ಬಾಂಗ್ಲಾದೇಶದ ( Bangladesh Election ) ಪ್ರಧಾನಿಯಾಗಲಿದ್ದಾರೆ ತಾರಿಕ್ ರೆಹಮಾನ್
- ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ದಾಖಲಿಸಿದೆ.
- 2024ರ ಮಾರಕ ದಂಗೆಯ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವು ಭರ್ಜರಿ ಗೆಲುವು
- ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಸಿದ್ಧತೆ
ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ( Bangladesh Election ) ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ದಾಖಲಿಸಿದೆ. 2024ರ ಮಾರಕ ದಂಗೆಯ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವು ಭರ್ಜರಿ ಗೆಲುವಿನ ಹಾದಿಯಲ್ಲಿದ್ದು, ನಾಯಕ ತಾರಿಕ್ ರೆಹಮಾನ್ ಪ್ರಧಾನಿಯಾಗಲಿದ್ದಾರೆ.
ಶೇಖ್ ಹಸೀನಾ ಸರ್ಕಾರದ ಪತನದ ನಂತರ ನಡೆದ ಈ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಒಟ್ಟು 299 ಸಂಸದೀಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಬಿಎನ್‌ಪಿ ತನ್ನ ಮಿತ್ರಪಕ್ಷಗಳೊಂದಿಗೆ 211 ಸ್ಥಾನಗಳನ್ನು ಗೆದ್ದಿದೆ. ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಬಿಎನ್‌ಪಿ ಬಹಿರಂಗಪಡಿಸಿದೆ. ಬಿಎನ್‌ಪಿ ಎದುರು ಸ್ಪರ್ಧಿಸಿದ್ದ ಜಮಾತ್-ಇ-ಇಸ್ಲಾಮಿ ಪಕ್ಷವು ಕೇವಲ 70 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಇನ್ನು ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಢಾಕಾ-17 ಮತ್ತು ಬೊಗ್ರಾ-6 ಕ್ಷೇತ್ರಗಳಲ್ಲಿ ಭಾರಿ ಬಹುಮತದಿಂದ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅಂದಹಾಗೆ, ತಾರಿಕ್ ಅವರು ದೀರ್ಘಕಾಲದಿಂದ ವನವಾಸದಲ್ಲಿದ್ದರು. ಇತ್ತೀಚೆಗಷ್ಟೇ ಅವರು ಲಂಡನ್ನಿಂದ ಸುಮಾರು 17 ವರ್ಷಗಳ ಬಳಿಕ ಬಾಂಗ್ಲಾದೇಶಕ್ಕೆ ಮರಳಿದರು ಮತ್ತು ಪಕ್ಷವನ್ನು ಗೆಲುವಿನತ್ತ ಕೊಂಡೊಯ್ದರು. ಇದೊಂದು ಐತಿಹಾಸಿಕ ಗೆಲುವಾಗಿದೆ. ಬಿಎನ್‌ಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾರಿಕ್ ರೆಹಮಾನ್ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಪಕ್ಷ ಈಗಾಗಲೇ ಘೋಷಿಸಿದೆ. ಹೀಗಾಗಿ, ರೆಹಮಾನ್ ಪ್ರಧಾನಿಯಾವುದು ಖಚಿತವಾಗಿದೆ.
ಇಂದು (ಫೆ. 13) ಬೆಳಗ್ಗೆ 8 ಗಂಟೆಗೆ (ಭಾರತೀಯ ಕಾಲಮಾನ ಬೆಳಗ್ಗೆ 7.30), ಬಾಂಗ್ಲಾದೇಶದ ಮಾಧ್ಯಮಗಳು, ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯಲು ಬಿಎನ್‌ಪಿ 150 ಸ್ಥಾನಗಳ ಮಿತಿಯನ್ನು ದಾಟಲಿದೆ ಮತ್ತು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿ ಮಾಡಿದ್ದವು. ಅದರಂತೆ, ಜಮುನಾ ದೂರದರ್ಶನ ಚಾನೆಲ್, ಬಿಎನ್‌ಪಿ 212 ಸ್ಥಾನಗಳನ್ನು ಗಳಿಸಿದೆ ಎಂದು ವರದಿ ಮಾಡಿದೆ. ಈಗಾಗಲೇ ತಾರಿಕ್ ರೆಹಮಾನ್ ಅವರ ಪಕ್ಷವು ವಿಜಯವನ್ನು ಪ್ರತಿಪಾದಿಸಿದ್ದು, ಬಹುಪಾಲು ಸ್ಥಾನಗಳನ್ನು ಗೆದ್ದ ನಂತರ ಬಿಎನ್‌ಪಿ ಸರ್ಕಾರ ರಚಿಸಲಿದೆ ಎಂದು ಹೇಳಿದೆ.
ಅಂದಹಾಗೆ, ಚುನಾವಣಾ ಆಯೋಗವು ಅಂತಿಮ ಫಲಿತಾಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಅಂತಿಮ ಫಲಿತಾಂಶಕ್ಕಾಗಿ ಕಾಯದೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ರೆಹಮಾನ್ ಮತ್ತು ಬಿಎನ್‌ಪಿಗೆ "ಐತಿಹಾಸಿಕ ಗೆಲುವಿಗಾಗಿ" ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ಢಾಕಾದಲ್ಲಿರುವ ಅದರ ರಾಯಭಾರ ಕಚೇರಿ ತಿಳಿಸಿದೆ.
ಇನ್ನು ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. 2024 ಆಗಸ್ಟ್ ತಿಂಗಳಲ್ಲಿ ಹಸೀನಾ ಅವರ ಪದಚ್ಯುತಿಗೆ ಒಳಗಾದ ನಂತರ 85 ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದ ಯೂನಸ್ ಬಾಂಗ್ಲಾದೇಶವನ್ನು ಮುನ್ನಡೆಸುತ್ತಿದ್ದಾರೆ. ಯೂನಸ್ ಆಡಳಿತದಲ್ಲಿ ಹಸೀನಾ ಅವರ ಅವರ ಅವಾಮಿ ಲೀಗ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿತು. ಇದು ಬಿಎನ್‌ಪಿಗೆ ವರದಾನವಾಗಿರುವ ಚುನಾವಣೆ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ತಾರಿಕ್ ರೆಹಮಾನ್ ಯಾರು?
ಅಂದಹಾಗೆ, ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP)ಯ ಹಂಗಾಮಿ ಅಧ್ಯಕ್ಷರಾಗಿದ್ದವರು. 2008ರಲ್ಲಿ ಭ್ರಷ್ಟಾಚಾರ ಮತ್ತು ಇತರ ಆರೋಪಗಳ ಮೇಲೆ ಮಿಲಿಟರಿ-ಬೆಂಬಲಿತ ಸರ್ಕಾರದಿಂದ ಬಂಧನಕ್ಕೊಳಗಾಗಿ ನಂತರ ದೇಶ ತ್ಯಜಿಸಿ ಲಂಡನ್‌ಗೆ ತೆರಳಿದರು. ಅಲ್ಲಿಂದಲೇ ಪಕ್ಷದ ಕಾರ್ಯಗಳನ್ನು ನಿರ್ವಹಿಸುತ್ತಾ ಸುಮಾರು 17 ವರ್ಷಗಳ ಕಾಲ ಸ್ವಯಂ ಗಡಿಪಾರಿನಲ್ಲಿ ವಾಸಿಸಿದರು. ಶೇಖ್ ಹಸೀನಾ ಸರ್ಕಾರದ ಆಡಳಿತದಲ್ಲಿ ರಾಜಕೀಯ ದೌರ್ಜನ್ಯ ಮತ್ತು ಕೇಸುಗಳ ಭಯದಿಂದಾಗಿ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಆದರೆ, 2024ರಲ್ಲಿ ಹಸೀನಾ ಸರ್ಕಾರ ಪತನಗೊಂಡ ನಂತರ ಎಲ್ಲಾ ಕೇಸುಗಳು ಹಿಂತೆಗೆದುಕೊಳ್ಳಲ್ಪಟ್ಟಿದ್ದರಿಂದ 2025ರ ಡಿಸೆಂಬರ್ 25ರಂದು ಭಾರೀ ಸ್ವಾಗತದೊಂದಿಗೆ ಢಾಕಾಗೆ ಮರಳಿದರು, ಇದು ಬಾಂಗ್ಲಾದೇಶದ ರಾಜಕೀಯದಲ್ಲಿ ದೊಡ್ಡ ಬದಲಾವಣೆಯನ್ನು ತಂದು 2026ರ ಚುನಾವಣೆಯಲ್ಲಿ BNPಗೆ ಭರ್ಜರಿ ಜಯ ಸಾಧಿಸಲು ನೆರವಾಯಿತು, (ಏಜೆನ್ಸೀಸ್).