ ಕಾಡುತ್ತಿದೆ. ನೀರಿನ ಪೈಪ್​ಲೈನ್​ಗಳು ಹಾಳಾಗಿದ್ದು, ಸಂಪರ್ಕ ಗೋಪುರಗಳು ಬಿದ್ದಿರುವುದರಿಂದ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ.

ಯಾವೆಲ್ಲ ಕ್ಷೇತ್ರಗಳಿಗೆ ಹಾನಿ?

ಮೂಲಸೌಕರ್ಯ: ಹೆದ್ದಾರಿಗಳು, ಪ್ರಮುಖ ರಸ್ತೆಗಳು ಮತ್ತು ನದಿಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಕೊಚ್ಚಿಹೋಗಿವೆ. ಇದರಿಂದಾಗಿ ರಾಜಧಾನಿ ಕಠ್ಮಂಡು ಸೇರಿದಂತೆ ದೇಶದ ಪ್ರಮುಖ ನಗರಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಾರಿಗೆ ಬಂದ್ ಆಗಿರುವುದರಿಂದ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಉತ್ಪಾದನೆ ಸ್ಥಗಿತಗೊಂಡು ವ್ಯಾಪಾರಸ್ಥರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.


ಕೃಷಿ: ನೇಪಾಳಕ್ಕೆ ಕೃಷಿಯು ಕೇವಲ ಒಂದು ಉದ್ಯಮವಲ್ಲ, ಅದು ಜೀವನಾಧಾರ. 2021ರ ಜನಗಣತಿಯ ಪ್ರಕಾರ, ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರುವ ಶೇ.57.3ರಷ್ಟು ಜನರು ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಭತ್ತ, ಜೋಳ ಮತ್ತು ತರಕಾರಿ ಬೆಳೆದಿದ್ದ ಅಪಾರ ಪ್ರಮಾಣದ ಫಲವತ್ತಾದ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ ಅಥವಾ ಹೂಳು ಮತ್ತು ಕಲ್ಲುಗಳಿಂದ ಆವೃತವಾಗಿದೆ. ಸಾವಿರಾರು ಜಾನುವಾರುಗಳು ಪ್ರವಾಹಕ್ಕೆ ಸಿಲುಕಿ ಅಸುನೀಗಿವೆ. ಇದು ಗ್ರಾಮೀಣ ಕುಟುಂಬಗಳ ದೈನಂದಿನ ಆದಾಯದ ಮೇಲೆಯೂ ನೇರ ಪರಿಣಾಮ ಬೀರಿದೆ.
ಕೈಗಾರಿಕೆ: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಗೋದಾಮುಗಳಿಗೆ ನೀರು ನುಗ್ಗಿ ಕಚ್ಚಾ ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳು ನಾಶವಾಗಿವೆ.
ಪ್ರವಾಸೋದ್ಯಮ: ನೇಪಾಳದ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋದ್ಯಮಕ್ಕೆ ಪ್ರವಾಹ ದೊಡ್ಡ ಹೊಡೆತ ನೀಡಿದೆ. ಕರೊನಾ ನಂತರದ ದಿನಗಳಲ್ಲಿ ನೇಪಾಳ ತನ್ನ ಪ್ರವಾಸೋದ್ಯಮವನ್ನು ಮತ್ತೆ ಕಟ್ಟಿಕೊಳ್ಳುತ್ತಿತ್ತು. ನೇಪಾಳ ಪ್ರವಾಸೋದ್ಯಮ ಮಂಡಳಿಯು 2024ರ ಮೊದಲ 11 ತಿಂಗಳಲ್ಲಿ 1.15 ಮಿಲಿಯನ್ ಪ್ರವಾಸಿಗರ ಆಗಮನವನ್ನು ದಾಖಲಿಸಿತ್ತು. 
ಆದರೆ ಪದೇಪದೆ ಸಂಭವಿಸುವ ಪ್ರಾಕೃತಿಕ ವಿಕೋಪಗಳು ಆರ್ಥಿಕ ಚೇತರಿಕೆಯನ್ನು ಕಷ್ಟಕರವಾಗಿಸುತ್ತವೆ. ಪ್ರವಾಹದಿಂದ ಚಾರಣ ಮಾರ್ಗಗಳು, ಹೋಟೆಲ್​ಗಳು ಮತ್ತು ಪಾರಂಪರಿಕ ತಾಣಗಳಿಗೆ ಹಾನಿಯಾಗಿದೆ. ಪ್ರವಾಸಿಗರ ಸುರಕ್ಷತೆಯ ಕಾಳಜಿಯಿಂದಾಗಿ ಬುಕಿಂಗ್​ಗಳು ರದ್ದಾಗಿದ್ದು, ಮಾರ್ಗದರ್ಶಿಗಳು, ಹೋಟೆಲ್ ಸಿಬ್ಬಂದಿ ಹಾಗೂ ಪ್ರವಾಸೋದ್ಯಮ ಆಧಾರಿತ ಸಣ್ಣ ವ್ಯಾಪಾರಸ್ಥರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ಕುಸಿದು ಬಿದ್ದ ಇಂಧನ ಕ್ಷೇತ್ರ

ನೇಪಾಳದಲ್ಲಿ ಸಂಭವಿಸಿದ ಮಹಾ ಪ್ರವಾಹ ಮತ್ತು ಭೂಕುಸಿತವು ದೇಶದ ಜಲವಿದ್ಯುತ್ ಕ್ಷೇತ್ರಕ್ಕೆ ತೀವ್ರ ಸ್ವರೂಪದ ಧಕ್ಕೆಯನ್ನುಂಟುಮಾಡಿದೆ. ನೇಪಾಳ ತನ್ನ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.90ಕ್ಕೂ ಹೆಚ್ಚು ಭಾಗಕ್ಕೆ ನದಿಗಳ ಮೇಲಿನ ಜಲವಿದ್ಯುತ್ ಯೋಜನೆಗಳನ್ನೇ ನೆಚ್ಚಿಕೊಂಡಿರುವುದರಿಂದ, ಈ ವಿಕೋಪವು ಇಡೀ ದೇಶದ ಇಂಧನ ಕ್ಷೇತ್ರವನ್ನು ಕುಸಿದುಬೀಳುವಂತೆ ಮಾಡಿದೆ. 

ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಹರಿವು ಅಪಾರವಾಗಿ ಹೆಚ್ಚಿ, ದೊಡ್ಡ ದೊಡ್ಡ ಕಲ್ಲುಗಳು, ಮಣ್ಣು ಮತ್ತು ಮರಗಳು ಕೊಚ್ಚಿಕೊಂಡು ಬಂದಿವೆ. ಇವು ಜಲವಿದ್ಯುತ್ ಸ್ಥಾವರಗಳ ಟರ್ಬೆನ್, ನೀರು ಸಂಗ್ರಹಿಸುವ ಡ್ಯಾಮ್ಳು ಮತ್ತು ಪೆನ್​ಸ್ಟಾಕ್ ಪೈಪ್​ಗಳಲ್ಲಿ ಸಿಲುಕಿಕೊಂಡು ಯಂತ್ರೋಪಕರಣಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ.


ನದಿಗಳ ಹರಿವಿನ ಮಟ್ಟ ಮಿತಿಮೀರಿದ್ದರಿಂದ ನದಿ ತೀರದಲ್ಲಿದ್ದ ರನ್-ಆಫ್-ದಿ-ರಿವರ್ ಮಾದರಿಯ ಹಲವು ವಿದ್ಯುತ್ ಉತ್ಪಾದನಾ ಘಟಕಗಳ ಒಳಗೆ ಪ್ರವಾಹದ ನೀರು ನುಗ್ಗಿ, ವಿದ್ಯುತ್ ಉತ್ಪಾದಿಸುವ ಸಿಸ್ಟಮ್ಳು ಜಲಾವೃತಗೊಂಡಿವೆ. ಗಿರಿಧಾಮ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ವಿುಸಲಾಗಿದ್ದ ಜಲವಿದ್ಯುತ್ ಯೋಜನೆಗಳ ಕಟ್ಟಡಗಳು ಮತ್ತು ಪ್ರಮುಖ ಯಂತ್ರಾಗಾರಗಳು ಭೂಕುಸಿತಕ್ಕೆ ಸಿಲುಕಿ ನೆಲಸಮವಾಗಿವೆ. 
ಹಲವು ಖಾಸಗಿ ಹಾಗೂ ಸರ್ಕಾರಿ ಜಲವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದರಿಂದ, ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.20ರಿಂದ 30ರಷ್ಟು ತಕ್ಷಣದ ಕುಸಿತ ಕಂಡುಬಂದಿದೆ. ನೇಪಾಳದ ಜಲವಿದ್ಯುತ್ ಯೋಜನೆಗಳಲ್ಲಿ ಬ್ಯಾಂಕುಗಳು ಮತ್ತು ಖಾಸಗಿ ಹೂಡಿಕೆದಾರರು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸ್ಥಾವರಗಳ ಪುನರ್ನಿರ್ವಣಕ್ಕೆ ಮತ್ತೆ ಕೋಟ್ಯಂತರ ರೂಪಾಯಿ ತಗುಲಲಿದ್ದು, ಯೋಜನಾ ವೆಚ್ಚಗಳು ಗಗನಕ್ಕೇರಿವೆ.