ಯುಎಸ್​ ಮಿಲಿಟರಿಯ ಬಿ52 ವಿಮಾನ ಪತನ ದೃಶ್ಯ 
ವಿದೇಶ

ಅಮೆರಿಕದ ಬಿ-52 ಬಾಂಬರ್​ ವಿಮಾನ ಪತನ! ಟೇಕ್​ ಆಫ್​ ಆದ ಕೆಲವೇ ನಿಮಿಷದಲ್ಲಿ ದುರಂತ; 8 ಮಂದಿ ಮೃತ

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ವಾಯುಪಡೆಯ ಬೃಹತ್ ಬಿ-52 (B-52 Stratofortress) ಬಾಂಬರ್ ವಿಮಾನ ಪತನ
  • ವಿಮಾನದೊಳಗಿದ್ದ 8 ಮಂದಿ ದಾರುಣ ಸಾವು
ವಾಷಿಂಗ್ಟನ್: ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ಅಮೆರಿಕ ವಾಯುಪಡೆಯ ಬೃಹತ್ ಬಿ-52 (B-52 Stratofortress) ಬಾಂಬರ್ ವಿಮಾನ ಪತನಗೊಂಡಿದ್ದು, 8 ಮಂದಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುಪಡೆ ನೆಲೆಯ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ವಿಮಾನ ನೆಲಕ್ಕೆ ಅಪ್ಪಳಿಸಿದ ಕೂಡಲೇ ಬೆಂಕಿಗೆ ಆಹುತಿಯಾಗಿದೆ. ಸೇನಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯೂ ಸುಟ್ಟು ಭಸ್ಮವಾಗಿದ್ದಾರೆ ಎನ್ನಲಾಗಿದೆ. ಸೋಮವಾರ (ಜೂ.15) ಮಧ್ಯಾಹ್ನದ ವೇಳೆ ಈ ದುರಂತ ಸಂಭವಿಸಿದ್ದಾಗಿ ವಾಯುಪಡೆಯ ಅಧಿಕೃತ ಮೂಲಗಳು ತಿಳಿಸಿವೆ.

ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ದುರಂತ

ಲಾಸ್ ಏಂಜಲೀಸ್‌ನಿಂದ ಉತ್ತರಕ್ಕೆ ಸುಮಾರು 95 ಕಿ.ಮೀ ದೂರದಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಿಂದ ಸುಮಾರು 11:20ರ ಸುಮಾರಿಗೆ ಈ ವಿಮಾನವು ಎಂದಿನಂತೆ ಟೆಸ್ಟ್​ ಮಿಷನ್​ ಹಾರಾಟಕ್ಕಾಗಿ ಹೊರಟಿತು. ಆದರೆ, ಟೇಕ್​ ಆಫ್​ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ನೆಲಕ್ಕೆ ಅಪ್ಪಳಿಸಿ, ಸ್ಫೋಟಗೊಂಡಿದೆ.

ಸಂಪೂರ್ಣ ಸುಟ್ಟು ಭಸ್ಮ

ವೈಮಾನಿಕ ದೃಶ್ಯಾವಳಿಗಳ ಪ್ರಕಾರ, ಅಪಘಾತ ನಡೆದ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ವಿಮಾನ ಪತನಗೊಂಡ ಸ್ಥಳವು ಸಂಪೂರ್ಣವಾಗಿ ಕರಕಲಾಗಿದೆ. ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ ವಿಮಾನವು ಸುಟ್ಟು ಭಸ್ಮವಾಗಿದೆ. ಇದರಿಂದ ವಿಮಾನದ ಯಾವುದೇ ಅವಶೇಷಗಳು ಸಿಕ್ಕಿಲ್ಲ. ಪ್ರಸ್ತುತ, ಕಾರ್ಯಾಚರಣೆ ಮುಂದುವರಿದಿದೆ.

ಕೋಲ್ಡ್ ವಾರ್ ಕಾಲದ ಐತಿಹಾಸಿಕ ವಿಮಾನ

ಪತನಗೊಂಡ ಬಿ52 ವಿಮಾನವು ಅಮೆರಿಕ ಸೇನೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಬೃಹತ್ ಯುದ್ಧವಿಮಾನಗಳಲ್ಲಿ ಒಂದು ಎನ್ನಲಾಗಿದೆ. 1954ರಲ್ಲಿ ಮೊದಲ ಬಾರಿಗೆ ಯಶಸ್ವಿ ಹಾರಾಟ ನಡೆಸಿದ್ದ ಈ ಹೆವಿ ಬಾಂಬರ್, ಮೂಲತಃ ಸೋವಿಯತ್ ಒಕ್ಕೂಟದೊಂದಿಗಿನ ಯುದ್ಧಕ್ಕಾಗಿ ಡಿಸೈನ್​ ಮಾಡಲಾಗಿತ್ತು,(ಏಜೆನ್ಸೀಸ್).