ಬಾಂಗ್ಲಾ ಚುನಾವಣೆ 
ವಿದೇಶ

2024ರ ಆಂತರಿಕ ದಂಗೆ ಬಳಿಕ ಬಾಂಗ್ಲಾದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ; ಇಂದು ಮೊದಲ ಹಂತದ ಮತದಾನ | Bangladesh

ಢಾಕಾ: ಬಾಂಗ್ಲಾದೇಶದಲ್ಲಿ 2024 ಅಗಸ್ಟ್​ನಲ್ಲಿ ನಡೆದ ಸಾಮೂಹಿಕ ಆಂತರಿಕ ದಂಗೆ, ಮಾಜಿ ಪ್ರಧಾನಿ ಶೇಖ್ ಹಸೀನಾ ಆಡಳಿತದ ಅಂತ್ಯದ ಬಳಿಕ ಮೊದಲ ಬಾರಿಗೆ ದೇಶದ ಸಂಸತ್​ಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. 
13ನೇ ಬಾಂಗ್ಲಾ ಸಾರ್ವತ್ರಿಕ ಚುನಾವಣೆ ಇದಾಗಿದ್ದು,  ಜನಾಭಿಪ್ರಾಯ ಸಂಗ್ರಹ ಮತ್ತು ಸಾರ್ವತ್ರಿಕ ಚುನಾವಣೆ ಒಂದೇ ದಿನ ನಡೆಯಲಿವೆ. ಮತದಾರರು ಎರಡು ಮತಗಳನ್ನು ಚಲಾಯಿಸಲಿದ್ದಾರೆ. ಒಂದು ಸಂಸತ್ತಿಗೆ ಮತ್ತು ಇನ್ನೊಂದು ಜನಾಭಿಪ್ರಾಯ ಸಂಗ್ರಹಕ್ಕೆ.
299 ಸಂಸದೀಯ ಕ್ಷೇತ್ರಗಳಲ್ಲಿ ಬೆಳಿಗ್ಗೆ 7.30ರಿಂದ ಆರಂಭವಾಗಿದ್ದು, ಸಂಜೆ 4.30 ರವರೆಗೆ ನಡೆಯಲಿದೆ. ಮತದಾನ ಮುಗಿದ ತಕ್ಷಣ ಮತ ಎಣಿಕೆ ಪ್ರಾರಂಭವಾಗುತ್ತದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುತ್ತಿದ್ದು, ಸುಮಾರು 8 ಲಕ್ಷ ಚುನಾವಣೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಷ್ಟೇ ಅಲ್ಲ ಪಕ್ಷೇತರರು ಸೇರಿ ಒಟ್ಟು 2,028 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ(ಬಿಎನ್‌ಪಿ) ಮತ್ತು ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ನಡುವೆ ಪ್ರಮುಖ ಸ್ಪರ್ಧೆ ಇದೆ. ಹಸೀನಾ ವಿರುದ್ಧದ ಸಾಮೂಹಿಕ ಚಳವಳಿಯಿಂದ ಹೊರಹೊಮ್ಮಿದ ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ನಾಗರಿಕ ಪಕ್ಷ(ಎನ್‌ಸಿಪಿ), ಜಮಾತ್‌ ಜೊತೆಗಿನ 11 ಪಕ್ಷಗಳ ಮೈತ್ರಿಕೂಟದ ಭಾಗವಾಗಿದೆ.
ಹಿಂದೆ ಆಡಳಿತ ನಡೆಸಿದ ಅನುಭವ ಇರುವ ಮತ್ತು ಪ್ರಮುಖ ರಾಜಕೀಯ ಶಕ್ತಿಯಾಗಿರುವ ಖಲೀದಾ ಜಿಯಾ ಅವರ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ. ಇತ್ತೀಚೆಗೆ ಅವರ ಮರಣದ ನಂತರ, ಪಕ್ಷವನ್ನು ಮಗ ತಾರಿಕ್ ರೆಹಮಾನ್ ಮುನ್ನಡೆಸುತ್ತಿದ್ದಾರೆ. ಆದಾಗ್ಯೂ, ಜಮಾತ್ -ಇ-ಇಸ್ಲಾಮಿ ಪಕ್ಷವು ಸಮುದಾಯಗಳಲ್ಲಿ ದಂಗೆ ಬಳಿಕ ಬಲವಾದ ನೆಲೆ ಕಂಡುಕೊಂಡಿದೆ ಎನ್ನಲಾಗಿದೆ.
ಇನ್ನೂ ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಬಳಿಕ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದಾರೆ (ಏಜೆನ್ಸೀಸ್).