ಕಾಠ್ಮಂಡು: ಹಿಮಾಲಯದ ರಾಷ್ಟ್ರ ನೇಪಾಳದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಸಾಂಪ್ರದಾಯಿಕ ಪಕ್ಷಗಳನ್ನು ಧೂಳೀಪಟ ಮಾಡಿ, ಯುವಶಕ್ತಿಯ ಪ್ರತೀಕವಾಗಿರುವ ಬಾಲೇಂದ್ರ ಶಾ (ಬಾಲನ್)(Balendra Shah) ಅವರು ದೇಶದ ಅತ್ಯಂತ ಕಿರಿಯ ಪ್ರಧಾನಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಹೌದು, ಕಳೆದ ವರ್ಷ ನಡೆದ ಭ್ರಷ್ಟಾಚಾರ ವಿರೋಧಿ ಬೃಹತ್ ಪ್ರತಿಭಟನೆಗಳ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಾಲನ್ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಬರೆದಿದೆ.
ಐತಿಹಾಸಿಕ ಪ್ರಮಾಣವಚನ ಸ್ವೀಕಾರ
ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರು 35 ವರ್ಷದ ಬಾಲೇಂದ್ರ ಶಾ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಹಿಂದೂ ಅರ್ಚಕರ ಮಂತ್ರಘೋಷ ಮತ್ತು ಬೌದ್ಧ ಭಿಕ್ಕುಗಳ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಯಿತು. ವಿಶೇಷವೆಂದರೆ, ಬಾಲನ್ ತಮ್ಮ ಸಾಂಪ್ರದಾಯಿಕ ಕಪ್ಪು ನೇಪಾಳಿ ಟೋಪಿ ಮತ್ತು ಕಪ್ಪು ಕನ್ನಡಕ ಧರಿಸಿ ಪ್ರಮಾಣವಚನ ಸ್ವೀಕರಿಸುವ ಮೂಲಕ ತಮ್ಮ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದರು. "ದೇಶ ಮತ್ತು ಜನರ ಹೆಸರಿನಲ್ಲಿ ನಾನು ಸಂವಿಧಾನಕ್ಕೆ ನಿಷ್ಠನಾಗಿರುತ್ತೇನೆ ಮತ್ತು ಪ್ರಧಾನಿಯಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ" ಎಂದು ಬಾಲನ್ ಪ್ರತಿಜ್ಞೆ ಮಾಡಿದರು.
ಮಧೇಸಿ ಸಮುದಾಯದ ಮೊದಲ ನಾಯಕ
ನೇಪಾಳದ ರಾಜಕೀಯ ಇತಿಹಾಸದಲ್ಲಿ ದಶಕಗಳ ನಂತರ ಭಾರತದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಬಯಲು ಸೀಮೆಯ 'ಮಧೇಸಿ' ಸಮುದಾಯದ ವ್ಯಕ್ತಿಯೊಬ್ಬರು ದೇಶವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಇದು ನೇಪಾಳದ ರಾಜಕೀಯದಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ದೊಡ್ಡ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಂಪ್ರದಾಯಿಕ ಪಕ್ಷಗಳಿಗೆ ಮುಖಭಂಗ
ಮಾರ್ಚ್ 5 ರಂದು ನಡೆದ ಚುನಾವಣೆಯಲ್ಲಿ ಬಾಲನ್ ಅವರ ಆರ್‌ಎಸ್‌ಪಿ ಪಕ್ಷವು 275 ಸದಸ್ಯ ಬಲದ ಸಂಸತ್ತಿನಲ್ಲಿ 182 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
ದೇಶದ ಅತ್ಯಂತ ಹಳೆಯ ಪಕ್ಷವಾದ ನೇಪಾಳಿ ಕಾಂಗ್ರೆಸ್ ಕೇವಲ 38 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮಾಜಿ ಪ್ರಧಾನಿ ಓಲಿ ನೇತೃತ್ವದ ಕಮ್ಯುನಿಸ್ಟ್ ಪಕ್ಷ (CPN-UML) ಕೇವಲ 25 ಸ್ಥಾನಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದೆ.
ಉದ್ಯೋಗಾವಕಾಶಗಳ ಕೊರತೆ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ 'ಜೆನ್ ಝಡ್' (Gen Z) ಯುವ ಸಮೂಹವು ಈ ಬಾರಿ ಬದಲಾವಣೆಯ ಪರವಾಗಿ ಮತ ಚಲಾಯಿಸಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಪ್ರಧಾನಿ ಮೋದಿ ಶುಭಾಶಯ
ಬಾಲನ್ ಶಾ ಅವರ ಪದಗ್ರಹಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. "ನೇಪಾಳದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಾಲೇಂದ್ರ ಶಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದ ಮೇಲೆ ನೇಪಾಳದ ಜನರು ಇಟ್ಟಿರುವ ನಂಬಿಕೆಯನ್ನು ಇದು ಪ್ರತಿಫಲಿಸುತ್ತದೆ. ಭಾರತ ಮತ್ತು ನೇಪಾಳದ ಸ್ನೇಹ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಮೋದಿ ತಿಳಿಸಿದ್ದಾರೆ.
ಬಾಲನ್ ಸಚಿವ ಸಂಪುಟದ ಪ್ರಮುಖರು
ಬಾಲನ್ ಶಾ ಅವರ ಸಂಪುಟದಲ್ಲಿ 14 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಯುವ ಚಳವಳಿಯ ಮೂಲಕ ಗುರುತಿಸಿಕೊಂಡಿದ್ದ ಸುದನ್ ಗುರುಂಗ್ ಅವರಿಗೆ ಗೃಹ ಸಚಿವಾಲಯ, ಖ್ಯಾತ ಅರ್ಥಶಾಸ್ತ್ರಜ್ಞ ಸ್ವರ್ಣಿಮ್ ವಾಗ್ಲೆ ಅವರಿಗೆ ಹಣಕಾಸು ಮತ್ತು ಶಿಶಿರ್ ಖನಾಲ್ ಅವರಿಗೆ ವಿದೇಶಾಂಗ ಸಚಿವಾಲಯವನ್ನು ನೀಡುವ ಸಾಧ್ಯತೆಯಿದೆ. ಪತ್ರಕರ್ತೆ ಪ್ರತಿಭಾ ರಾವಲ್ ಮತ್ತು ಸಾಹಿತಿ ಗಣೇಶ್ ಪೌಡೆಲ್ ಕೂಡ ಸಚಿವ ಸ್ಥಾನ ಪಡೆಯಲಿದ್ದಾರೆ,(ಏಜೆನ್ಸೀಸ್).