PM Modi In Australia | ಭಾರತಕ್ಕೆ ಆಸ್ಟ್ರೇಲಿಯಾ ಯುರೇನಿಯಂ!
ಮೆಲ್ಬೋರ್ನ್: ಭಾರತದ ಶುದ್ಧ ಇಂಧನ ಗುರಿಗಳಿಗೆ ಭಾರಿ ಬೆಂಬಲ ಸಿಕ್ಕಿದ್ದು, ಆಸ್ಟ್ರೇಲಿಯಾವು ಭಾರತಕ್ಕೆ ಯುರೇನಿಯಂ ಪೂರೈಸಲು ಸಮ್ಮತಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi In Australia) ಹಾಗೂ ಅಲ್ಲಿನ ಪ್ರಧಾನಿ ಆಂಥೋನಿ ಆಲ್ಬನೀಸ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಅಣುಶಕ್ತಿ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆಗೆ ಸಂಬಂಧಿಸಿದಂತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮೆಲ್ಬೋರ್ನ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಅಣುಶಕ್ತಿ ಒಪ್ಪಂದವು ಭಾರತದ ಶುದ್ಧ ಇಂಧನ ಗುರಿಗೆ ಹೊಸ ವೇಗ ಮತ್ತು ಶಕ್ತಿಯನ್ನು ನೀಡಲಿದೆ. ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿನ ಸಹಕಾರವು ನಮ್ಮ ಆಯಕಟ್ಟಿನ ಭದ್ರತೆ ಮತ್ತು ಇಂಧನ ಬದಲಾವಣೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಉಭಯ ದೇಶಗಳು ಜಂಟಿಯಾಗಿ ನಿರ್ಣಾಯಕ ಖನಿಜ ಕಾರಿಡಾರ್ ನಿರ್ಮಿಸಲು ಕೆಲಸ ಮಾಡಲಿವೆ ಎಂದು ತಿಳಿಸಿದರು.
ರಾಜತಾಂತ್ರಿಕತೆಯಲ್ಲಿ ಕ್ರಿಕೆಟ್ ಹೋಲಿಕೆ
ಜಗತ್ತಿನ ಕ್ರೀಡಾ ರಾಜಧಾನಿ ಮೆಲ್ಬೋರ್ನ್‌ನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಕ್ರಿಕೆಟ್ ಉದಾಹರಣೆ ನೀಡಿದರು. ಭಾರತ-ಆಸ್ಟ್ರೇಲಿಯಾ ಸಂಬಂಧದಲ್ಲಿ ಕ್ರಿಕೆಟ್ ಎಂಬುದು ಒಂದು ರಾಜತಾಂತ್ರಿಕ ಭಾಷೆ. ನಮ್ಮ ಸಭೆಗಳು ಕ್ರಿಕೆಟ್ ಪಂದ್ಯದಂತಿವೆ. ನಮ್ಮ ಕಾರ್ಯಸೂಚಿ ಏಕದಿನ ಪಂದ್ಯದಂತೆ ಸ್ಪಷ್ಟವಾಗಿದೆ, ನಿರ್ಧಾರಗಳು ಟಿ20 ಪಂದ್ಯದಂತೆ ವೇಗವಾಗಿವೆ ಮತ್ತು ನಮ್ಮ ಸಹಭಾಗಿತ್ವವು ಟೆಸ್ಟ್ ಪಂದ್ಯದಷ್ಟೇ ಸುದೀರ್ಘವಾದದ್ದು ಎಂದು ಬಣ್ಣಿಸಿದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಉಭಯ ದೇಶಗಳು ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸಲಿದ್ದು, ಇದು ಕ್ರೀಡಾ ಕ್ಷೇತ್ರದ ಹೂಡಿಕೆಗೆ ಹೊಸ ಬಾಗಿಲು ತೆರೆಯಲಿದೆ ಎಂದರು. ಇಂಡಿಯಾ-ಆಸ್ಟ್ರೇಲಿಯಾ ಸಿಇಒ ಫೋರಂ ಮತ್ತು ಆರ್ಥಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ, ಪ್ರಸ್ತುತ ಜಗತ್ತು ಪೂರೈಕೆ ಸರಪಳಿ ವ್ಯತ್ಯಯ ಮತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದಂತಹ ವಿಶ್ವಸನೀಯ ಪಾಲುದಾರರು ಒಟ್ಟಾಗಿ ಮುನ್ನಡೆಯುವುದು ಅಗತ್ಯ ಎಂದು ಉದ್ಯಮಿಗಳಿಗೆ ಕರೆ ನೀಡಿದರು.
ಸಾಂಸ್ಕೃತಿಕ ಮೆರುಗು ಹಾಗೂ ವಂದೇ ಮಾತರಂ
ಆಸ್ಟ್ರೇಲಿಯಾಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಭಾರತೀಯ ಮೂಲದ ಜನರು ಅದ್ಧೂರಿಯಾಗಿ ಸ್ವಾಗತಿಸಿದರು. ಆಸ್ಟ್ರೇಲಿಯನ್-ಇಂಡಿಯನ್ ಆರ್ಕೆಸ್ಟ್ರಾ ಪ್ರಸ್ತುತಪಡಿಸಿದ ಮಾ ತುಝೇ ಸಲಾಮ್ ಹಾಗೂ ವಂದೇ ಮಾತರಂ ಗೀತೆಯ ವೈಭವದ ಪ್ರದರ್ಶನವನ್ನು ಮೋದಿ ಶ್ಲಾಘಿಸಿದರು. ಆಸ್ಟ್ರೇಲಿಯಾದ ಸಾಂಪ್ರದಾಯಿಕ ಡಿಡ್ಗೆರಿಡೂ ಮತ್ತು ಭಾರತದ ತಬಲಾ ಜುಗಲ್ಬಂದಿ ಕಾರ್ಯಕ್ರಮವು ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸಿತು(ಏಜೆನ್ಸೀಸ್).