ಇರಾನ್ ದಾಳಿಗೆ ಮೃತರಾದ ಬಿಹಾರದ ಅಶೀಶ್ ಕುಮಾರ್ ಮತ್ತು ರಾಜಸ್ಥಾನದ ದಿಲೀಪ್ ಸಿಂಗ್
- ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ಇರಾನ್ ದಾಳಿ
- ಟ್ಯಾಂಕರ್ನಲ್ಲಿದ್ದ ಇಬ್ಬರು ಭಾರತೀಯರು ಸಾವು
- ಮೃತರನ್ನು ಬಿಹಾರದ ಅಶೀಶ್ ಕುಮಾರ್ ಮತ್ತು ರಾಜಸ್ಥಾನದ ದಿಲೀಪ್ ಸಿಂಗ್ ಎಂದು ಗುರುತಿಸಲಾಗಿದೆ
ಟೆಹ್ರಾನ್: ದಿನ ಕಳೆದಂತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರತೆ ಹೆಚ್ಚುತ್ತಿದ್ದು, ಸ್ಕೈಲೈಟ್ ಎಂಬ ತೈಲ ಟ್ಯಂಕರ್ಗೆ ಇರಾನ್ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರು ಸಾವನ್ನಪ್ಪಿದ್ದಾಗಿ (Indians killed) ಮಾಹಿತಿ ಲಭ್ಯವಾಗಿದೆ.
ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್ ಅಶೀಶ್ ಕುಮಾರ್ ಮತ್ತು ರಾಜಸ್ಥಾನದ ದಿಲೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಫೆಬ್ರುವರಿ 22 ರಂದು ಹಾರ್ಮುಜ್ ಜಲಸಂಧಿ ಹತ್ತಿರ ತಲುಪಿದ್ದು, ಇರಾನ್ ಜಲಸಂಧಿಯನ್ನು ಬಂದ್ ಮಾಡಿದ ನಂತರ ಅಲ್ಲಿಯೇ ನಿಂತಿದೆ.
ರಿಪಬ್ಲಿಕ್ ಆಫ್ ಪಲಾವ್ (Republic of Palau) ನ ಬಾವುಟ ಹಾರಿಸಿಕೊಂಡು ನಿಂತಿದ್ದ ಟ್ಯಾಂಕರ್ ಮೇಲೆ ಇರಾನಿನ ಮಿಸೈಲ್ ಬಡಿದ ಪರಿಣಾಮ ಈ ಸಾವು-ನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಟ್ಯಾಂಕರ್ನಲ್ಲಿದ್ದ 20 ಜನರಲ್ಲಿ 15 ಜನ ಭಾರತೀಯ ಮೂಲದವರಾಗಿದ್ದು, 5 ಜನ ಇರಾನಿನ ಪ್ರಜೆಗಳೆಂದು ತಿಳಿದು ಬಂದಿದೆ. ಇರಾನಿನ ಈ ದಾಳಿ ಮಾರ್ಚ್. 1 ರಂದು ನಡೆದಿದೆ ಎಂದು ಓಮನ್ ಕಡಲ ಭದ್ರತಾ ಕೇಂದ್ರ ಮಾಹಿತಿ ಹಂಚಿಕೊಂಡಿತ್ತು.
ಹಾರ್ಮುಜ್ ದಾಟಲು ನಾವು ಬಿಡುವುದಿಲ್ಲ!
ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಈ ಸಂಘರ್ಷವು ಐದನೇ ದಿನ ತಲುಪಿದ್ದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ಜಾಗತಿಕ ತೈಲ ಮಾರುಕಟ್ಟೆಯನ್ನು ಬುಡಮೇಲು ಮಾಡುವ ಯೋಜನೆ ರೂಪಿಸಿ ಕುಳಿತಿದೆ. ತನ್ನ ಮಿತ್ರ ದೇಶ ಚೀನಾದ ಹಡಗುಗಳನ್ನು ಹೊರತು ಪಡಿಸಿ ಬೇರೇ ಯಾವುದೇ ದೇಶದ ಸಾಗಣಾ ವಾಹನಗಳು ಹಾರ್ಮುಜ್ ಜಲಸಂಧಿಯನ್ನು ದಾಟದಂತೆ ಇರಾನ್ ತಾಕೀತು ಮಾಡಿದ್ದು, ಇದನ್ನು ಉಲ್ಲಂಘಿಸುವ ದೇಶದ ವಾಹಕಗಳನ್ನು ಹೊಡೆದುರಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ನಾವು ರಕ್ಷಣೆ ನೀಡುತ್ತೇವೆ
ಈ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣ ಜಾಗತಿಕ ವ್ಯಾಪಾರ-ವ್ಯವಹಾರದ ಮೇಲೆ ಪೆಟ್ಟು ಬೀಳುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಗತ್ಯ ಬಿದ್ದರೆ ಅಮೆರಿಕದ ನೌಕಾಪಡೆಯನ್ನು ಮತ್ತು ಯುದ್ಧನೌಕೆಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಇಳಿಸುವುದಾಗಿ ಅವರು ಹೇಳಿದ್ದಾರೆ,(ಏಜನ್ಸೀಸ್).