ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ 
ವಿದೇಶ

ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಿದ್ರೆ ಮಾತ್ರ ಬಾಂಗ್ಲಾ ಪ್ರಧಾನಿ ಭಾರತಕ್ಕೆ ಭೇಟಿ: ಶಾಹಿದುಲ್ ಕರೀಮ್ | Sheikh hasina

ಢಾಕಾ: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತಕ್ಕೆ ಭೇಟಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಬಾಂಗ್ಲಾ, ಶೇಖ್ ಹಸೀನಾ(Sheikh hasina) ಅವರನ್ನು ಹಸ್ತಾಂತರಿಸಿದ್ರೆ ಮಾತ್ರ ನಮ್ಮ ಪ್ರಧಾನಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಭಾನುವಾರ(ಆ. 16) ಹೇಳಿದೆ.
2024ರಲ್ಲಿ ವಿದ್ಯಾರ್ಥಿಗಳ ದಂಗೆ ಬಳಿಕ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ಭಾರತಕ್ಕೆ ಗಡಿಪಾರಾಗಿ ಬಂದಿರುವ ಶೇಖರ್ ಹಸೀನಾ ಅವರನ್ನು ತಮಗೆ ಒಪ್ಪಿಸುವಂತೆ ಮತ್ತು ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಾಂಗ್ಲಾ ವಿದೇಶಾಂಗ ಸಚಿವಾಲಯದ ವಕ್ತಾರ ಎ.ಕೆ.ಎಂ. ಶಾಹಿದುಲ್ ಕರೀಮ್, ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಶೇಖ್ ಹಸೀನಾ ಅವರ ಮಾಧ್ಯಮ ಸಂವಾದದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಬಾಂಗ್ಲಾ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬಾಂಗ್ಲಾ ತನ್ನ ದೇಶದ ಸಾರ್ವಭೌಮತ್ವ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ 'ಬಾಂಗ್ಲಾದೇಶ ಮೊದಲು' ವಿದೇಶಾಂಗ ನೀತಿಯನ್ನು ಅನುಸರಿಸುವುದಾಗಿ ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಾರಿಕ್ ರೆಹಮಾನ್, ಬಾಂಗ್ಲಾದೇಶದ ನಾಯಕರು ತಮ್ಮ ಮೊದಲ ವಿದೇಶಿ ಭೇಟಿಯಾಗಿ ಭಾರತವನ್ನು ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವನ್ನು ಮುರಿದು ಮಲೇಷ್ಯಾ ಮತ್ತು ಚೀನಾಕ್ಕೆ ಭೇಟಿ ನೀಡಿದ್ದಾರೆ (ಏಜೆನ್ಸೀಸ್).