ಸಾಂದರ್ಭಿಕ ಚಿತ್ರ 
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಯುಎಇ ಟ್ಯಾಂಕರ್‌ಗಳ ಮೇಲೆ ದಾಳಿ; ಓರ್ವ ಭಾರತೀಯ ಸಾವು, 6 ಮಂದಿಗೆ ಗಾಯ | Strait of Hormuz

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಇರಾನ್-ಯುಎಸ್​ ನಡುವೆ ಸಂಘರ್ಷ ಮುಂದುವರೆದಿದ್ದು, ಇರಾನ್ ಮೇಲೆ ಅಮೆರಿಕ ನಡೆಸಿದ ಭೀಕರ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ(Strait of Hormuz) ಎರಡು ಯುಎಇ ರಾಷ್ಟ್ರೀಯ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಮಂಗಳವಾರ(ಜು. 14) ವರದಿಯಾಗಿದೆ.
ಇರಾನ್ ದಾಳಿಯನ್ನು ಖಂಡಿಸಿರುವ ಯುಎಇ ರಕ್ಷಣಾ ಸಚಿವಾಲಯ, ಇದು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ತಿಳಿಸಿದೆ. ಕ್ಷಿಪಣಿ ದಾಳಿಯು ಎರಡೂ ಟ್ಯಾಂಕರ್‌ಗಳಲ್ಲಿ ಬೆಂಕಿಯನ್ನು ಹೊತ್ತಿಸಿತು. ಆದಾಗ್ಯೂ, ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಒಮಾನಿ ಪ್ರಾದೇಶಿಕ ನೀರಿನಲ್ಲಿ ಜಲಸಂಧಿಯ ದಕ್ಷಿಣ ಲೇನ್ ಮೂಲಕ ಪ್ರಯಾಣಿಸುತ್ತಿದ್ದಾಗ ಮೊಂಬಾಸಾ ಮತ್ತು ಅಲ್ ಬಹಿಯಾ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ತಿಳಿಸಿದೆ. ಮೃತ ಭಾರತೀಯ ಪ್ರಜೆ ಮೊಂಬಾಸಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆರು ಭಾರತೀಯರು ಮತ್ತು ಇಬ್ಬರು ಉಕ್ರೇನಿಯನ್ನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಯಾವುದೇ ಬೆದರಿಕೆಗಳನ್ನು ಎದುರಿಸಲು ಸಚಿವಾಲಯವು ಅತ್ಯುನ್ನತ ಮಟ್ಟದ ಸಿದ್ಧತೆ ಮತ್ತು ಸನ್ನದ್ಧತೆಯಲ್ಲಿದೆ. ಮತ್ತು ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವಾಲಯ ಹೇಳಿದೆ.

ಇರಾನ್ ಮೇಲೆ ಅಮೆರಿಕ ದಾಳಿ

ಇನ್ನೂ ಇರಾನ್ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದ್ದು, ಇರಾನ್ ಅನ್ನು ಗುರಿಯಾಗಿಸಿಕೊಂಡು ಅಮೆರಿಕದ ಪಡೆಗಳು ಮತ್ತೊಂದು ಸರಣಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿವೆ. ಈ ದಾಳಿಗಳು ಇರಾನಿನ ಪಡೆಗಳ ಮೇಲೆ ಭಾರೀ ವೆಚ್ಚವನ್ನು ಹೇರುವುದನ್ನು ಮುಂದುವರಿಸುತ್ತವೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಮುಗ್ಧ ನಾಗರಿಕರು ಮತ್ತು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವ ಅವರ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂದು ತಿಳಿಸಿದೆ.

ಹೊರ್ಮುಜ್ ಜಲಸಂಧಿ ನಿಯಂತ್ರಣ

ಹೊರ್ಮುಜ್ ಜಲಸಂಧಿ ನಿಯಂತ್ರಣಕ್ಕಾಗಿ ಅಮೆರಿಕ-ಇರಾನ್ ಸಂಘರ್ಷ ನಡೆಸುತ್ತಿದ್ದು, ಇರಾನ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ ಬೆನ್ನಲ್ಲೇ, ನಾವು ಇರಾನಿನ ಎಲ್ಲಾ ಆಕ್ರಮಣಕಾರಿ ಸಾಮರ್ಥ್ಯವನ್ನು ಹೊಡೆದೋಡಿಸುತ್ತಿದ್ದೇವೆ. ಮತ್ತು ನಾವೇ ಜಲಸಂಧಿಯನ್ನು ನಿಯಂತ್ರಿಸುತ್ತಿದ್ದೇವೆ. ದಿಗ್ಬಂಧನವನ್ನು ತೆಗೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ (ಏಜೆನ್ಸೀಸ್).