ಬಾಂಗ್ಲಾದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಹಿಂದೂಗಳು ಶವವಾಗಿ ಪತ್ತೆ: ಉಸಿರುಗಟ್ಟಿಸಿ ಭೀಕರ ಕೊಲೆ ಶಂಕೆ! Hindu Family
- ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ಒಂದೇ ಹಿಂದೂ ಕುಟುಂಬದ ನಾಲ್ವರ ಶವ ಪತ್ತೆ
- ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಿರುವ ಪೊಲೀಸರು
- ನಿವೃತ್ತ ಶಿಕ್ಷಕ, ಪತ್ನಿ, ಪುತ್ರಿ ಹಾಗೂ 12 ವರ್ಷದ ಬಾಲಕನ ಬರ್ಬರ ಹತ್ಯೆ
- ಗುರುವಾರ ರಾತ್ರಿಯಿಂದ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಬೆಳಕಿಗೆ ಬಂದ ಕೃತ್ಯ
- ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಬಹಿರಂಗ
ಢಾಕಾ: ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಹಿಂದೂಗಳು ( Hindu Family ) ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಸ್ಥಳೀಯರನ್ನು ಆಘಾತಕ್ಕೆ ದೂಡಿದೆ. ಬೀಗ ಹಾಕಿದ್ದ ಮನೆಯೊಳಗೆ ಪತ್ತೆಯಾದ ಶವಗಳ ಪ್ರಕರಣವು ಈಗ ಭಾರಿ ತಿರುವು ಪಡೆದುಕೊಂಡಿದ್ದು, ದುಷ್ಕರ್ಮಿಗಳು ನಾಲ್ವರನ್ನು ಹಗ್ಗದಿಂದ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ಶಂಕಿಸಿದ್ದಾರೆ. ಮೃತರಾದವರು ಹಿಂದೂ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ರಂಗ್‌ಪುರ್ ಜಿಲ್ಲೆಯ ದಾಸಪಾರಾ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಕೃತ್ಯ ಬೆಳಕಿಗೆ ಬಂದಿದೆ. ಮೃತರನ್ನು ನಿವೃತ್ತ ಶಾಲಾ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಅಗಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ 12 ವರ್ಷದ ಪುತ್ರ ಪ್ರಿಯಮ್ ಚಕ್ರವರ್ತಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ ಸಿಐಡಿ (CID) ಮತ್ತು ಡಿಟೆಕ್ಟಿವ್ ಬ್ರಾಂಚ್ (DB) ತಂಡಗಳಿಗೆ ಮನೆಯ ವಿವಿಧ ಮೂಲೆಗಳಲ್ಲಿ ಶವಗಳು ಬಿದ್ದಿರುವುದು ಕಂಡುಬಂದಿದೆ. ತಾಯಿ ಮತ್ತು ಮಗಳ ಮೃತದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿದ್ದರೆ, ಗಣಪತಿ ಚಕ್ರವರ್ತಿ ಅವರ ಶವವು ಕಟ್ಟಡದ ಮಹಡಿಯ ಮೇಲೆಯೂ ಹಾಗೂ 12 ವರ್ಷದ ಬಾಲಕನ ಮೃತದೇಹವು ಕೋಣೆಯೊಂದರ ಹಾಸಿಗೆಯ ಅಡಿಯಲ್ಲಿ ಪತ್ತೆಯಾಗಿವೆ. ಈ ಘಟನೆಯು ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ನಸುಕಿನ ಜಾವದ ನಡುವೆ ನಡೆದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಗುರುವಾರ ರಾತ್ರಿಯಿಂದಲೇ ಈ ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್ ಫೋನ್‌ಗಳು ನಿರಂತರವಾಗಿ ಸ್ವಿಚ್‌ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ಸಂಬಂಧಿಕರು ಶನಿವಾರ ರಾತ್ರಿ ಅವರ ಮನೆಗೆ ನೇರವಾಗಿ ಬಂದಿದ್ದಾರೆ. ಆದರೆ, ಮನೆಯ ಮುಖ್ಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದು, ಒಳಗೆ ದೀಪಗಳು ಆರಿಹೋಗಿದ್ದವು. ಕೂಡಲೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಅಲ್ಲಿ ಕಂಡುಬಂದ ದೃಶ್ಯವು ಕಣ್ಣೀರು ತರಿಸುವಂತಿತ್ತು. ಮನೆಯಲ್ಲಿದ್ದ ನಾಲ್ವರೂ ಪ್ರಾಣಪಕ್ಷಿ ಹಾರಿಹೋಗಿ ಹೆಣವಾಗಿ ಬಿದ್ದಿದ್ದರು. ಈ ಘಟನೆ ಇಡೀ ಪ್ರದೇಶದ ಜನತೆಯನ್ನು ಆಘಾತಕ್ಕೆ ದೂಡಿದೆ.
ಮೃತ ಗಣಪತಿ ಚಕ್ರವರ್ತಿ ಅವರು ಯಾರೊಬ್ಬರ ಜೊತೆಗೂ ಯಾವುದೇ ವೈಷಮ್ಯ ಅಥವಾ ಶತ್ರುತ್ವ ಹೊಂದಿರಲಿಲ್ಲ ಎಂದು ಸಂಬಂಧಿಕರು ಕಣ್ಣೀರಿಡುತ್ತಾ ತಿಳಿಸಿದ್ದಾರೆ. ಕಳೆದ ವರ್ಷವಷ್ಟೇ ಅವರು ಶಾಲಾ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು. ಬಳಿಕ ತಮ್ಮ ಮನೆಯಲ್ಲೇ ಹೋಮಿಯೋಪತಿ ವೈದ್ಯಕೀಯ ಅಭ್ಯಾಸ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಇನ್ನು ಅವರ ಪುತ್ರಿ ಈ ವರ್ಷವೇ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರೆ, ಕಿರಿಯ ಮಗ ಐದನೇ ತರಗತಿಯಲ್ಲಿ ಓದುತ್ತಿದ್ದ. ಇಂತಹ ಮುಗ್ಧ ಹಾಗೂ ಶಾಂತಿಯುತ ಕುಟುಂಬದವರ ಸಾವು ಸಾಕ್ಷಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಘಟನಾ ಸ್ಥಳಕ್ಕೆ ಬಾಂಗ್ಲಾದೇಶದ ರಂಗ್‌ಪುರ್ ಮಹಾನಗರ ಪೊಲೀಸ್ ಅಧಿಕಾರಿಗಳು, ಸಿಐಡಿ ಮತ್ತು ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ಅತ್ಯುನ್ನತ ಪ್ರಾಮುಖ್ಯತೆ ನೀಡಿ ತನಿಖೆಯನ್ನು ಚುರುಕುಗೊಳಿಸಿದೆ. ನಾಲ್ವರ ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ, (ಏಜೆನ್ಸೀಸ್).