ಸಭೆಯಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಫಿಲಡೆಲ್ಫಿಯಾ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿ ಏರುಗತಿಯಲ್ಲಿ ಮುಂದುವರೆದಿದ್ದು, ಬಂಡವಾಳ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಹೇಳಿದ್ದಾರೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ‘ಬಿಸಿನೆಸ್ ಫೋರಮ್–2026’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಮಾತನಾಡಿದರು. ಭಾರತವು ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ನಾಗಾಲೋಟದಲ್ಲಿ ಮುಂದುವರೆದಿದ್ದು, ಭಾರತ ಸರಕಾರವು ಉದ್ಯಮಿಗಳು ಹಾಗೂ ಯುವಜನರಿಗೆ ಹಲವು ರೀತಿಯ ಸವಲತ್ತುಗಳು ಮತ್ತು ಅವಕಾಶಗಳನ್ನು ಒದಗಿಸುತ್ತಿದೆ.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ಭಾರತೀಯರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಭಾರತದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ನಿಮ್ಮ ತಾಂತ್ರಿಕ ಜ್ಞಾನ ಮತ್ತು ಅನುಭವವನ್ನು ಭಾರತದಲ್ಲಿ ಉದ್ಯಮ ಕಟ್ಟಲು ಬಳಸಿಕೊಳ್ಳಿ. ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಿ. ನಿಮ್ಮ ಅನುಭವ ಮತ್ತು ಪರಿಣತಿಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬದಲಾಗುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಹೊಸ ಉದ್ಯಮಗಳು, ನವೀನ ಆಲೋಚನೆಗಳು ಹಾಗೂ ತಂತ್ರಜ್ಞಾನ ಆಧಾರಿತ ವ್ಯವಹಾರಗಳಿಗೆ ಹೆಚ್ಚಿನ ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಗುರುತಿಸಿ ಯುವ ಉದ್ಯಮಿಗಳು ಮುನ್ನಡೆಯಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತ ಕನಸನ್ನು 2047ರ ಸಾಧಿಸಲು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ಮುನ್ನುಗ್ಗುತ್ತಿದೆ. ಅದಕ್ಕಾಗಿ ಭಾರತವು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಜಾಗತಿಕವಾಗಿ ಮುನ್ನುಗುತ್ತಿದೆ ಎಂದು ಸಚಿವರು ಹೇಳಿದರು.
ನರೇಂದ್ರ ಮೋದಿ ಅವರ ಸಂಪುಟದಲ್ಲಿ ನಾನು ಎರಡು ಪ್ರಮುಖ ಇಲಾಖೆಗಳನ್ನು ನಿರ್ವಹಣೆ ಮಾಡುತ್ತಿದ್ದೇನೆ. ಕೈಗಾರಿಕೆ ಮತ್ತು ಉಕ್ಕು ಇಲಾಖೆಗಳು ರಾಷ್ಟ್ರದ ಅಭಿವೃದ್ಧಿಗೆ ಬೆನ್ನೆಲುಬಾಗಿವೆ. ತಂತ್ರಜ್ಞಾನ, ಉತ್ಪಾದನೆ ಮತ್ತು ನಾವಿನ್ಯತೆಗೆ ಎರಡು ಕ್ಷೇತ್ರಗಳು ಹೆಚ್ಚು ಒತ್ತು ನೀಡುತ್ತಿವೆ.
ರಾಷ್ಟ್ರದಲ್ಲಿ ಮಾಲಿನ್ಯಮುಕ್ತ ಸಾರಿಗೆಗೆ ಒತ್ತು ನೀಡುವ ಉದ್ದೇಶದಿಂದ 10,900 ಕೋಟಿ ರೂಪಾಯಿ ಬೃಹತ್ ಮತದ ಪಿಎಂಇ ಡ್ರೈವ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಇವತ್ತು ನಮ್ಮ ರಸ್ತೆಗಳ ಮೇಲೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಟ್ರಕ್ ಗಳು ಬಸ್ಸುಗಳು ಯಥೇಚ್ಛವಾಗಿ ಸಂಚರಿಸುತ್ತಿವೆ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
ಕ್ಷೇತ್ರವನ್ನು ಸದೃಢಗೊಳಿಸಲು ಸ್ವಾವಲಂಬನೆಗಾಗಿ 50 ಗಿಗಾವ್ಯಾಟ್ ಸಾಮರ್ಥ್ಯದ ಎಸಿಸಿ ಬ್ಯಾಟರಿ ಕಾರ್ಯಕ್ರಮದ ಅಡಿಯಲ್ಲಿ 18,100 ಕೋಟಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅತಿ ಮುಖ್ಯವಾಗಿ ಭೂಮಿಯಲ್ಲಿನ ವಿರಳ ಖನಿಜ ಸಂಪನ್ಮೂಲಗಳನ್ನು ಉತ್ಪಾದಿಸಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ 7,280 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವರು ವಿವರಿಸಿದರು.
ಉಕ್ಕು ಕ್ಷೇತ್ರದಲ್ಲಿ ಭಾರತವು ಹಿಂದೆಂದೂ ಕಂಡಿರದಷ್ಟು ದೃಢವಾದ ಅಭಿವೃದ್ಧಿಯನ್ನು ಸಾಧಿಸುತ್ತಿದೆ. 2030ರ ವೇಳೆಗೆ ಭಾರತವು ದೇಶಿಯವಾಗಿ 300 ದಶಲಕ್ಷ ಟನ್ ಉಕ್ಕನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 2070ರ ಹೊತ್ತಿಗೆ ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸುವಿಕೆಯನ್ನು ಶೂನ್ಯಮಟ್ಟಕ್ಕೆ ತರುವ ಗುರಿ ಹೊಂದಲಾಗಿದೆ. ಹಾಗೆಯೇ ದೇಶಿಯವಾಗಿ ಉಕ್ಕು ಉತ್ಪಾದನೆಗೆ ಶಕ್ತಿ ತುಂಬ ಉದ್ದೇಶದಿಂದ 6,322 ಮೊತ್ತದ ಉತ್ಪಾದನಾ ಉತ್ತೇಜನ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅತ್ಯಂತ ಮಹತ್ವಪೂರ್ಣ ಚರ್ಚೆಗೆ ಕಾರಣವಾದ ಈ ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು ,ಅಕ್ಕ ಕೂಟದ ಪ್ರಮುಖರಾದ ಅಮರನಾಥ ಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಅಕ್ಕ ಅಧ್ಯಕ್ಷ ಮಧು ರಂಗಯ್ಯ ಹಾಗೂ ಅಮೆರಿಕದಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲೇಟ್ ಜನರಲ್ ವಿಶಾಲ್ ಹರ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.