ವಾಷಿಂಗ್ಟನ್: ಇಂದು ರಾತ್ರಿ ಇಡೀ ಇರಾನ್ ನಾಗರಿಕತೆಯನ್ನೇ ನಾಶಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್(Donald Trump), ಇರಾನ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ಆಧಾರದ ಮೇಲೆ ಇಂದು ರಾತ್ರಿ ಇರಾನ್ ಮೇಲೆ ನಡೆಸಲು ಉದ್ದೇಶಿಸಿರುವ ವಿನಾಶಕಾರಿ ದಾಳಿಯನ್ನು ತಡೆ ಹಿಡಿಯುವಂತೆ ವಿನಂತಿಸಿದ್ದು, ಹಾರ್ಮುಜ್ ಜಲಸಂಧಿಯ ಸಂಪೂರ್ಣ ಮತ್ತು ತಕ್ಷಣದ ಮತ್ತು ಸುರಕ್ಷಿತ ತೆರೆಯುವಿಕೆಗೆ ಇರಾನ್ ಒಪ್ಪಿಕೊಂಡರೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
ಇದು ದ್ವಿಪಕ್ಷೀಯ ಕದನ ವಿರಾಮ ಆಗಿದ್ದು, ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ. ಇರಾನ್‌ನೊಂದಿಗೆ ದೀರ್ಘಾವಧಿಯ ಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದದೊಂದಿಗೆ ಬಹಳ ದೂರದಲ್ಲಿದ್ದೇವು. ಇರಾನ್‌ನಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ಅದು ಮಾತುಕತೆ ನಡೆಸಲು ಕಾರ್ಯಸಾಧ್ಯವಾದ ಆಧಾರವಾಗಿದೆ.ಹಿಂದಿನ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಜೊತೆ ಕದನ ವಿರಾಮ ಒಪ್ಪಿಕೊಂಡ ಇರಾನ್
ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ನಿಮಿಷಗಳಲ್ಲಿ, ಇರಾನ್ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿದ್ದು, ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಇರಾನ್ ವಿರುದ್ಧದ ದಾಳಿಗಳನ್ನು ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ ಎಂದು ಹೇಳಿದ್ದಾರೆ.
ಆತ್ಮೀಯ ಸಹೋದರರಾದ ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವರು ಮಾಡಿದ ಅವಿರತ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ (ಏಜೆನ್ಸೀಸ್).