ಡಾಲರ್ ಪ್ರಾಬಲ್ಯದ ಮೇಲೆ ದೊಡ್ಡಸ್ತಿಕೆ ತೋರಿಸುತ್ತಿದ್ದ, ಇತರ ರಾಷ್ಟ್ರಗಳನ್ನು ಬೆದರಿಸುತ್ತಿದ್ದ ಅಮೆರಿಕ ಇರಾನ್ ವಿರುದ್ಧದ ಯುದ್ಧದಲ್ಲಿ ಹೈರಾಣಾಗಿದೆ. ಜಾಗತಿಕ ಆರ್ಥಿಕತೆಯನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, ತಾನೂ ಘೋರ ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ, ರಾಜಕೀಯ ಮತ್ತು ರಕ್ಷಣಾ ರಂಗಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕವು ಯುದ್ಧಗಳಿಗೆ ಹಣ ಸುರಿಯುತ್ತಿರುವುದರ ವಿರುದ್ಧ ದೇಶದ ಜನರಲ್ಲಿ ತೀವ್ರ ಅಸಮಾಧಾನವಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಇರಾನ್ ವಿರುದ್ಧದ ಯುದ್ಧಕ್ಕೆ ಸಾರ್ವಜನಿಕ ಬೆಂಬಲ ಕೇವಲ 40% ರಷ್ಟಿದ್ದು, ಇದು ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ಕಾರಣವಾಗಿದೆ. 2026ರ ಮಿಡ್-ಟರ್ಮ್ ಚುನಾವಣೆಗಳ ಮೇಲೆ ಈ ಯುದ್ಧ ಪರಿಣಾಮ ಬೀರಲಿದ್ದು, ಆರ್ಥಿಕ ಸ್ಥಿತಿಗತಿಯ ಬಗ್ಗೆ ಮತದಾರರು ಅಸಮಾಧಾನಗೊಂಡಿದ್ದಾರೆ. ಯುರೋಪಿಯನ್ ಮಿತ್ರರಾಷ್ಟ್ರಗಳು ಇಂಧನಕ್ಕಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಅಮೆರಿಕದ ಯುದ್ಧ ನೀತಿಗಳಿಂದಾಗಿ ತಮ್ಮ ದೇಶಗಳ ಆರ್ಥಿಕತೆ ಹದಗೆಡುತ್ತಿದೆ ಎಂದು ಅನೇಕ ಮಿತ್ರರಾಷ್ಟ್ರಗಳು ಆರೋಪಿಸಿವೆ. ಅಮೆರಿಕವು ಇಂದು ಬಾಹ್ಯ ಶತ್ರುಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ತನ್ನ ಆಂತರಿಕ ಆರ್ಥಿಕ ಸ್ಥಿರತೆಯನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟ ನಡೆಸುತ್ತಿದೆ.
ಸಂಸತ್ತಿನ ಅಂಗಳದಲ್ಲಿ ಚೆಂಡು
ಇರಾನ್ ವಿರುದ್ಧದ ಯುದ್ಧವನ್ನು ಮುಂದುವರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಸಂಸತ್ತಿನ ಅನುಮತಿ ಪಡೆಯಬೇಕಿದೆ. ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷರು ಯಾವುದೇ ದೇಶದ ಮೇಲೆ ಯುದ್ಧ ಸಾರಿದರೆ, 60 ದಿನಗಳ ಒಳಗಾಗಿ ಸಂಸತ್ತಿನ (ಕಾಂಗ್ರೆಸ್) ಅನುಮೋದನೆ ಪಡೆಯುವುದು ಕಡ್ಡಾಯ. ಇಲ್ಲಿಯೂ ಟ್ರಂಪ್ ಚತುರ ನಡೆ ಪ್ರದರ್ಶಿಸಿದ್ದರು. ಫೆಬ್ರವರಿ 28ರಂದು ಯುದ್ಧ ಘೋಷಿಸಿದ್ದ ಅವರು, ಮಾರ್ಚ್ 2ರಂದು ಈ ಬಗ್ಗೆ ಸಂಸತ್ತಿಗೆ ಅಧಿಕೃತ ಮಾಹಿತಿ ನೀಡಿದ್ದರು. ಆ ಲೆಕ್ಕಾಚಾರದಂತೆ, ಮೇ 1ರ ಒಳಗಾಗಿ ಅವರು ಸಂಸತ್ತಿನಲ್ಲಿ ಯುದ್ಧಕ್ಕೆ ಒಪ್ಪಿಗೆ ಪಡೆಯಲೇಬೇಕಿದೆ. ವರದಿಗಳ ಪ್ರಕಾರ, ಟ್ರಂಪ್ ಸಂಸತ್ತನ್ನು ಎದುರಿಸಲು ಹಿಂಜರಿಯುತ್ತಿದ್ದಾರೆ. ಸೆನೆಟ್ ಒಟ್ಟು 100 ಸದಸ್ಯರನ್ನು ಹೊಂದಿದೆ. ಇದರಲ್ಲಿ ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕನ್ ಪಾರ್ಟಿ 53 ಸದಸ್ಯರನ್ನು ಹೊಂದಿದ್ದರೆ, ಕಮಲಾ ಹ್ಯಾರಿಸ್ ನಾಯಕತ್ವದ ಡೆಮೋಕ್ರಾಟಿಕ್ ಪಾರ್ಟಿ 47 ಸದಸ್ಯರನ್ನು ಹೊಂದಿದೆ. ಆದರೆ, ರಿಪಬ್ಲಿಕನ್ ಪಾರ್ಟಿಯ 10 ಸಂಸದರು ಈಗಾಗಲೇ ಇರಾನ್ ಯುದ್ಧದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ಇತ್ತ ಪ್ರತಿಪಕ್ಷ ಡೆಮೋಕ್ರಾಟ್‌ಗಳು ಒಗ್ಗಟ್ಟಿನಿಂದ ಯುದ್ಧದ ವಿರುದ್ಧ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಸೋಲೊಪ್ಪಿಕೊಳ್ಳುವ ಬದಲು, ಮೇ 1ರ ಒಳಗಾಗಿ ಯುದ್ಧವನ್ನು ಹೇಗಾದರೂ ಮಾಡಿ ಅಂತ್ಯಗೊಳಿಸಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ.
30 ದಿನಗಳ ಹೆಚ್ಚುವರಿ ಕಾಲಾವಕಾಶದ ಮಿತಿ
ಅಮೆರಿಕದ ಕಾನೂನಿನಲ್ಲಿ 60 ದಿನಗಳ ನಂತರ ಮತ್ತೊಂದು ಆಯ್ಕೆಯಿದೆ. ಅಧ್ಯಕ್ಷರು ಒಂದು ಬಾರಿ ಮಾತ್ರ 30 ದಿನಗಳ ಹೆಚ್ಚುವರಿ ಅವಧಿಯನ್ನು ಪಡೆದುಕೊಳ್ಳಬಹುದು. ಆದರೆ, ಈ ಅವಧಿಯು ಯುದ್ಧರಂಗದಲ್ಲಿರುವ ಸೈನಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಮಾತ್ರ ಬಳಕೆಯಾಗಬೇಕೇ ಹೊರತು, ಯುದ್ಧವನ್ನು ಮುಂದುವರಿಸಲು ಅನುಮತಿ ಇಲ್ಲ. ಹೀಗಾಗಿ, ಮುಂಬರುವ 6 ದಿನಗಳು ಅಮೆರಿಕದ ವಿದೇಶಾಂಗ ನೀತಿ ಮತ್ತು ಟ್ರಂಪ್ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ ಎನ್ನಲಾಗಿದೆ.
ಅನಿಯಂತ್ರಿತ ವೆಚ್ಚ
ಇಸ್ರೇಲ್ ಜತೆಗೂಡಿ ಅಮೆರಿಕ ಫೆಬ್ರವರಿ 28ರಂದು ಇರಾನ್ ವಿರುದ್ಧ ಅಪ್ರಚೋದಿತ ಯುದ್ಧವನ್ನು ಆರಂಭಿಸಿತು. ಯುದ್ಧದ ಮೊದಲ ದಿನವೇ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆಗೈದಿದ್ದರಿಂದ, ಯುದ್ಧದಲ್ಲಿ ಸುಲಭ ಗೆಲುವು ಸಿಗಬಹುದು ಎಂದು ಟ್ರಂಪ್ ಆಡಳಿತ ನಿರೀಕ್ಷಿಸಿತ್ತು. ಆದರೆ, ಅಲಿ ಖಮೇನಿ ನಿಧನದ ನಂತರವೂ ಇರಾನ್ ಆಕ್ರಮಕವಾಗಿ ಪ್ರತಿದಾಳಿ ಮುಂದುವರಿಸಿತು ಮತ್ತು ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿತು. ಅಮೆರಿಕದ ಗಲ್ಫ್ ನೆಲೆಗಳನ್ನು ಧ್ವಂಸಗೊಳಿಸಿದ ಇರಾನ್, ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ಅಮೆರಿಕ ಎಂದೂ ಊಹಿಸದ ಕ್ರಮ ಕೈಗೊಂಡಿತು. ಇದರಿಂದ ಜಾಗತಿಕ ತೈಲ ಬಿಕ್ಕಟ್ಟು ಎದುರಾಯಿತು. ಈ ಯುದ್ಧಕ್ಕೆ ಅಮೆರಿಕವು ಏಪ್ರಿಲ್ 22ರವರೆಗೆ 70 ಬಿಲಿಯನ್ ಡಾಲರ್ ಅಂದರೆ 65.99 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದಿವೆ ಮೂಲಗಳು. ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳಿಗೆ ಹಲವು ಬಿಲಿಯನ್ ಡಾಲರ್ ಹಣ ವೆಚ್ಚ ಮಾಡಿದೆ. ಟೊಮಾಹಾಕ್ ಕ್ಷಿಪಣಿಗಳು, ಜೆಎಎಸ್ಎಸ್ಎಂ (JASSM), ಪೇಟ್ರಿಯಾಟ್ ಕ್ಷಿಪಣಿಗಳು, ಟರ್ಮಿನಲ್ ಹೈ ಅಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (THAAD) ವ್ಯವಸ್ಥೆಗಳು ಮತ್ತು ಎಸ್ಎಂ-3, ಎಸ್ಎಂ-6 ಹಾಗೂ ಪಿಇಆರ್ಎಸ್ಎಮ್ (PrSM) ನಂತಹ ಅಲ್ಪ ಶ್ರೇಣಿಯ ಕ್ಷಿಪಣಿಗಳು ಸೇರಿ ಒಟ್ಟು 20ರಿಂದ 30 ಬಿಲಿಯನ್ ಡಾಲರ್ ಖರ್ಚಾಗಿದೆ. ಅಲ್ಲದೆ, ಪ್ರಾದೇಶಿಕ ಬೇಸ್ ಸ್ಟ್ರೈಕ್‌ಗಳು, ವಿಮಾನ ನಷ್ಟಗಳು, ಹಾನಿಗೊಳಗಾದ ವ್ಯವಸ್ಥೆಗಳು, ಡ್ರೋನ್‌ಗಳು ಮತ್ತು ರಿಪೇರಿ ರೂಪದಲ್ಲಿ 3 ಬಿಲಿಯನ್‌ನಿಂದ 10 ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಿದೆ. ಹೋರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಇಂಧನ ಬೆಲೆ ಏರಿಕೆಯಿಂದಾಗಿ ಅಮೆರಿಕ 20 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.
ಸಂಕಷ್ಟಗಳು
ಇರಾನ್ ಯುದ್ಧದ ಕಾರಣದಿಂದಾಗಿ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿ ಮುಚ್ಚಿದೆ. ಕದನವಿರಾಮ ಘೋಷಣೆಯ ಬಳಿಕವೂ ಹೋರ್ಮುಜ್ ಜಲಸಂಧಿ ಪೂರ್ತಿಯಾಗಿ ತೆರೆದುಕೊಂಡಿಲ್ಲ. ಇದರಿಂದಾಗಿ ಕಚ್ಚಾ ತೈಲದ ಬೆಲೆ ಏರುತ್ತಲೇ ಸಾಗಿದೆ. ಪರಿಣಾಮ, ಅಮೆರಿಕದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಿ, ಆಹಾರ ಧಾನ್ಯಗಳು ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಇದು ಸಾಮಾನ್ಯ ಅಮೆರಿಕನ್ನರ ಜೀವನಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಯುದ್ಧದ ಅನಿಶ್ಚಿತತೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಆರ್ಥಿಕ ಹಿಂಜರಿತ ತಲೆದೋರುವ ಲಕ್ಷಣಗಳು ಸ್ಪಷ್ಟವಾಗಿ ಕಂಡುಬಂದಿದ್ದು, ಅಮೆರಿಕದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಬಡ್ಡಿದರ ಇಳಿಕೆಯ ಬದಲು ಏರಿಕೆಯ ಹಾದಿ ಹಿಡಿದಿದೆ. ಖಾಸಗಿ ರಂಗದ ಮೇಲೂ ಪ್ರಭಾವ ಬೀರಿದ್ದು, ಕಾರ್ಪೊರೇಟ್ ಸಂಸ್ಥೆಗಳ ನಷ್ಟ ಹೆಚ್ಚುತ್ತಲೇ ಸಾಗಿದೆ.
ಶಸ್ತ್ರಾಸ್ತ್ರ ದಾಸ್ತಾನು ಕೊರತೆ
ಅಮೆರಿಕವು ಏಕಕಾಲದಲ್ಲಿ ಯೂಕ್ರೇನ್ ಮತ್ತು ಇಸ್ರೇಲ್ ಎರಡಕ್ಕೂ ಶಸ್ತ್ರಾಸ್ತ್ರ ಸಹಾಯ ಮಾಡುತ್ತಿರುವುದರಿಂದ ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನುಗಳಲ್ಲಿ ಕೊರತೆ ಉಂಟಾಗಿದೆ. ಇರಾನ್ ಸಂಘರ್ಷವು ಈ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯುದ್ಧನಿರತ ದೇಶಗಳಿಂದ ಮತ್ತು ಅವರ ಬೆಂಬಲಿಗರಿಂದ ಅಮೆರಿಕದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಮೇಲೆ ಸೈಬರ್ ದಾಳಿಗಳು ಹೆಚ್ಚಾಗಿವೆ.
ಆರ್ಥಿಕ ಪ್ರತಿಭಟನೆಗೆ ಸಜ್ಜು
ಈ ಚಳವಳಿಯ ಭಾಗವಾಗಿ ಮೇ 1ರಂದು ‘ರಾಷ್ಟ್ರೀಯ ಆರ್ಥಿಕ ಪ್ರತಿಭಟನೆ’ಗೆ ಕರೆ ನೀಡಲಾಗಿದೆ. ಅಂದು ಜನರು ಕೆಲಸಕ್ಕೆ ಹೋಗದೆ, ಶಾಲೆಗಳಿಗೆ ಗೈರುಹಾಜರಾಗಿ ಮತ್ತು ಯಾವುದೇ ಖರೀದಿ ಮಾಡದೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಇದು ಈಗಾಗಲೇ ಕುಸಿಯುತ್ತಿರುವ ಅಮೆರಿಕದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಯಿದೆ.
ಯುದ್ಧದ ವಿರುದ್ಧ ಜನಾಕ್ರೋಶ
ಟ್ರಂಪ್ ಆಡಳಿತ ಧೋರಣೆಯನ್ನು ವಿರೋಧಿಸಿ ನಡೆಯುತ್ತಿರುವ ‘ನೋ ಕಿಂಗ್ಸ್’ (No Kings) ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾರ್ಚ್ 28ರಂದು ನಡೆದ ನೋ ಕಿಂಗ್ಸ್ ಪ್ರತಿಭಟನೆಯಲ್ಲಿ ಅಮೆರಿಕದಾದ್ಯಂತ 80 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲೇ ಒಂದು ದಿನದಲ್ಲಿ ನಡೆದ ಅತಿ ದೊಡ್ಡ ಪ್ರತಿಭಟನೆ ಎಂದು ಪರಿಗಣಿಸಲಾಗಿದೆ. ಅಮೆರಿಕದ 3,300ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಜನರು ಬೀದಿಗೆ ಇಳಿದು ಸರ್ಕಾರದ ನೀತಿಗಳನ್ನು ಖಂಡಿಸಿದ್ದಾರೆ. ಕಾಂಗ್ರೆಸ್ (ಸಂಸತ್ತು) ಅನುಮತಿ ಇಲ್ಲದೆಯೇ ಟ್ರಂಪ್ ಇರಾನ್ ಮೇಲೆ ಕ್ಷಿಪ್ರ ದಾಳಿ ನಡೆಸಿರುವುದನ್ನು ಜನರು ವಿರೋಧಿಸಿದ್ದಾರೆ. ‘ಅಮೆರಿಕದ ಅಧ್ಯಕ್ಷರು ಒಬ್ಬ ರಾಜನಂತೆ ವರ್ತಿಸುತ್ತಿದ್ದಾರೆ, ಪ್ರಜಾಪ್ರಭುತ್ವದ ನಾಯಕನಂತಲ್ಲ’ ಎಂಬುದು ಪ್ರತಿಭಟನಾಕಾರರ ಪ್ರಮುಖ ಘೋಷಣೆಯಾಗಿದೆ. ನೋ ಕಿಂಗ್ಸ್ ಪ್ರತಿಭಟನೆಯ ಪರಿಣಾಮದಿಂದಾಗಿ ಅಮೆರಿಕ ಸರ್ಕಾರವು ತನ್ನ ವಿದೇಶಾಂಗ ನೀತಿ ಮತ್ತು ಯುದ್ಧದ ನಿರ್ಧಾರಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಮೆರಿಕದ ಒಳಗೇ ಇಂದು ಪ್ರಜಾಪ್ರಭುತ್ವಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ.